ಬೆಂಗಳೂರು, ಸೆ. 30(ಕೆಎಂಶಿ)- ಮಾಜಿ ಸಚಿವ ಹೆಚ್. ವಿಶ್ವನಾಥ್ ಸೇರಿದಂತೆ 17 ಅನರ್ಹ ಶಾಸಕರಿಗೂ ಉಪಚುನಾವಣೆ ಯಲ್ಲಿ ಸ್ಪರ್ಧಿಸಲು ಪಕ್ಷದ ವತಿಯಿಂದ ಟಿಕೆಟ್ ನೀಡಲಾಗುವುದೆಂದು ಮುಖ್ಯಮಂತ್ರಿ ಯಡಿ ಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈ ಶಾಸಕರ ಬಲವೇ ಕಾರಣ. ಇವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಅನರ್ಹ ರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಾ ಎಂಬ ಪ್ರಶ್ನೆಗೆ ಮುಖ್ಯ ಮಂತ್ರಿಯವರೇ ತೆರೆ ಎಳೆದಿದ್ದಾರೆ.
ಟಿಕೆಟ್ ನೀಡುವುದಲ್ಲದೆ, ಚುನಾವಣೆ ನಡೆಯುತ್ತಿರುವ ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲ್ಲಿಸಿಕೊಂಡು ಬರುವ ವಿಶ್ವಾಸ ವ್ಯಕ್ತಪಡಿ ಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಆಯ್ಕೆಗೊಂಡ ಈ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಭ್ರಷ್ಟ ಮೈತ್ರಿ ಸರ್ಕಾರ ವನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರು.
ಇವರಿಗೆ ನೀಡಿರುವ ಎಲ್ಲಾ ಭರವಸೆ ಗಳನ್ನು ಪಕ್ಷ ಮತ್ತು ಸರ್ಕಾರ ಈಡೇರಿಸ ಲಿದೆ. ಯಾರು ಏನೇ ಹೇಳಿಕೊಂಡರೂ ಅವರು ಆತಂಕಪಡುವ ಪ್ರಶ್ನೆಯೇ ಇಲ್ಲ. ನಡು ರಸ್ತೆಯಲ್ಲಿ ಅವರನ್ನು ಕೈ ಬಿಡುವು ದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಪ ಚುನಾವಣೆಗೆ ಬಿಜೆಪಿ ಅನರ್ಹ ರಿಗೆ ಟಿಕೆಟ್ ನೀಡುತ್ತಾ? ಎಂಬ ಪ್ರಶ್ನೆ ಎಲ್ಲ ರಲ್ಲೂ ಕಾಡಿತ್ತು. ಈ ಹಿನ್ನೆಲೆ ಈ ಸಂಶಯಕ್ಕೆ ಕೊನೆಗೂ ಸಿಎಂ ಯಡಿಯೂರಪ್ಪ ಉತ್ತರ ನೀಡಿದ್ದಾರೆ. ಎಲ್ಲ ಅನರ್ಹರಿಗೂ ಬಿಜೆಪಿ ಯಿಂದ ಟಿಕೆಟ್ ನೀಡಿ
ಗೆಲ್ಲಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇವರಿಗೆ ಬಿಜೆಪಿ ಟಿಕೆಟ್ ನೀಡುವ ಕುರಿತು ನಾನು ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧಾರ ಮಾಡಿದ್ದೇವೆ. ಈ ಕುರಿತು ಯಾವ ಗೊಂದಲವೂ ಇಲ್ಲ. ಕಣಕ್ಕಿಳಿಯುವ ಅಭ್ಯರ್ಥಿಗಳನ್ಮು ಗೆಲ್ಲಿಸುವ ಕುರಿತು ಆಯಾ ಕ್ಷೇತ್ರದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಅವರ ಗೆಲುವಿಗೆ ಶ್ರಮಿಸುತ್ತೇವೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಲವೇ ಮತಗಳ ಅಂತರದಿಂದ ಸೋತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ಹೊಣೆ ನೀಡಿ, ಅವರ ಹಿತ ಕಾಪಾಡಲಾಗುವುದು ಎನ್ನುವುದರ ಮೂಲಕ, ಅನರ್ಹರ ವಿರುದ್ಧ ಸ್ಥಳೀಯವಾಗಿ ಬಂಡಾಯ ಏಳುವುದನ್ನು ತಪ್ಪಿಸಲು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸೋತ ಅಭ್ಯರ್ಥಿಗಳನ್ನೂ ಕಡೆಗಣಿಸುವ ಪ್ರಮೇಯವೇ ಇಲ್ಲ. ಅವರನ್ನ ನಿಗಮ ಮಂಡಳಿಗೆ ನೇಮಕ ಮಾಡಿ ನ್ಯಾಯ ಕೊಡಲಾಗುವುದು. ಅಂತಹವರು ಯಾವುದೇ ಮಾತುಗಳಿಗೆ ಕಿವಿ ಕೊಡದೇ ಪಕ್ಷದ ಅಭಿವೃದ್ಧಿಗೆ ಪಕ್ಷ ನಿಲ್ಲಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು. ಉಪ ಚುನಾವಣೆಯಲ್ಲಿ ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ದೇಶಕ್ಕೆ ಒಂದು ಕಾನೂನು, ರಾಜ್ಯಕ್ಕೆ ಒಂದು ಕಾನೂನು ಮಾಡಲು ಸಾಧ್ಯವೇ? ಅವರು ಸೋತ ತಕ್ಷಣ ಈ ರೀತಿಯ ಹೇಳಿಕೆ ನೀಡಬಾರದು. ಇದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.