9 ಬಿಜೆಪಿ ಬಂಡಾಯ ಅಭ್ಯರ್ಥಿಗಳ ಅಮಾನತ್ತು
ಚಾಮರಾಜನಗರ

9 ಬಿಜೆಪಿ ಬಂಡಾಯ ಅಭ್ಯರ್ಥಿಗಳ ಅಮಾನತ್ತು

August 27, 2018

ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿ ಸಿರುವ ಪಕ್ಷದ 9 ಮುಖಂಡರನ್ನು ಅಮಾನತ್ತುಗೊಳಿಸಲಾಗಿದೆ.

ಚಾಮರಾಜನಗರ ನಗರಸಭೆಯ 17ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಸಿ.ಎ.ಬಸವಣ್ಣ, 23ನೇ ವಾರ್ಡ್‍ನಿಂದ ಸ್ಪರ್ಧಿಸುವ ಕಲ್ಯಾಣಿ ಮಂಜುನಾಥ್, ಎನ್.ಮಂಜುಳ ನಾರಾಯಣ್, 26ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ರೂಪ ಭಾನುಪ್ರಕಾಶ್, 29ನೇ ವಾರ್ಡ್ ನಿಂದ ಸ್ಪರ್ಧಿಸಿರುವ ಜೇಬಿ ಮಹದೇವಪ್ಪ, 30ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಎಂ.ಬಸವರಾಜು ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಎಸ್.ನಾಗೆಂದ್ರಸ್ವಾಮಿ ತಿಳಿಸಿದ್ದಾರೆ.

ಕೊಳ್ಳೇಗಾಲ ನಗರಭೆಯ ವಾರ್ಡ್ 9ರಿಂದ ಸ್ಪರ್ಧಿಸಿರುವ ಎಂ.ಗಿರೀಶ್, 13ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಯಮುನ ಮಧುಬಿಂದ್ರ, 18ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಆರ್.ಸುಮ ಸುಬ್ಬಣ್ಣ ಅವರನ್ನೂ ಸಹ ಬಿಜೆಪಿಯಿಂದ ಅಮಾ ನತ್ತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇವರೆಲ್ಲರೂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರು. ಪಕ್ಷದಿಂದ ಅಧಿಕೃತ ಅಭ್ಯರ್ಥಿ ಘೋಷಣೆಯಾದ ಬಳಿಕವೂ ನಾಮಪತ್ರವನ್ನು ವಾಪಸ್ ಪಡೆಯದೇ ಕಣದಲ್ಲಿ ಉಳಿದಿದ್ದಾರೆ. ಇದು ಪಕ್ಷದ ನಿರ್ಣಯಕ್ಕೆ ವಿರುದ್ಧವಾಗಿರುವುದರಿಂದ ಈ 9 ಮುಖಂಡರನ್ನು ಬಿಜೆಪಿಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ನಾಗೇಂದ್ರಸ್ವಾಮಿ ತಿಳಿಸಿದ್ದಾರೆ.

ಈ ಅಮಾನತ್ತುಗೊಂಡಿರುವ ಅಭ್ಯರ್ಥಿಗಳ ಪರವಾಗಿ ಅಥವಾ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವಾಗಿ ಕಾರ್ಯನಿರ್ವಹಿಸುವವರ ಮೇಲೆ ಪಕ್ಷ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಎಚ್ಚರಿಸಿದ್ದಾರೆ.

Translate »