ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸದಾನಂದಗೌಡ  ಸೇರಿದಂತೆ ಎಲ್ಲಾ ಹಾಲಿ 15 ಸಂಸದರಿಗೆ ಬಿಜೆಪಿ ಟಿಕೆಟ್
ಮೈಸೂರು

ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸದಾನಂದಗೌಡ ಸೇರಿದಂತೆ ಎಲ್ಲಾ ಹಾಲಿ 15 ಸಂಸದರಿಗೆ ಬಿಜೆಪಿ ಟಿಕೆಟ್

March 14, 2019

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪ್ರತಾಪ ಸಿಂಹ ಸೇರಿದಂತೆ ಎಲ್ಲಾ ಹಾಲಿ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆ. ಉಳಿದ ಕಡೆ ಬಿಜೆಪಿ ಅಭ್ಯರ್ಥಿ ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು, ಕಾಂಗ್ರೆಸ್ ತೊರೆದು ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷಕ್ಕೆ ಸೇರ್ಪಡೆಗೊಂಡಿರುವ ಉಮೇಶ್ ಜಾಧವ್ ರೀತಿಯಲ್ಲಿಯೇ ಇನ್ನೂ ಹಲವು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಎರಡು, 3 ದಿನ ಕಾದು ನೋಡಿ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ನಮಗೆ ಭಯವಿಲ್ಲ. ಅವರ ಆಂತರಿಕ ಗುದ್ದಾಟದಿಂದ ನಮಗೆ ಲಾಭವಾಗಿ 22 ಕ್ಷೇತ್ರ ಗೆಲ್ಲುವ ಗುರಿ ಮುಟ್ಟುತ್ತೇವೆ ಎಂದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಎಲ್ಲವನ್ನೂ ಈಗಲೇ ಹೇಳಲ್ಲ. ಕಾದು ನೋಡಿ ನಿಮಗೇ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ಕುತೂಹಲ ಉಂಟು ಮಾಡಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ, ದಾವಣ ಗೆರೆಯಿಂದ ಜಿ.ಎಂ. ಸಿದ್ದೇಶ್ ಸೇರಿದಂತೆ ಬಹುತೇಕ 15 ಹಾಲಿ ಸಂಸದರಿಗೆ ಟಿಕೆಟ್ ಖಚಿತ, ಉಮೇಶ್ ಜಾಧವ್ ಕಲಬುರ್ಗಿಯ ನಮ್ಮ ಅಭ್ಯರ್ಥಿ, ಬೆಂಗಳೂರು ದಕ್ಷಿಣಕ್ಕೆ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅಂತಿಮವಾಗಿದ್ದು ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆಯಷ್ಟೇ ಉಳಿದ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತು ಅಂತಿಮ ಹಂತದಲ್ಲಿದೆ. ಏನೇ ಆಗಲಿ ಇದೇ 15 ರಂದು ರಾಜ್ಯ ನಾಯಕರ ಸಭೆ ಸೇರಿ 20 ರಿಂದ 22 ಕ್ಷೇತ್ರಗಳಿಗೆ ಪಟ್ಟಿ ಸಿದ್ಧಮಾಡಿ, 16 ರಂದು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ, ಈ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮೊದಲ ಹಂತದಲ್ಲಿ ಪ್ರಕಟಿಸಲಾಗುವುದು. ಉಳಿದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲವನ್ನು ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಆ ಕ್ಷೇತ್ರಗಳಿಗೂ ಆದಷ್ಟು ಬೇಗನೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದರು. ಪ್ಧಾ

