ಪುತ್ರನ ಗೆಲುವಿಗೆ ಜನರ 150 ಕೋಟಿ ತೆರಿಗೆ ಹಣ ಮೀಸಲಿಟ್ಟಿರುವ ಮುಖ್ಯಮಂತ್ರಿ
ಮೈಸೂರು

ಪುತ್ರನ ಗೆಲುವಿಗೆ ಜನರ 150 ಕೋಟಿ ತೆರಿಗೆ ಹಣ ಮೀಸಲಿಟ್ಟಿರುವ ಮುಖ್ಯಮಂತ್ರಿ

April 15, 2019

ಚಾಮರಾಜನಗರ: ಜನರ ತೆರಿಗೆ ಹಣದಲ್ಲಿ ತಮ್ಮ ಮಗ ನಿಖಿಲ್‍ನನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 150 ಕೋಟಿ ರೂ. ತೆಗೆದಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ನಗರದ ಹಳೇ ಬಸ್ ನಿಲ್ದಾಣದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಸಮಿತಿ ವತಿ ಯಿಂದ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿ ಸಲು 150 ಕೋಟಿ ತೆಗೆದಿಟ್ಟಿರುವ ಬಗ್ಗೆ ಸಂಸದ ಎಲ್.ಆರ್. ಶಿವರಾಮೇಗೌಡರ ಪುತ್ರ ಚೇತನ್‍ಗೌಡ ಅವರು ರಮೇಶ್ ಎಂಬುವವರ ಜೊತೆ ಮಾತನಾಡಿರುವ 17 ನಿಮಿಷದ ಆಡಿಯೋ ವೈರಲ್ ಆಗಿದೆ. ಪ್ರತಿ ಬೂತ್‍ಗೆ 5 ಲಕ್ಷ ರೂ. ನೀಡಿ ತಮ್ಮ ಮಗನನ್ನು ಗೆಲ್ಲಿಸಲು ಪಣ ತೊಟ್ಟಿರುವ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದು ವರೆಯುವ ನೈತಿಕ ಹಕ್ಕಿದೆಯೇ? ಎಂದು ಪ್ರಶ್ನಿಸಿದರು. ನಾನು ಇಲ್ಲಿಂದಲೇ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡುತ್ತೇನೆ. ದೊರೆತಿರುವ ಆಡಿಯೋ ದಾಖಲೆ ಯನ್ನು ವಶಪಡಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸ್ ಜೀಪ್‍ಗಳಲ್ಲಿ ಹಣ ಸಾಗಾಣೆ ಮಾಡುತ್ತಿರುವು ದನ್ನು ತಡೆಯುವಂತೆ ಅವರು ಇದೇ ವೇಳೆ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲೆ ಕೆಟ್ಟಿದೆ. ಪುಲ್ವಾಮಾ ದಾಳಿ ಬಗ್ಗೆ ನನಗೆ 2 ವರ್ಷ ಮುಂಚೆಯೇ ಗೊತ್ತಿತ್ತು ಎಂದಿದ್ದಾರೆ. ಈಗ ದಾಳಿ ನಡೆದು 42 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬಗ್ಗೆ ತಿಳಿದಿದ್ದ ನೀವು ದಾಳಿ ನಡೆಯುವ ಬಗ್ಗೆ ತಿಳಿಸಿದ್ದರೆ ಸೈನಿಕರ ಜೀವ ಉಳಿಯುತ್ತಿರಲಿಲ್ಲವೇ? ದಾಳಿ ಬಗ್ಗೆ ಹೇಳದೆ ಇದ್ದದ್ದು ದೇಶದ್ರೋಹದ ಕೆಲಸ ತಾನೇ? ನಿಮ್ಮಂಥವರು ರಾಜ್ಯದ ಮುಖ್ಯಮಂತ್ರಿಯಾಗಿರುವುದು ನಮ್ಮ ದುರ್ದೈವ ಎಂದು ವಾಗ್ದಾಳಿ ನಡೆಸಿದರು. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಖಾತ್ರಿಯಾಗುತ್ತಿದ್ದಂತೆ ಅಪ್ಪ-ಮಕ್ಕಳು ಮನಬಂದಂತೆ ಮಾತನಾಡುತ್ತಿದ್ದಾರೆ. ಇನ್ನಾದರೂ ಸಂಯಮ ಕಳೆದುಕೊಳ್ಳಬೇಡಿ. ಅಧಿಕಾರ ಶಾಶ್ವತ ಅಲ್ಲ ಎಂಬುದು ನೆನಪಿರಲಿ ಎಂದರು.

