ಡಿ.10ರಂದು ಸರ್ಕಾರದ ವಿರುದ್ಧ  ಬಿಜೆಪಿ ಬೃಹತ್ ರೈತ ಸಮಾವೇಶ
ಮೈಸೂರು

ಡಿ.10ರಂದು ಸರ್ಕಾರದ ವಿರುದ್ಧ  ಬಿಜೆಪಿ ಬೃಹತ್ ರೈತ ಸಮಾವೇಶ

November 30, 2018

ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಡಿಸೆಂಬರ್ 10ರಂದು ಬೃಹತ್ ರೈತ ಸಮಾವೇಶ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ. ಪಕ್ಷದ ಶಾಸಕಾಂಗ ಸಭೆ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೃಷಿ ಸಾಲ ಮನ್ನಾ, ಕಬ್ಬು ಬೆಳೆಗಾರರ ಬಾಕಿ ಪಾವತಿ, ಭತ್ತ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸದಿರುವುದನ್ನು ವಿರೋಧಿಸಿ ಬೆಳಗಾವಿಯಲ್ಲಿ ಸಮಾವೇಶ ನಡೆಸಲಾಗುವುದು ಎಂದರು.

ಮೈತ್ರಿ ಸರ್ಕಾರದಲ್ಲಿ ಭಾಗಿಯಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ವಿಧಾನಸಭಾ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಈಡೇರಿಸಿಲ್ಲ. ಸಾಲ ಮನ್ನಾ ಬಗ್ಗೆ ದಿನನಿತ್ಯ ಮುಖ್ಯಮಂತ್ರಿ ಅವರು ರೈತರ ಕಿವಿಗೆ ಹೂವಿಡುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಕೃಷಿ ಸಾಲ ಮನ್ನಾ ಮಾಡಿಲ್ಲ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇವೆಲ್ಲವೂ ಸೇರಿದಂತೆ ಸರ್ಕಾರದ ಗಮನ ಸೆಳೆಯಲು ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಸಭೆಯಲ್ಲಿ ಒಂದು ಲಕ್ಷ ರೈತರು ಭಾಗವಹಿಸಲಿದ್ದಾರೆ ಎಂದರು. ನಂತರ ಸಭೆಯ ನಿರ್ಣಯಗಳನ್ನು ತಿಳಿಸಿದ ಪಕ್ಷದ ವಕ್ತಾರ ಅರವಿಂದ ಲಿಂಬಾವಳಿ, ಡಿಸೆಂಬರ್ 3, 4 ಮತ್ತು 5ರಂದು ಬಿಜೆಪಿಯ ಆರು ತಂಡಗಳು ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಕೊಡಗು ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಹಾನಿಗೆ ಕೇಂದ್ರ ಬಿಡುಗಡೆ ಮಾಡಿದ ಆರ್ಥಿಕ ನೆರವಿನ ಬಳಕೆ ಕುರಿತು ಅಧ್ಯಯನ ನಡೆಸಲಿದೆ ಎಂದರು. ಒಂದೊಂದು ತಂಡಗಳ ನೇತೃತ್ವವನ್ನು ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್, ಶ್ರೀನಿವಾಸ ಪೂಜಾರ್, ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಸದಾನಂದಗೌಡ ಅವರುಗಳು ವಹಿಸಲಿದ್ದಾರೆ.

Translate »