ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ
ಮೈಸೂರು

ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

July 9, 2019

ಬೆಂಗಳೂರು, ಜು. 8(ಎಸಿಪಿ)-ಮೈತ್ರಿ ಪಕ್ಷದ 14 ಶಾಸಕರ ರಾಜೀನಾಮೆ ಹಾಗೂ ಇಬ್ಬರು ಪಕ್ಷೇತರರು ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದ್ದು, ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾಳೆ (ಜು. 9) ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇಂದು ಸಂಜೆ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿರು ವುದರಿಂದ ನಮ್ಮ ಸಂಖ್ಯೆ 107 ಆಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಬಲ 103ಕ್ಕೆ ಕುಸಿದಿದೆ.

ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾನ-ಮರ್ಯಾದೆ ಇದ್ದರೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಘೋಷಿಸಿದರು. ಇದಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆ ನಡೆಸಿದ ಯಡಿಯೂರಪ್ಪ, ನಮ್ಮ ವನವಾಸ ಮುಗಿದಿದೆ. ಸದ್ಯದಲ್ಲೇ ಕತ್ತಲೆ ಸರಿದು ಬೆಳಕು ಹರಿಯಲಿದೆ ಎಂದು ಹೇಳಿದ್ದಲ್ಲದೇ, ಯಾರೂ ರಿವರ್ಸ್ ಆಪರೇಷನ್‍ಗೆ ಒಳಗಾಗಬೇಡಿ ಎಂದು ಮನವಿ ಮಾಡಿದರು. ಈ ವೇಳೆ ಶಾಸಕರನ್ನುದ್ದೇಶಿಸಿ ‘ನಿಮಗ್ಯಾರಿಗಾದರೂ ರಿವರ್ಸ್ ಆಪರೇಷನ್ ಅನುಭವ ಆಗಿದೆಯೇ? ರೆಸಾರ್ಟ್‍ಗೆ ಹೋಗಬೇಕೆ?’ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದು, ‘ನಮಗ್ಯಾರಿಗೂ ರಿವರ್ಸ್ ಆಪರೇಷನ್ ಅನುಭವ ಆಗಿಲ್ಲ. ರೆಸಾರ್ಟ್‍ಗೆ ಹೋಗುವ ಅವಶ್ಯಕತೆ ಇಲ್ಲ’ ಎಂದು ಶಾಸಕರು ಒಕ್ಕೋರಲಿನಿಂದ ಹೇಳಿದ್ದಾರೆ. ಹಾಗಾದರೆ ಎಲ್ಲರೂ ಬೆಂಗಳೂರಿನಲ್ಲೇ ಇರಿ. ನಾಳೆ ವಿಧಾನಸಭಾಧ್ಯಕ್ಷರು ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಏನು ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣ. ನಾಳೆ ಸಂಜೆ 5 ಗಂಟೆಗೆ ಮತ್ತೆ ಶಾಸಕಾಂಗ ಪಕ್ಷದ ಸಭೆ ಸೇರೋಣ ಎಂದು ಯಡಿಯೂರಪ್ಪ ಹೇಳಿದರು ಎನ್ನಲಾಗಿದೆ.

 

Translate »