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ನಿಮ್ಮಪ್ಪ ದೇವೇ ಗೌಡ್ರು ಸಹ ಇದೇ ಮಾತು ಹೇಳಿದ್ದರು. ಅವರು (ದೇವೇಗೌಡರು) ನಿವೃತ್ತರಾಗಲಿಲ್ಲ. ಈ ರೀತಿ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ಚುನಾವಣಾ ಫಲಿತಾಂಶ ಬಂದ ಬಳಿಕ ನಿಮ್ಮನ್ನು ಜನರೇ ನಿವೃತ್ತಿ ಮಾಡುತ್ತಾರೆ. ತುಮಕೂರಿನಲ್ಲಿ ದೇವೇಗೌಡರು ಗೆಲ್ಲುವುದು ಕಷ್ಟವಾಗಿದೆ. ಮಕ್ಕಳು ಆಯಿತು. ಸೊಸೆಯೂ ಆಯಿತು. ಈಗ ಮೊಮ್ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಇದನ್ನು ಕೊನೆಗಾಣಿಸಲು ಮಂಡ್ಯ ಮತ್ತು ತುಮಕೂರಿನ ಜನ ಸಂಕಲ್ಪ ಮಾಡಿದ್ದಾರೆ ಎಂದರು. ಜನಾರ್ಧನ ಪೂಜಾರಿ ಅವರು ಈ ಚುನಾವಣೆ ಯಲ್ಲಿ, ಮುಂದಿನ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಲಿ ದ್ದಾರೆ ಎಂದಿದ್ದಾರೆ.

ಎಲ್ಲೆಲ್ಲೂ ಜನ ಮೋದಿ ಮೋದಿ ಎನ್ನುತ್ತಿದ್ದಾರೆ. ಕೆಲ ವಿರೋಧ ಪಕ್ಷದ ನಾಯಕರು ಬಿಜೆಪಿ ಅಭ್ಯರ್ಥಿ ಹೆಸರನ್ನು ಹೇಳುತ್ತಿಲ್ಲ ಎನ್ನುತ್ತಿದ್ದಾರೆ. ನೀವು ಸಹ 10 ವರ್ಷಗಳ ಕಾಲ ದೇಶದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೆಸರೇಳಿ. ಯಾಕೆ ಹೇಳುವುದಿಲ್ಲ. ಸೋನಿಯಾ ಗಾಂಧಿ ಅವರು ಹೇಳಿದ್ದಕ್ಕೆ ಹೆಬ್ಬೆಟ್ಟು ಒತ್ತುವ ಕೆಲಸ ಮಾಡಿದ್ದಕ್ಕೆ ಸಿಂಗ್ ಹೆಸರು ಹೇಳುತ್ತಿಲ್ಲವಾ ಎಂದು ಯಡಿಯೂರಪ್ಪ ಲೇವಡಿ ಮಾಡಿದರು.

