ಸಿದ್ದು-ಜಿಟಿಡಿ ಮತ್ತೆ ಭಲೇ ಜೋಡಿ
ಮೈಸೂರು

ಸಿದ್ದು-ಜಿಟಿಡಿ ಮತ್ತೆ ಭಲೇ ಜೋಡಿ

April 15, 2019

ಮೈಸೂರು: ಬಿಜೆಪಿಯನ್ನು ಮಣಿಸಿ, ಮೈತ್ರಿ ಪಕ್ಷದ ಪ್ರಾಬಲ್ಯ ಮೆರೆಯಲು ಸಿದ್ದರಾಮಯ್ಯ-ಜಿ.ಟಿ.ದೇವೇಗೌಡರ ಜೋಡಿ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದ ವಿವಿಧೆಡೆ ಒಟ್ಟಿಗೆ ಪ್ರಚಾರ ಕೈಗೊಂಡು ಸಂಚಲನ ಮೂಡಿಸಿದೆ.

ಬಿಜೆಪಿ ಮಣಿಸಲು ದೋಸ್ತಿ ನಾಯಕರು ಒಟ್ಟಾಗಿ ಕೈ ಹಿಡಿದು ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು, ಹುಮ್ಮಸ್ಸು ಮೂಡಿಸಿದ್ದಾರೆ. ಇವರನ್ನು ನೋಡಿ ಜನತಾ ಪರಿವಾರದ ಅದೆಷ್ಟೋ ಹಳೆ ತಲೆಗಳು ಈ ಜೋಡಿಯ ಹಿಂದಿನ ಮೋಡಿಯನ್ನು ಮೆಲುಕು ಹಾಕಿದವು. ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಇಬ್ಬರೂ ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ನಾಯಕರು. ಈ ಇಬ್ಬರು ತಮ್ಮಲ್ಲಿ ರುವ ವೈಮನಸ್ಸನ್ನು ಮರೆತು ಭಾನುವಾರ ಕೈ ಕೈ ಹಿಡಿದು ಒಟ್ಟಿಗೇ ಚಾಮುಂಡೇಶ್ವರಿ ಕ್ಷೇತ್ರಾ ದ್ಯಂತ ಅಬ್ಬರರ ಪ್ರಚಾರ ಕೈಗೊಂಡರು. ಇವರ ಭೇಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು, ಕಾರ್ಯಕರ್ತರು ಎರಡೂ ಪಕ್ಷದ ನಾಯಕರ ಭಾವಚಿತ್ರ ಮತ್ತು ಚಿಹ್ನೆ ಇರುವ ಶಾಲುಗಳನ್ನು ಒಟ್ಟಿಗೆ ಧರಿಸಿದ್ದು ಕಂಡು ಬಂತು.

ಕಡಕೊಳ, ಜಯಪುರ, ಇಲವಾಲಗಳಲ್ಲಿ ನಡೆದ ಕಾರ್ಯಕರ್ತರ ಸಭೆಗಳಲ್ಲಿ ಈ ಇಬ್ಬರು ನಾಯಕರೂ ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿಗೆ ಮತ ನೀಡಿ ದರೆ ಸಂವಿಧಾನ ನಾಶವಾಗುವ ಜೊತೆಗೆ ಬಡಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿ ದ್ದಾರೆ. ಇದನ್ನರಿತು ಸರಳ, ಸೌಜನ್ಯದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಕಳೆದ 14 ವರ್ಷಗಳಿಂದ ಬದ್ಧ ವೈರಿಗಳಂ ತಿದ್ದ ಇಬ್ಬರೂ ಇಂದು ಪರಸ್ಪರ ಅಪ್ಪಿಕೊಂಡು ತಮ್ಮಲ್ಲಿ ಯಾವುದೇ ವೈರತ್ವ ಇಲ್ಲ. ಬಿಜೆಪಿ ಮಣಿಸಲು ನಾವಿಬ್ಬರೂ ಒಂದಾಗಿದ್ದೇವೆ. ಹಾಗೆಯೇ ಮೈತ್ರಿ ಪಕ್ಷದ ಮುಖಂ ಡರು, ಕಾರ್ಯಕರ್ತರೂ ಸಹ ಒಗ್ಗಟ್ಟಿನಿಂದ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವಂತೆ ಮನವಿ ಮಾಡಿದರು. ನೆರೆದಿದ್ದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಮೊದಲಿಗೆ ಕಡಕೊಳ ಗ್ರಾಮದಲ್ಲಿ ಕಾಳಿ ಬೀರಮ್ಮ ದೇವಾಲಯದ ಬಳಿಯ ಮೈದಾನದಲ್ಲಿ ನಡೆದ ಸಮಾವೇಶಕ್ಕೆ ಸಿದ್ದರಾಮಯ್ಯ-ಜಿ.ಟಿ.ದೇವೇಗೌಡರು ಒಟ್ಟಿಗೇ ದೀಪ ಹಚ್ಚುವ ಮೂಲಕ ಬಿಜೆಪಿ ವಿರುದ್ಧ ಮೈತ್ರಿ ಪಕ್ಷದ ರಣಕಹಳೆ ಮೊಳಗಿಸಿದರು.

