ಲೋಕಸಭಾ ಚುನಾವಣೆಗೆ 28 ಕ್ಷೇತ್ರಕ್ಕೂ ಬಿಜೆಪಿ ಸಂಭವನೀಯರ ಪಟ್ಟಿ ರೆಡಿ
ಮೈಸೂರು

ಲೋಕಸಭಾ ಚುನಾವಣೆಗೆ 28 ಕ್ಷೇತ್ರಕ್ಕೂ ಬಿಜೆಪಿ ಸಂಭವನೀಯರ ಪಟ್ಟಿ ರೆಡಿ

June 26, 2018

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ 28 ಲೋಕ ಸಭಾ ಕ್ಷೇತ್ರಗಳಿಗೂ ಸಂಭವನೀಯ ಪಟ್ಟಿ ಅಂತಿಮಗೊಳಿಸಿದೆ.

ರಾಜ್ಯ ಮುಖಂಡರು ಆರ್‍ಎಸ್‍ಎಸ್ ನಾಯಕರೊಟ್ಟಿಗೆ ಚುನಾವಣೆ ಸಂಬಂಧ ಸುದೀರ್ಘ ಚರ್ಚೆ ನಡೆಸಿ, ಅಭ್ಯರ್ಥಿ ಗಳ ಆಯ್ಕೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.

ಬಹುತೇಕ ಹಾಲಿ ಸಂಸದರಿಗೆ ಮತ್ತೆ ಚುನಾವಣೆಗೆ ಸ್ಪರ್ಧಿ ಸಲು ಅವಕಾಶ ನೀಡಿದ್ದು, ಕಳೆದ ಚುನಾವಣೆಯಲ್ಲಿ ಜಯ ಗಳಿಸದ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗೆ ಒತ್ತು ನೀಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ 17 ಸಂಸದರು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಅಷ್ಟೂ ಕ್ಷೇತ್ರಗಳನ್ನು ಉಳಿಸಿ ಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಬದಲಾದ ಪರಿ ಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಎರಡೂ ಪಕ್ಷಗಳು ಸಜ್ಜಾಗಿವೆ. ದೋಸ್ತಿ ಸರ್ಕಾ ರದ ಈ ನಡೆ ಬಿಜೆಪಿಯನ್ನು ತುಸು ನಿದ್ದೆಗೆಡುವಂತೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಒಂಭತ್ತು ತಿಂಗಳಿಗೂ ಮುನ್ನವೇ ಆರ್‍ಎಸ್‍ಎಸ್ ನಾಯಕರೊಟ್ಟಿಗೆ ಸಮಾಲೋಚಿಸಿ, ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಪ್ರವಾಸ ಕೈಗೊಂಡು ಚುನಾವಣಾ ಸಿದ್ಧತೆಗೆ ಸಂಬಂಧಿ ಸಿದಂತೆ ರಾಜ್ಯ ನಾಯಕರೊಟ್ಟಿಗೆ ಸಮಾಲೋಚಿ ಸಲಿದ್ದಾರೆ. ಈ ಹಿನ್ನೆಲೆಯಲ್ಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಇವರಿಗೆ ಟಿಕೆಟ್ ನೀಡಿದರೆ, ಪಕ್ಷಕ್ಕೆ ಯಾವ ಮಟ್ಟದಲ್ಲಿ ಲಾಭವಾಗುತ್ತದೆ, ವಿಭಾಗೀಯ ಮತ್ತು ಜಾತಿ ಲೆಕ್ಕಾಚಾರಗಳನ್ನು ಅವರ ಮುಂದಿಟ್ಟು ಪಟ್ಟಿಗೆ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲವು ಹಾಲಿ ಲೋಕಸಭಾ ಸದಸ್ಯರ ಕ್ಷೇತ್ರವನ್ನು ಬದಲಾಯಿಸಲು ತೀರ್ಮಾನಿಸಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನಾಯಕರು ಮನವೊಲಿಸಿದ್ದಾರೆ.

ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವುದು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಮುನಿರಾಜು ಅವರಿಗೆ ಟಿಕೆಟ್ ನೀಡುವ ಬಗ್ಗೆ ಮಾತುಕತೆ ನಡೆದಿದೆ.

Translate »