ದೇವಾಲಯ ಗೋಪುರಗಳಿಗೆ ಕುಂಭಾಭಿಷೇಕ
ಮೈಸೂರು

ದೇವಾಲಯ ಗೋಪುರಗಳಿಗೆ ಕುಂಭಾಭಿಷೇಕ

June 26, 2018

ಮೈಸೂರು: ಚಾಮುಂಡಿಬೆಟ್ಟದ ನಾಡದೇವಿ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ಸೋಮವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಾಜಗೋಪುರ ಹಾಗೂ ವಿಮಾನ ಗೋಪುರದ ಜೀರ್ಣೋದ್ಧಾರ ಕುಂಭಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯ ಗಳು ವಿಜೃಂಭಣೆಯಿಂದ ನೆರವೇರಿದವು.

ದೇವಾಲಯದ ರಾಜಗೋಪುರ ಹಾಗೂ ವಿಮಾನಗೋಪುರದಲ್ಲಿದ್ದ ದೇವತೆಗಳ ವಿಗ್ರಹಗಳು ಗಾಳಿ, ಮಳೆ ಹಾಗೂ ಕೋತಿಗಳ ಹಾವಳಿಯಿಂದಾಗಿ ವಿರೂಪಗೊಂಡಿದ್ದವು. ಅಲ್ಲದೆ ಗೋಪುರದ ಗೋಡೆಗಳ ಮೇಲೆ ಗಿಡಗಳು ಬೆಳೆದು, ಗೋಡೆಗಳು ಶಿಥಿಲಗೊಳ್ಳುತ್ತಿದ್ದವು. ಇದರಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳ ಲಾಗಿತ್ತು. ರಾಜಗೋಪುರ, ವಿಮಾನಗೋಪುರ ಹಾಗೂ ಧ್ವಜಸ್ತಂಭದ ದುರಸ್ತಿ ಕಾರ್ಯ ಮಾಡಿಸಲು ಟಿವಿಎಸ್ ಕಂಪನಿ ಮುಂದೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷ ದಿಂದ ತಮಿಳು ನಾಡು ಮೂಲದ 70 ಮಂದಿ ನೌಕರರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ರಾಜ್ಯದಲ್ಲಿರುವ ಎಲ್ಲಾ ದೇವಾಲಯಗಳ ರಾಜಗೋಪುರ ಹಾಗೂ ವಿಮಾನಗೋಪುರವನ್ನು ಪ್ರತಿ 12 ವರ್ಷಕೊಮ್ಮೆ ದುರಸ್ಥಿ ಮಾಡಲಾಗುತ್ತದೆ. ಮುಜರಾಯಿ ಇಲಾಖೆಯಲ್ಲಿಯೇ ಈ ನಿಯಮವಿದ್ದು, ಖಾಸಗಿ ಸಹಭಾಗಿತ್ವದಲ್ಲಿ ದುರಸ್ತಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಾಲಯದ ರಾಜಗೋಪುರ ಹಾಗೂ ವಿಮಾನಗೋಪುರದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದರಿಂದ ಶುದ್ಧಿ ಮಾಡುವುದಕ್ಕಾಗಿ ಶಾಸ್ತ್ರೋಕ್ತವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ಇಂದು ನೆರವೇರಿಸಲಾಯಿತು.

ದೇವಾಲಯದ ಪ್ರಮುಖ ಆಗಮಿಕರಾದ ಡಾ.ಎನ್.ಶಶಿಶೇಖರ್ ದೀಕ್ಷಿತ್ ಸಮ್ಮುಖದಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಪೂಜಾ ಕಾರ್ಯ ನಡೆದಿದ್ದವು. ಅಂತಿಮ ದಿನವಾದ ಸೋಮವಾರ ಮುಂಜಾನೆಯಿಂದಲೇ ಜೀವನ್ಯಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠೆ, ಮೂಲ ಹೋಮ ಮಾಡಿ ಕಳಸಾರ್ಚನೆ, ನಾಡಿ ಸಂಧಾನ, ಕಲಾತತ್ವ ಹೋಮ, ಪೂರ್ಣಾಹುತಿ, ದಶ ದಾನ ಕುಂಭೋದ್ವಾಸನೆ, ಪೂಜೆ ನಡೆಯಿತು. ಬೆಳಿಗ್ಗೆ 9.55ರಿಂದ 10.10ರವರೆಗೆ ಸಲ್ಲುವ ಸಿಂಹ ಶುಭಲಗ್ನದಲ್ಲಿ ರಾಜಗೋಪುರ, ವಿಮಾನ ಗೋಪುರ ಹಾಗೂ ಧ್ವಜ ಸ್ತಂಭಗಳ ಜೀರ್ಣೋದ್ಧಾರ, ಕುಂಭಾಭಿಷೇಕ ನೆರವೇರಿಸಲಾಯಿತು. ನಂತರ ದೇವಾಲಯದ 125 ಅಡಿ ಎತ್ತರದ ರಾಜಗೋಪುರದ ಮೇಲಿರುವ ಏಳು ಕಳಸಗಳಿಗೆ, ದೇವಾಲದ ಮೇಲಿರುವ ಗರ್ಭಗುಡಿಯ ಮೇಲಿರುವ ರಾಜಗೋಪುರದ ಮೇಲಿರುವ ಕಳಸ ಹಾಗೂ ಧ್ವಜಸ್ತಂಭದ ಮೇಲೆ ಕಳಸಕ್ಕೆ ಪೂಜೆ ಸಲ್ಲಿಸಲಾಯಿತು.