ಅತೀ ಸಣ್ಣ ಹಿಂದುಳಿದ ಸಮಾಜದಿಂದ ಬಂದಿರುವ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಇದು ಹಿಂದುಳಿದ ಸಮಾಜಕ್ಕೆ ಸಂದ ಗೌರವ. ಪರಿಶಿಷ್ಟ ಜಾತಿಗೆ ಸೇರಿರುವ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದು ಮೋದಿ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ. ನಮಗೆ ಜಾತಿ ಗೊತ್ತಿಲ್ಲ. ಹಿಂದೂ, ಮಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂಬುದು ಬಿಜೆಪಿ ಆಶಯ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಅವರು ನಿಧನರಾದಾಗ ಅವರ ಅಂತ್ಯಕ್ರಿಯೆಗೆ 6 ಅಡಿ ಜಾಗ ಕೊಡಲಿಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ. ವಿ.ಪಿ.ಸಿಂಗ್ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸನ್ನು ಎಲ್ಲಿಡಬೇಕೋ ಅಲ್ಲಿಡಿ ಎಂದರು. ವಿ.ಶ್ರೀನಿವಾಸ ಪ್ರಸಾದ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟಪಟ್ಟಿರಲಿಲ್ಲ. ನಾನೇ ಸ್ಪರ್ಧಿಸುವಂತೆ ಒತ್ತಾಯ ಮಾಡಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಇಂತಹ ಸಮಯದಲ್ಲಿ ಶ್ರೀನಿವಾಸಪ್ರಸಾದ್ ಅವರಂತಹ ಹಿರಿಯರು ಇರಬೇಕು ಎಂಬುದು ನಮ್ಮ ಆಶಯ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಶ್ರೀನಿವಾಸಪ್ರಸಾದ್ ಅವರಿಗೆ ಆರೋಗ್ಯ ಸರಿ ಇಲ್ಲ, ಆಸ್ಪತ್ರೆ ಸೇರಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಶ್ರೀನಿವಾಸ ಪ್ರಸಾದ್ ಚೆನ್ನಾಗಿದ್ದಾರೆ. ನೀವು (ಡಾ.ಪರಮೇಶ್ವರ್) ಆಸ್ಪತ್ರೆ ಸೇರಿರಬಹುದು. ನಿಮ್ಮ ಗೌರವ ಕಾಪಾಡಿಕೊಂಡು ರಾಜ್ಯದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಅಭ್ಯರ್ಥಿ ಶ್ರೀನಿವಾಸ ಪ್ರಸಾದ್, ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಉಸ್ತುವಾರಿ ರಾಜೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ, ಕೋಟೆ ಎಂ.ಶಿವಣ್ಣ, ಮಾಜಿ ಶಾಸಕರಾದ ಗೋ.ಮಧುಸೂದನ್, ತೋಂಟದಾರ್ಯ, ಮುಖಂಡರಾದ ಸೋಮನಾಯಕ, ಬಾಲಸುಬ್ರಮಣ್ಯಂ, ಹನುಮಂತಶೆಟ್ಟಿ, ಬಸವಣ್ಣ, ಡಾ.ಎ.ಆರ್.ಬಾಬು, ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ಪ್ರಭುಸ್ವಾಮಿ ಸೇರಿದಂತೆ ಇನ್ನಿತರರಿದ್ದರು.

ಕಾಂಗ್ರೆಸ್ ತೊರೆದು ಕೈ ಮುಖಂಡರು ಬಿಜೆಪಿಗೆ ಸೇರ್ಪಡೆ: ಇಂದಿಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.

ಜಿಪಂ ಸದಸ್ಯ ಹಾಗೂ ಎ.ಆರ್.ಕೃಷ್ಣಮೂರ್ತಿ ಅವರ ಸಹೋದರ ಎ.ಆರ್. ಬಾಲರಾಜು, ಮೈಮುಲ್ ಮಾಜಿ ನಿರ್ದೇಶಕ ಹೆಚ್.ಎಸ್.ಬಸವರಾಜು, ತಾಪಂ ಮಾಜಿ ಸದಸ್ಯ ಉಡಿಗಾಲ ಆರ್.ಕುಮಾರಸ್ವಾಮಿ, ರಾಜ್ಯ ಹಾಪ್‍ಕಾಮ್ಸ್ ಉಪಾಧ್ಯಕ್ಷ ಕೊಡಿಮೋಳೆ ರಾಜಶೇಖರ್, ಹರದನಹಳ್ಳಿ ಗ್ರಾಪಂ ಅಧ್ಯಕ್ಷ ಸುಂದರ್‍ರಾಜ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಉಡಿಗಾಲ ಪಾಪಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್ ನಾಯ್ಕ, ಮುಖಂಡ ದೇಶವಳ್ಳಿ ನಟರಾಜು ಸೇರಿದಂತೆ ಇನ್ನಿತರರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಗೊಂಡÀ ಮುಖಂಡರಿಗೆ ಮಾಜಿ ಸಿಎಂ ಯಡಿಯೂರಪ್ಪ ಪಕ್ಷದ ಶಲ್ಯ ಹಾಕಿ, ಬಾವುಟ ನೀಡಿ ಬರಮಾಡಿಕೊಂಡರು.

Translate »