ಕಾರ್ಯಕರ್ತರಲ್ಲಿ ಸಂಭ್ರಮ: ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ನಾಯಕರಾದ ಜಿ.ಟಿ.ದೇವೇಗೌಡರು ಮತ್ತು ಸಿದ್ದರಾಮಯ್ಯ ಒಟ್ಟಿಗೆ ಬರುತ್ತಿದ್ದಾರೆಂದು ಕಾರ್ಯ ಕರ್ತರು ಉತ್ಸಾಹದಿಂದ ಕಾದಿದ್ದರು. ಇಬ್ಬರೂ ನಾಯಕರು ಬರುತ್ತಿದ್ದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಘೋಷಣೆಗಳು ಮೊಳಗಿದವು. ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಪರಸ್ಪರ ಚುನಾವಣಾ ಬದ್ದ ವೈರಿಗಳು ಎನ್ನಲಾಗಿದ್ದ ಜಿ.ಟಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕದಲ್ಲಿ ಕುಳಿತಿದ್ದನ್ನು ನೋಡಿ ಕಾರ್ಯಕರ್ತರಲ್ಲಿದ್ದ ಆತಂಕ, ಅನುಮಾನಗಳು ಸಂಪೂರ್ಣ ದೂರವಾಯಿತು.

ಕ್ಷೇತ್ರಾದ್ಯಂತ ಕಾವೇರಿದ ಚುನಾವಣೆ: ಮೈತ್ರಿ ಪಕ್ಷ ಅಧಿಕಾರದಲ್ಲಿದ್ದರೂ, ಚುನಾ ವಣೆಯಲ್ಲಿ ಮೈತ್ರಿ ಅಭ್ಯರ್ಥಿ ಹಾಕಿದ್ದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ನಿನ್ನೆ ಮೊನ್ನೆಯವರೆಗೂ ಅಷ್ಟೇನು ಉತ್ಸಾಹ ಇರಲಿಲ್ಲ. ಆದರೆ, ಕ್ಷೇತ್ರದ ಇಬ್ಬರು ಪ್ರಭಾವಿ ನಾಯಕರು ಒಟ್ಟಿಗೇ ಕ್ಷೇತ್ರಾದ್ಯಂತ ಸಂಚರಿಸಿರುವುದು ಕ್ಷೇತ್ರದಲ್ಲಿ ಚುನಾವಣಾ ಕಾವು ಏರುವಂತೆ ಮಾಡಿದೆ. ಕಡಕೊಳದಲ್ಲಿ ನಡೆದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ರೂಪಾ ಲೋಕೇಶ್, ಮಾಜಿ ಸದಸ್ಯ ನಾರಾಯಣ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಎಪಿಎಂಸಿ ಸದಸ್ಯ ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಮರೀಗೌಡ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ತಾಪಂ ಸದಸ್ಯರಾದ ಶ್ರೀಕಂಠ, ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಸಿಂಧುವಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣಯ್ಯ, ಗ್ರಾಪಂ ಅಧ್ಯಕ್ಷರಾದ ರಮೇಶ್, ಮಾಜಿ ಸದಸ್ಯ ಮಹದೇಶ್, ಗ್ರಾಪಂ ಸದಸ್ಯರಾದ ರಮೇಶ್, ಡೈರಿ ಮಹದೇವು, ಸ್ವಾಮಿನಾಯ್ಕ, ಸುಮಲತಾ, ಜೆಡಿಎಸ್ ಮುಖಂಡ ಸಿದ್ದರಾಮೇಗೌಡ ಇನ್ನಿತರರು ಉಪಸ್ಥಿತರಿದ್ದರು.

