ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ
ಮೈಸೂರು

ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ

July 9, 2019

ಬೆಂಗಳೂರು,ಜು.8(ಎಸಿಪಿ)-ಆಪರೇಷನ್ ಕಮಲದಿಂದ ತಪ್ಪಿಸಿ ಕೊಳ್ಳಲು ಜೆಡಿಎಸ್ ಶಾಸಕರು ರೆಸಾರ್ಟ್ ವಾಸ್ತವ್ಯದ ಮೊರೆ ಹೋಗಿದ್ದಾರೆ. ದೇವನಹಳ್ಳಿ ಸಮೀಪದ ಪ್ರಿಸ್ಟೇಜ್ ಗಾಲ್ಫ್ ಕ್ಲಬ್ ರೆಸಾರ್ಟ್‍ನಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಇಂದು ಬೆಳಿಗ್ಗೆ ಶಾಸಕರ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಯಾವುದೇ ಶಾಸಕರು ಮತ್ತೆ ರಾಜೀನಾಮೆ ನೀಡದಂತೆ ನಿಗಾ ವಹಿಸುವ ಸಲುವಾಗಿ ರೆಸಾರ್ಟ್‍ಗೆ ತೆರಳಲು ಸೂಚನೆ ನೀಡಿದರು. ಮೊದಲಿಗೆ ಕುಶಾಲನಗರ ಬಳಿಯ ರೆಸಾರ್ಟ್‍ವೊಂದರಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿ 30 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಶಾಸಕರನ್ನು ಕರೆದೊಯ್ಯಲು ಓಲ್ವಾ ಬಸ್‍ನ್ನು ತಾಜ್ ವೆಸ್ಟೆಂಡ್ ಹೋಟೆಲ್‍ಗೆ ತರಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ವೇಳೆಗೆ ಶಾಸಕರ ಪ್ರಯಾಣಕ್ಕೆ ಸಮಯ ನಿಗಧಿಪಡಿಸಲಾಗಿತ್ತು. ಆದರೆ ಹಠಾತ್ತನೇ ನಿರ್ಧಾರ ಬದಲಿಸಿ ಶಾಸಕರನ್ನು ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲೇ ಉಳಿದುಕೊಳ್ಳುವಂತೆ ತಿಳಿಸಿ ಬಸ್ಸನ್ನು ವಾಪಸ್ ಕಳುಹಿಸಲಾಯಿತು. ಸಂಜೆ ವೇಳೆಗೆ ಮತ್ತೆ ತನ್ನ ನಿರ್ಧಾರ ಬದಲಿಸಿದ ಕುಮಾರಸ್ವಾಮಿ, ಶಾಸಕರು ಕೊಡಗಿಗೆ ಹೋಗುವುದು ಬೇಡ ಬೆಂಗಳೂರಿಗೆ ಸಮೀಪದಲ್ಲೇ ವಾಸ್ತವ್ಯ ಹೂಡಲಿ ಎಂದು ತಿಳಿಸಿದ ಹಿನ್ನೆಲೆಯಲ್ಲಿ ದೇವನಹಳ್ಳಿ ಸಮೀಪದ ಪ್ರಿಸ್ಟೇಜ್ ಗಾಲ್ಫ್ ಕ್ಲಬ್ ರೆಸಾರ್ಟ್‍ನಲ್ಲಿ 38 ಕೊಠಡಿಗಳನ್ನು ಕಾಯ್ದಿರಿಸಿ ಮತ್ತೆ ಬಸ್ ವಾಪಸ್ ತರಿಸಲಾಯಿತು. ಸಂಜೆ 7.30ರ ಸುಮಾರಿನಲ್ಲಿ ಜೆಡಿಎಸ್ ಶಾಸಕರು ತಾಜ್ ವೆಸ್ಟೆಂಡ್ ಹೋಟೆಲ್‍ನಿಂದ ರೆಸಾರ್ಟ್‍ಗೆ ಪ್ರಯಾಣ ಬೆಳೆಸಿದರು.

Translate »