ಅಪ್ಪನಂತೆ ಅಮ್ಮನಿಗೂ ಆಶೀರ್ವದಿಸಿ: ಅಂಬರೀಶ್ ಪುತ್ರ ಅಭಿಷೇಕ್ ಮನವಿ
ಮೈಸೂರು

ಅಪ್ಪನಂತೆ ಅಮ್ಮನಿಗೂ ಆಶೀರ್ವದಿಸಿ: ಅಂಬರೀಶ್ ಪುತ್ರ ಅಭಿಷೇಕ್ ಮನವಿ

April 15, 2019

ಮಂಡ್ಯ: ನನ್ನ ತಂದೆ ಅಂಬರೀಶ್ ಅವರನ್ನು ಆಶೀರ್ವದಿಸಿ, ಬೆಳೆಸಿದಂತೆ ನನ್ನ ತಾಯಿಗೂ ಆಶೀರ್ವದಿಸಿ, ಬೆಳೆಸಿ ಎಂದು ಅಭಿಷೇಕ್ ಮನವಿ ಮಾಡಿದರು.

ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಭಾನುವಾರ ನಾಗಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ನಮ್ಮ ತಾಯಿ ಸುಮಲತಾ ಅವರ ವಿರುದ್ಧ ಮೂವರು ಸುಮಲತಾರನ್ನು ಕಣಕ್ಕಿಳಿಸಿದ್ದಾರೆ. ಯಾರೂ ಕೂಡ ಯಾಮಾರದೇ, ಗೊಂದಲಕ್ಕೀಡಾಗದೇ ಕ್ರಮ ಸಂಖ್ಯೆ 20ರ ರಣಕಹಳೆ ಊದುತ್ತಿರುವ ರೈತನ ಗುರುತಿಗೆ ಅತ್ಯಧಿಕ ಮತಗಳನ್ನು ನೀಡಿ ಜಯಶೀಲರನ್ನಾಗಿಸಿ ಎಂದು ಕೇಳಿಕೊಂಡರು.

ವಿರೋಧ ಪಕ್ಷದವರು ಹತಾಶೆಯಿಂದ ನಮ್ಮ ತಾಯಿಯವರು ಹಾಗೂ ನಮ್ಮ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಮಂಡ್ಯ ಜಿಲ್ಲೆಯ ಜನತೆ ಅಮ್ಮನಿಗೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ನಮ್ಮ ಪರವಾಗಿ ಉತ್ತರ ನೀಡಬೇಕು ಎಂದು ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದರು.

ನಮ್ಮ ಬಳಿ ಇರುವುದು ಅಪ್ಪ ಸಂಪಾದಿಸಿದ ಅಪಾರ ಪ್ರೀತಿ, ಸ್ನೇಹ ಅಭಿಮಾನ. ಜಿಲ್ಲೆಯ ಜನರು ನಮ್ಮನ್ನು ಎಂದೂ ಕಾಪಾಡುತ್ತಾರೆ. ನಾಗಮಂಗಲದ ಪ್ರಜ್ಞಾವಂತ ಮತದಾರರು ಪ್ರತಿ ಚುನಾವಣೆಯಲ್ಲೂ ಅತ್ಯಂತ ಜವಾಬ್ದಾರಿಯಿಂದ ಮತ ಚಲಾಯಿಸಿದ್ದೀರಾ ಈ ಬಾರಿಯೂ ಕೂಡ ಪಕ್ಷೇತರ ಅಭ್ಯರ್ಥಿಯಾದ ನನ್ನ ತಾಯಿ ಸುಮಲತಾ ಅರವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ನಿಮ್ಮ ಸ್ವಾಭಿಮಾನದ ಪರಾಕಾಷ್ಠೆಯನ್ನು ಅಭಿವ್ಯಕ್ತಗೊಳಿಸಿ ಎಂದರು.

ಜಿಲ್ಲೆಯ ಜನರ ಪ್ರೀತಿ, ಅಭಿಮಾನ, ಆತ್ಮಗೌರವ ಎತ್ತಿ ಹಿಡಿಯಲು ನಿಮ್ಮ ಮುಂದೆ ಬಂದಿದ್ದೇವೆ. ಜೆಡಿಎಸ್ ಮಾಡುವ ಅಪಪ್ರಚಾರಗಳಿಗೆ, ನಿಂದನೆಗಳಿಗೆ ಕಿವಿಗೊಡಬೇಡಿ. ನ್ಯಾಯ ನೀತಿ ಧರ್ಮಮಾರ್ಗದ ಹೋರಾಟದಲ್ಲಿ ಗೆಲುವು ಸಾಧಿಸಬೇಕಾದರೆ ಸುಮಲತಾ ಅವರಿಗೆ ಮತ ಕೊಟ್ಟು ಜಯಶೀಲರನ್ನಾಗಿಸಿ ಎಂದರು. ಪ್ರಚಾರದುದ್ದಕ್ಕೂ ಅಂಬರೀಶ್ ಮಾದರಿಯಲ್ಲೇ ಡೈಲಾಗ್ ಹೊಡೆಯುತ್ತಾ ಸಾರ್ವಜನಿಕರಿಂದ ಜೂನಿಯರ್ ಅಂಬರೀಶ್ ಎಂಬ ಮೆಚ್ಚುಗೆಗೆ ಅಭಿಷೇಕ್ ಅಂಬರೀಶ್ ಪಾತ್ರರಾದರು.

Translate »