ಮೈಸೂರಿನ ರಂಗಕರ್ಮಿ ಮುದ್ದುಕೃಷ್ಣ, ಪತ್ನಿ CFTRI ವಿಜ್ಞಾನಿ ಡಾ.ಡಿ.ಇಂದ್ರಾಣಿ ದಾರುಣ ಸಾವು
Uncategorized, ಮೈಸೂರು

ಮೈಸೂರಿನ ರಂಗಕರ್ಮಿ ಮುದ್ದುಕೃಷ್ಣ, ಪತ್ನಿ CFTRI ವಿಜ್ಞಾನಿ ಡಾ.ಡಿ.ಇಂದ್ರಾಣಿ ದಾರುಣ ಸಾವು

July 9, 2019

ಮೈಸೂರು, ಜು. 8(ಆರ್‍ಕೆ)- ಉತ್ತರ ಪ್ರದೇಶದ ಲಕ್ನೋ ದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೈಸೂರಿನ ಖ್ಯಾತ ಹಿರಿಯ ರಂಗಕರ್ಮಿ ಮುದ್ದುಕೃಷ್ಣ(68) ಹಾಗೂ ಪತ್ನಿ, ಸಿಎಫ್‍ಟಿಆರ್‍ಐ ವಿಜ್ಞಾನಿ ಡಾ.ಡಿ.ಇಂದ್ರಾಣಿ ಅವರು ಸಾವನ್ನಪ್ಪಿದ್ದಾರೆ.

ಲಕ್ನೋ ನಗರದ ಕಿನ್‍ಜಾರ್ಜ್ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ದಂಪತಿಯ ದೇಹ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷಾ ಪಕ್ರಿಯೆ ಪೂರ್ಣಗೊಂಡ ನಂತರ ನಾಳೆ(ಜು.9) ಮಧ್ಯಾಹ್ನದೊಳಗಾಗಿ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲಾಗುವುದು ಎಂದು ಮುದ್ದು ಕೃಷ್ಣ ಅವರ ಆಪ್ತ ವಲಯ `ಮೈಸೂರು ಮಿತ್ರ’ನಿಗೆ ತಿಳಿಸಿದೆ.

ಲಕ್ನೋದಲ್ಲಿರುವ ಸಿಎಫ್‍ಟಿಆರ್‍ಐ ಹಿರಿಯ ಅಧಿಕಾರಿ ಗಳು ಅಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲಾಡಳಿತದ ಸಹಾಯದಿಂದ ಮರಣೋತ್ತರ ಪರೀಕ್ಷೆ ನಡೆಸಿ ವಿಮಾನದಲ್ಲಿ ಬೆಂಗಳೂರಿಗೆ ಪಾರ್ಥಿವ ಶರೀರ ವನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮೈಸೂರಿನ ಸಿಎಫ್‍ಟಿಆರ್‍ಐ ಸಹೋದ್ಯೋಗಿಗಳೂ ಬೆಂಗಳೂರಿನಿಂದ ಮೃತದೇಹಗಳನ್ನು ತರಲು ಸಕಲ ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಲಕ್ನೋ ಜಿಲ್ಲಾಡಳಿತ ದೊಂದಿಗೆ ಸಂಪರ್ಕ ಸಾಧಿಸಿ, ಸಕಲ ವ್ಯವಸ್ಥೆ ಮಾಡು ವಂತೆ ಕೇಳಿಕೊಂಡಿದ್ದಾರೆ. ಮೈಸೂರಿನ ನಿವೇದಿತ ನಗರದ ಮುದ್ದುಕೃಷ್ಣ ದಂಪತಿ, ಶುಕ್ರವಾರವಷ್ಟೇ ಲಕ್ನೋಗೆ ತೆರಳಿ ದ್ದರು. ಇಂದು(ಜು 8) ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಡಾ.ಡಿ.ಇಂದ್ರಾಣಿ ದಂಪತಿ ವಾರಣಾಸಿಗೂ ಹೋಗಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.