ನಿ ನರೇಂದ್ರ ಮೋದಿ ಸರ್ಕಾರದ ಸಾಧನೆ, ರಾಜ್ಯ ಮೈತ್ರಿ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎನ್ನುವ ಮೂರು ವಿಷಯಗಳನ್ನು ಜನರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಈ ಬಾರಿ ಚುನಾವಣೆ ಎದುರಿಸಲಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭಾ ಚುನಾವಣೆಗೂ ಮುನ್ನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ನಂಬಿಸಿ, 37 ಸೀಟು ಗೆದ್ದರು. ಈ ಭರವಸೆ ನೀಡದಿದ್ದರೆ, ಅವರು 22 ಅಂಕಿಯನ್ನೂ ಮುಟ್ಟುತ್ತಿರಲಿಲ್ಲ. ಅಲ್ಪ ಸಂಖ್ಯಾಬಲದಿಂದಲೇ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ರೈತರಿಗೆ ನೀಡಿದ ಭರವಸೆಯಂತೆ 24 ಗಂಟೆಗಳಲ್ಲಿ ಸಾಲ ಮನ್ನಾದ ಆದೇಶ ಹೊರಡಿಸಬೇಕಿತ್ತು.

ರೈತರ ಸಾಲಮನ್ನಾ ಭರವಸೆ ನೀಡಿ ಅಧಿಕಾರಕ್ಕೆ ಬಂದು 9 ತಿಂಗಳು ಆಡಳಿತ ಮುಗಿದಿದೆ. 46 ಸಾವಿರ ಕೋಟಿ ಸಾಲಮನ್ನಾ ಮಾಡುವ ಹೇಳಿಕೆ ನೀಡಿ ಈಗ ಕೇವಲ 4.5 ಸಾವಿರ ಕೋಟಿ ಸಾಲಮನ್ನಾ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು. 37 ಸ್ಥಾನ ಪಡೆದ ಪಕ್ಷದವರು ಮುಖ್ಯಮಂತ್ರಿ 104 ಸ್ಥಾನ ಪಡೆದವರು ಪ್ರತಿಪಕ್ಷದಲ್ಲಿದ್ದೇವೆ. ಹೋಗಲಿ ಹೊಂದಾಣಿಕೆ ಇದೆಯಾ, ಅಭಿವೃದ್ಧಿಗೆ ಆದ್ಯತೆ ನೀಡಿದ್ದೀರಾ? 160ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲವಿದೆ. ಕುಡಿಯುವ ನೀರಿಲ್ಲ, ಮೇವು ಸಮಸ್ಯೆ ಇದೆ, ಕಷ್ಟ ಕೇಳಲು ವಿಧಾನಸೌಧದಲ್ಲಿಯೂ ಯಾರೂ ಇಲ್ಲವೆಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಎಸ್‍ವೈ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯುದ್ದಕ್ಕೂ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಯಡಿಯೂರಪ್ಪ, ಪ್ರಧಾನಿಯವರ ದಿಟ್ಟ ನಿಲುವು ಭಾರತ ಬದಲಾಗಲು ಕಾರಣ. ಪುಲ್ವಾಮಾ ಘಟನೆ ಬಳಿಕ ಭಾರತವನ್ನು ಜಗತ್ತಿನ ಹಲವು ರಾಷ್ಟ್ರಗಳು ಬೆಂಬಲಿಸಿವೆ. ಭಾರತ ಜಗತ್ತಿನ ರಾಷ್ಟ್ರಗಳ ಎದುರು ಸೆಟೆದು ನಿಲ್ಲುವಂತೆ ಮೋದಿ ಮಾಡಿದ್ದಾರೆ.

