ಬೇಗೂರು ಗ್ರಾಪಂನಲ್ಲಿ ಇ-ಸ್ವತ್ತು ನೀಡಿಕೆಯಲ್ಲಿ ಅವ್ಯವಹಾರ ಆರೋಪ
ಚಾಮರಾಜನಗರ

ಬೇಗೂರು ಗ್ರಾಪಂನಲ್ಲಿ ಇ-ಸ್ವತ್ತು ನೀಡಿಕೆಯಲ್ಲಿ ಅವ್ಯವಹಾರ ಆರೋಪ

August 27, 2018

ಗುಂಡ್ಲುಪೇಟೆ:  ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡಿಕೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ಜಿಲ್ಲಾ ಸಂಘಟನಾ ಸಂಚಾ ಲಕ ಎಂ.ಬಿ.ಚಿಕ್ಕಣ್ಣ ಮತ್ತು ಮುಖಂಡ ಲಿಂಗಪ್ಪ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರು ಗ್ರಾಮಪಂಚಾಯಿತಿಯಲ್ಲಿ ಇ ಸ್ವತ್ತು ನೀಡಿಕೆಯಲ್ಲಿ ರಾಜಾರೋಷವಾಗಿ ಹಣ ಪೀಕಲಾಗುತ್ತಿದೆ. ಹಲವು ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೂ ಸಹ ಇ-ಸ್ವತ್ತು ನೀಡುವುದರೊಂದಿಗೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದಕ್ಕೆ ಪಿಡಿ ನೇರ ಹೊಣೆಗಾರರಾಗಿದ್ದು, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿಗೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧದ ಗೊತ್ತುವಳಿಯಲ್ಲೂ ಸಹ ಪಿಡಿಒ ಶ್ರೀನಿವಾಸ್ ಕುಮ್ಮಕ್ಕು ನೀಡುತ್ತಿದ್ದಾರೆ. ಗ್ರಾಪಂ ನಡಾವಳಿಯ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಯಾವ ವಿಚಾರವನ್ನೂ ಸಹ ಅಧ್ಯಕ್ಷರ ಗಮನಕ್ಕೆ ತರದೇ ನಿರ್ವಹಿಸುತ್ತಿರುವುದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿ ದ್ದಾರೆ. ಈ ರೀತಿ ಅಕ್ರಮವಾಗಿ ಆಗಿರುವ ಇ ಸ್ವತ್ತುಗಳನ್ನು ರದ್ದು ಪಡಿಸಬೇಕು. ಯಾವುದೇ ಕಾರಣಕ್ಕೂ ಗ್ರಾ.ಪಂ.ಕಚೇರಿಗೆ ಆಗಮಿಸುವ ತನಿಖಾತಂಡ ಶಾಸಕರ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದ್ದಾರೆ.

Translate »