ಮೈಸೂರಿನಿಂದ ಶುಕ್ರವಾರ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿಮಾನದಲ್ಲಿ ಲಕ್ನೋ ತಲುಪಿದ್ದ ಮುದ್ದುಕೃಷ್ಣ ದಂಪತಿ, ಶನಿವಾರ ಮತ್ತು ಭಾನುವಾರ ಅಲ್ಲಿನ ಪ್ರೇಕ್ಷಣೀಯ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ನಂತರ ಕಾರಿನಲ್ಲಿ ತಾವು ಉಳಿದುಕೊಂಡಿದ್ದ ಗೆಸ್ಟ್‍ಹೌಸ್‍ಗೆ ಹಿಂದಿರುಗುವಾಗ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಡಾ.ಇಂದ್ರಾಣಿ ಅವರು ಸ್ಥಳದಲ್ಲೇ ಸಾವನ್ನ ಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ಮುದ್ದುಕೃಷ್ಣ ಅವರು ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಕಾರಿನ ಚಾಲ ಕನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಲಕ್ನೋ ಮೂಲಗಳಿಂದ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಿಗ್ಗೆ ರಂಗಾಯಣ ಕಲಾವಿದ ಜಯರಾಂ ಪಾಟೀಲ ಹಾಗೂ ಸಂಗಡಿಗರು ಲಕ್ನೋಗೆ ತೆರಳಿದ್ದು, ಪಾರ್ಥಿವ ಶರೀರಗಳನ್ನು ಮೈಸೂ ರಿಗೆ ತರಲು ಪ್ರಯತ್ನಿಸುತ್ತಿದ್ದಾರೆ.

ಮುದ್ದುಕೃಷ್ಣ ದಂಪತಿಯ ಇಬ್ಬರು ಪುತ್ರರೂ ವಿದೇಶಿಯರನ್ನು ವಿವಾಹವಾಗಿ, ಅಲ್ಲಿಯೇ ನೆಲೆಸಿದ್ದಾರೆ. ಇಂಡಿಯನ್ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಮುದ್ದುಕೃಷ್ಣ, 15 ವರ್ಷಗಳ ಹಿಂದೆಯೇ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ `ಮೈಸೂರು ಸಮುದಾಯ’ ಸಂಸ್ಥೆ ಕಟ್ಟಿಕೊಂಡು ಆ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು.

ಅದೇ ರೀತಿ `ಸಿನಿಮಾ ಕ್ಲಬ್’ ರಚಿಸಿ ವಿದ್ಯಾರ್ಥಿಗಳಿಗೆ ‘ಸಂಚಾರ ಸಿನಿಮಾ’ಗಳ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದರು. ಪರಿಸರ ಪ್ರೇಮಿಯಾದ ಅವರು, ಪ್ರತೀ ದಿನ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆ ಮಾಡುತ್ತಿದ್ದರು. ರಂಗಾಯಣ, ಕಲಾಮಂದಿರದಲ್ಲಿ ನಡೆಯುತ್ತಿದ್ದ ನಾಟಕಗಳು, ಸಾಂಸ್ಕøತಿಕ ಕಾರ್ಯಕ್ರಮಗಳ ಮೇಲ್ವಿಚಾರಣೆ ಮಾಡುತ್ತಿದ್ದರು.

ಮೈಸೂರಿನ ಸಿಎಫ್‍ಟಿಆರ್‍ಐನ ಫ್ಲೋರ್ ಮಿಲ್ಲಿಂಗ್, ಬೇಕಿಂಗ್ ಅಂಡ್ ಕನ್‍ಸೆಕ್ಷನರಿ ಟೆಕ್ನಾಲಜಿ ವಿಭಾಗದ ಪ್ರಿನ್ಸಿಪಾಲ್ ಟೆಕ್ನಿಕಲ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ.ಡಿ.ಇಂದ್ರಾಣಿ ಅವರು, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದರು. 25 ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಡಾ.ಇಂದ್ರಾಣಿ ಅವರು 50ಕ್ಕೂ ಹೆಚ್ಚು ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಸಿಎಫ್‍ಟಿಆರ್‍ಐನಲ್ಲಿ ಎಲ್ಲಾ ಸಹೋದ್ಯೋಗಿ ಮಿತ್ರರೊಂದಿಗೆ ಪ್ರೀತಿ-ವಿಶ್ವಾಸದಿಂದಿದ್ದ ಅವರು ಸದಾ ಸಂಶೋಧನೆಯಲ್ಲಿ ನಿರತರಾಗಿರುತ್ತಿದ್ದರು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Translate »