ನಾವಿಬ್ಬರೂ ಒಂದಾಗಿದ್ದೇವೆ…
ಮೈಸೂರು: ಸಿದ್ದರಾಮಯ್ಯ-ಜಿಟಿಡಿ ಪರಸ್ಪರ ಮಾತನಾಡಲ್ಲ. ಒಟ್ಟಾಗಿ ಒಂದೇ ವೇದಿಕೆ ಏರಲ್ಲ. ಒಟ್ಟಾಗಿ ಬರಲ್ಲ ಎಂಬ ಆತಂಕ ಎಲ್ಲರಲ್ಲಿತ್ತು. ಇಂದು ನಾವಿಬ್ಬರೂ ಒಗ್ಗಟ್ಟಿನಿಂದ ಬಂದಿ ದ್ದೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ದೃಷ್ಟಿಯಿಂದ ಒಟ್ಟಾಗಿದ್ದೇವೆ. ಮೈತ್ರಿ ಪಕ್ಷದ ಕಾರ್ಯಕರ್ತರು ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ, ನಿಮ್ಮ ಮೇಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜೆಡಿಎಸ್‍ನ ಪ್ರಭಾವಿ ನಾಯಕ ಜಿ.ಟಿ.ದೇವೇಗೌಡ ಇಂದಿಲ್ಲಿ ಹೇಳಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಕಡಕೊಳ, ಜಯಪುರ, ಹಿನಕಲ್‍ನಲ್ಲಿ ನಡೆದ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶ ದಲ್ಲಿ ರಾಜ್ಯದ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಮ್ಮುಖದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ನಾವಿಬ್ಬರೂ ಒಂದೂವರೆ ಗಂಟೆ ಕಾಲ ಚರ್ಚಿ ಸಿದ್ದೇವೆ. ಆಗಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜನರ ಮುಂದೆ ಇಬ್ಬರೂ ಒಟ್ಟಾಗಿ ಬಂದಿದ್ದೇವೆ. 12 ವರ್ಷದಿಂದ ಮಾತೇ ಆಡಿಲ್ಲ ಎಂಬ ಪರಿಸ್ಥಿತಿ ಇತ್ತು. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತಾಡಿದ್ದೇವೆ. ನಾವೀಗ ಒಗ್ಗಟ್ಟಿನ ಸಂದೇಶ ನೀಡಬೇಕಿದೆ ಎಂದರು. ಜಿ.ಟಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಸೇರುತ್ತಾರೆಯೇ ಎಂಬ ಆತಂಕ ಚಾಮುಂಡೇಶ್ವರಿ ಕ್ಷೇತ್ರದ ಜನರಲ್ಲಿತ್ತು. 1983ರಿಂದ 2005ರವರೆಗೆ ಜತೆಗಿದ್ದು,, ಅದಾದ ನಂತರ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಹೋದರು. ನಂತರ ತದ್ವಿರುದ್ಧವಾಗಿ ಚುನಾವಣೆಯಲ್ಲಿ ಹೋರಾಟ ನಡೆಸಿದೆವು. ಬಿಜೆಪಿಯನ್ನು ದೂರ ಇಡುವ ದೃಷ್ಟಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿದ್ದೇವೆ. ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಐದು ವರ್ಷ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ಯೋಜನೆ, ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ರೈತರ ಸಹಕಾರಿ ಬ್ಯಾಂಕ್‍ಗಳಲ್ಲಿ ಒಂದು ಲಕ್ಷ ರೂ., ವಾಣಿಜ್ಯ ಬ್ಯಾಂಕ್‍ಗಳಲ್ಲಿ 2 ಲಕ್ಷ ರೂ. ಸಾಲ ಮನ್ನಾ ಮಾಡಿದ್ದಾರೆ. ಜೊತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.

ರೈತರಿಗೆ, ಕೊಡಗು ಅಭಿವೃದ್ಧಿಗೆ ಹಣ ನೀಡದ ಮೋದಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಯಾವುದೇ ಸಬ್ಸಿಡಿ ಕೊಡಲಿಲ್ಲ. ಕೊಡಗಿನ ಅಭಿವೃದ್ದಿಗೆ ಹಣ ಕೊಡಲಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡರು ಸಂಸದ ಪ್ರತಾಪಸಿಂಹ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಒಂದು ಕೋಟಿ ಉದ್ಯೋಗ ಕೊಡುತ್ತೇವೆ ಎಂದರು, ಉದ್ಯೋಗ ನೀಡಲಿಲ್ಲ. ದೇಶದ ಬಡವರು, ರೈತರು, ಯುವಕರು, ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಪ್ರಾಂತೀಯ ಪಕ್ಷಗಳು ರಾಹುಲ್‍ಗಾಂಧಿ, ಹೆಚ್.ಡಿ.ದೇವೇ ಗೌಡರ ನೇತೃತ್ವದಲ್ಲಿ ಬಿಜೆಪಿಯನ್ನು ಸೋಲಿಸಿ, ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಮಾಡ ಬೇಕೆಂಬ ತೀರ್ಮಾನ ಕೈಗೊಂಡು ಹೋರಾಟಕ್ಕಿಳಿದಿದ್ದೇವೆ ಎಂದರು.

Translate »