ನಾಲ್ಕೂ ಮುಕ್ಕಾಲು ವರ್ಷದ ಸಾಧನೆ ನಮಗೆ ರಕ್ಷಣಾ ಕವಚ, ಹಿಂದಿನ ಸರ್ಕಾರಗಳು ಮಾಡದ ಪ್ರಗತಿ 5 ವರ್ಷದಲ್ಲಿ ಮೋದಿ ಸರ್ಕಾರ ಮಾಡಿದೆ. ಅವರ ನಾಯಕತ್ವ ಇಡೀ ವಿಶ್ವಕ್ಕೆ ಮಾದರಿ. ಅಧಿಕಾರ ಸ್ವೀಕಾರ ಮಾಡಿದಾಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈಗ ಸೋರಿಕೆ ತಡೆದ ಪರಿಣಾಮ ಇಂದು ದೇಶದ ಆರ್ಥಿಕ ಸ್ಥಿತಿ ಬದಲಾಗಿದೆ. ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ನಾವು ಫ್ರಾನ್ಸ್ ಅನ್ನು ಹಿಂದೆ ಹಾಕಿದ್ದೇವೆ. ದೇಶದ ಪ್ರಗತಿ ಅಮೆರಿಕ, ಚೀನಾಗೆ ಸಮವಾಗಿದೆ. ಪಾಕಿಸ್ತಾನವನ್ನು ಜಗತ್ತಿನ ಎಲ್ಲ ದೇಶಗಳೂ ಖಂಡಿಸಿವೆ. ಇದು ಮೋದಿಜೀ ಅವರ ರಾಜತಾಂತ್ರಿಕ ಗೆಲುವು. ಇದು ಬೆನ್ನು ಬಾಗಿಸುವ ಭಾರತವಲ್ಲ, ಸೆಟೆದು ನಿಲ್ಲುವ ಭಾರತ ಎಂದು ಮೋದಿ ಸರ್ಕಾರದ ಸಾಧನೆಯನ್ನು ಯಡಿಯೂರಪ್ಪ ಬಿಡಿಸಿಟ್ಟರು. ಹಿಂದಿನ ಸರ್ಕಾರದ ವೇಳೆ ಇದ್ದ ಸಾಲು ಸಾಲು ಹಗರಣಗಳು ಈ ಸರ್ಕಾರದಲ್ಲಿ ಇಲ್ಲ. ಹಗರಣಗಳು ಮಾಯವಾಗಿ ಹೋಗಿವೆ. ಹಗರಣ ಮುಕ್ತ ಆಡಳಿತ ಜನರನ್ನು ನಿಬ್ಬೆರಗಾಗುವಂತೆ ಮಾಡಿದೆ ಎಂದರು.

ದೇವೇಗೌಡರ ಕುಟುಂಬಕ್ಕೆ ಕಣ್ಣೀರೇ ಬ್ರಾಂಡ್: ಅಶೋಕ್

ಕಣ್ಣೀರು ದೇವೇಗೌಡರ ಕುಟುಂಬದ ಬ್ರಾಂಡ್ ಆಗಿದೆ. ಸೋಪು, ಟೀ ಪುಡಿಗೆ ಬ್ರಾಂಡ್‍ಗಳು ಇರುವಂತೆ ದೇವೇಗೌಡರ ಕುಟುಂಬಕ್ಕೆ ಕಣ್ಣೀರೇ ಬ್ರಾಂಡ್ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬದ ಕಣ್ಣೀರು `ಹೊಳೆ’ನರಸೀಪುರಕ್ಕೆ ಎಂದು ವ್ಯಂಗ್ಯ ವಾಡಿದರು. ಚುನಾವಣೆ ಸಂದರ್ಭ ದಲ್ಲಿ ಕಣ್ಣೀರು ಹಾಕೋದು ದೇವೇ ಗೌಡರ ಕುಟುಂಬದಿಂದ ನಡೆದುಕೊಂಡು ಬಂದಿದೆ. ಇದು ಜನರ ಮನಸ್ಸನ್ನ ದುರ್ಬಳಕೆ ಮಾಡಿಕೊಳ್ಳುವ ತಂತ್ರ. ಜನರು ಇಂತಹ ಕಣ್ಣೀರಿಗೆ ಮರುಳಾಗ ಬಾರದು ಎಂದು ಕರೆ ನೀಡಿದರು.
ಯೋಧರು ಹುತಾತ್ಮರಾದಾಗ, ರೈತರ ಆತ್ಮಹತ್ಯೆಯಾದಾಗ ಕಣ್ಣೀರು ಹಾಕಿದ್ರೆ ಅದನ್ನ ಒಪ್ಪಬಹುದು. ಆದರೆ ಮಕ್ಕಳು, ಮೊಮ್ಮಕ್ಕಳಿಗೆ ಪದೇ ಪದೆ ಕಣ್ಣೀರು ಹಾಕಿದರೆ ಯಾರೂ ನಂಬಲ್ಲ ಎಂದು ಗೌಡರ ಕುಟುಂಬದ ಕಾಲೆಳೆದರು.

Translate »