ಕುಂಭಾಭಿಷೇಕ ನೆರವೇರಿದ ಬಳಿಕ ಮಹಾಮಂಗಳಾರತಿ ನಡೆಸಿ ಆಚಾರ್ಯಾದಿ ಋತ್ವಿಕ್ ಪೂಜೆ, ಯಾಗ ಫಲ ಸ್ವೀಕಾರದೊಂದಿಗೆ ಪ್ರಸಾದ ವಿನಿಯೋಗವಾಯಿತು. ಇದರಿಂದಾಗಿ ಬೆಳಿಗ್ಗೆ 9.30ರಿಂದ 11 ಗಂಟೆಯವರೆಗೂ ಭಕ್ತರಿಗೆ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಕುಂಬಾಭಿಷೇಕದ ದಿನ ನಾಡದೇವಿಯ ದರ್ಶನ ಪಡೆಯುವುದಕ್ಕಾಗಿ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ಹೊರಗೆ ನಿಂತಿದ್ದ ಭಕ್ತರು ಗೋಪುರ ಮೇಲಿನ ಕಳಸಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಎರಡು ದಿನದಿಂದ ಪೂಜೆ: ರಾಜಗೋಪುರ ಹಾಗೂ ವಿಮಾನಗೋಪುರದ ಜೀರ್ಣೋದ್ಧಾರ ಕುಂಭಾಭಿಷೇಕದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಹಾಗೂ ಭಾನುವಾರ ಮುಂಜಾನೆಯಿಂದಲೂ ವಿವಿಧ ಹೋಮ-ಹವನಗಳು ಹಾಗೂ ಪೂಜಾ ಕೈಂಕರ್ಯಗಳು ಜರುಗಿದ್ದವು. ಭಾನುವಾರ ಬೆಳಿಗ್ಗೆ 8 ಗಂಟೆಗೆ ಚಾಮುಂಡೇಶ್ವರಿ ದೇವಾಲಯದ ಆವರಣದ ಯಾಗಶಾಲಾ ಪ್ರವೇಶ ನಡೆಯಿತು. ನಂತರ ಗಣಪತಿ ಪೂಜೆ, ಪುಣ್ಯಾಹ, ಬಿಂಬ ಶುದ್ಧಿ, ನೇತ್ರೋನ್ಮಿಲನ ರಕ್ಷಾ ಬಂಧನ, ಜಲಾಧಿವಾಸ ನೆರವೇರಿಸಿ ಕಳಸ ಸ್ಥಾಪನೆ ಮಾಡಲಾಯಿತು. ನಂತರ ಅಗ್ನಿ ಪ್ರತಿಷ್ಠೆ, ಜಪ, ಪಾರಾಯಣ, ಹೋಮಗಳನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ ಮಾಡಲಾಯಿತು. ಸಂಜೆ ಕಳಸ ಪೂಜೆ, ಹೋಮ, ಶಯ್ಯಾದಿವಾಸ, ಅಷ್ಟಾವಧಾನ ಸೇವೆ, ಸ್ಪರ್ಶ ಹೋಮ, ರತ್ನಾನ್ಯಾಸ ನಡೆದಿತ್ತು. ಇಂದು ನಡೆದ ಪೂಜಾ ಕಾರ್ಯ ವೇಳೆ ದೇವಾಲಯದ ಆಡಳಿತ ಮಂಡಳಿಯ ಇಒ ಕೆ.ಎಂ.ಪ್ರಸಾದ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಾಳಯ್ಯ, ಟ್ರಸ್ಟಿಗಳಾದ ಯು.ಸಿ.ಕುಮಾರ್, ಶಶಿಕಲಾ, ಸಾಕಣ್ಣ, ಮಾಜಿ ಟ್ರಸ್ಟಿ ಉತ್ತನಹಳ್ಳಿ ಶಿವಣ್ಣ, ಮುಜರಾಯಿ ತಹಶೀಲ್ದಾರ್ ಯತಿರಾಜ್ ಸಂಪತ್‍ಕುಮಾರನ್, ಟಿವಿಎಸ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಸ್ಥಿತರಿದ್ದರು.

Translate »