ನನಗೆ ಸಿದ್ರಾಮಣ್ಣನ ನಂತರ ಯತೀಂದ್ರಣ್ಣನ ಬಲ: ನಿಖಿಲ್
ಮೈಸೂರು

ನನಗೆ ಸಿದ್ರಾಮಣ್ಣನ ನಂತರ ಯತೀಂದ್ರಣ್ಣನ ಬಲ: ನಿಖಿಲ್

April 15, 2019

ಮಂಡ್ಯ: ನಿನ್ನೆ ಸಿದ್ದರಾಮಣ್ಣ ಬಂದಿದ್ದರು, ಇವತ್ತು ಡಾ.ಯತೀಂದ್ರಣ್ಣ ನನಗೆ ಶಕ್ತಿ ತುಂಬೋಕೆ ಬಂದಿದ್ದಾರೆ. ಅವರ ಬೆಂಬಲದಿಂದ ನನ್ನಲ್ಲಿ ಅತ್ಯುತ್ಸಾಹ ಬಂದಿದೆ ಎಂದು ಮಂಡ್ಯ ದೋಸ್ತಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿಂದು ಅಂಬೇಡ್ಕರ್ ಜಯಂತಿಯ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್ ಪುತ್ಥಳಿಗೆ ಮಾಲಾ ರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ದಿನೇ ದಿನೆ ನನ್ನ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಇಲ್ಲಿನ ಜನರ ಅಭಿಮಾನ, ಪ್ರೀತಿ ನೋಡ್ತಿದ್ರೆ ಖುಷಿ ಆಗ್ತಿದೆ. ಜನ ನನ್ನ ಕೈ ಹಿಡಿದೇ ಹಿಡೀ ತಾರೆ ಅನ್ನೋ ಆತ್ಮವಿಶ್ವಾಸ ಮೂಡಿದೆ ಎಂದರು. ಏ.16ರಂದು ಮಂಡ್ಯ ಟೌನ್‍ನಲ್ಲಿ ಕೊನೆ ದಿನದ ಪ್ರಚಾರ ಮುಗಿಸೋಣ ಅಂದ್ಕೊಂಡಿದ್ದೇವೆ. ಇವತ್ತು ಕೂಡಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಗೆಲ್ಲಿಸೋಕೆ ಏನೆಲ್ಲ ಮಾಡಬೇಕೋ, ಅದನ್ನು ಮಾಡುತ್ತೇವೆ: ನಿಖಿಲ್ ಜೊತೆ ಮಂಡ್ಯ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ರಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತೀಂದ್ರ, ಮೈತ್ರಿ ಅಭ್ಯರ್ಥಿ ನಿಖಿಲ್ ಅವರನ್ನು ಗೆಲ್ಲಿಸೋಕೆ ಏನೆಲ್ಲ ಮಾಡಬೇಕೋ, ಅದನ್ನು ನಾವು ಮಾಡುತ್ತೇವೆ ಎಂದರು.
ಜಿ.ಟಿ.ದೇವೇಗೌಡ ಮತ್ತು ನಮ್ಮ ತಂದೆ(ಸಿದ್ದರಾಮಯ್ಯ) ರಾಜಕೀಯದಲ್ಲಿ ಸ್ನೇಹಿತರಾಗಿದ್ದರು. ನಂತರ ರಾಜಕೀಯ ಸನ್ನಿವೇಶ ಬೇರೆ ಆದಾಗ ಬೇರೆ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದರು, ರಾಜಕೀಯ ಹೋರಾಟ ಬೇರೆ, ವೈಯಕ್ತಿಕ ಸಂಬಂಧ ಬೇರೆ. ಹಾಗಾಗಿ ಅವರಿಬ್ಬರೂ ಒಗ್ಗೂಡುವುದರಲ್ಲಿ ಆಶ್ಚರ್ಯ ಪಡಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನಮ್ಮ ಗುರಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ, ಕೋಮುವಾದಿ ಪಕ್ಷ ಸೋಲಿಸುವುದು.ಅದಕ್ಕಾಗಿ ಏನೆಲ್ಲ ಮಾಡಬೇಕೋ, ಅದನ್ನು ನಾವು ಮಾಡುತ್ತೇವೆ. ಮಳವಳ್ಳಿ ತಾಲೂಕಿನ ಹಲವೆಡೆ ಪ್ರಚಾರ ಮಾಡುತ್ತಿದ್ದೇನೆ.

ನಾವು ನಿಖಿಲ್ ಪರ ಪ್ರಚಾರ ಮಾಡುತ್ತಿದ್ದೇವೆ.ನಮ್ಮ ತಂದೆ ಹೆಸರು ಬಳಸಿಕೊಂಡು ಮತದಾರರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಅವರು ತಿಳಿಸಿದರು.

ಚರ್ಚ್‍ಗೆ ಅನಿತಾ ಕುಮಾರಸ್ವಾಮಿ ಭೇಟಿ; ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದರು, ನಗರದ ಸೆಂಟ್ ಜೋಸೆಫ್ ಚರ್ಚ್‍ಗೆ ಭೇಟಿ ನೀಡಿದ ಅವರು, ಕ್ರೈಸ್ತ ಬಾಂಧವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಈ ವೇಳೆ ಚುನಾವಣೆಯಲ್ಲಿ ಪುತ್ರ ನಿಖಿಲ್ ಬೆಂಬಲಿಸುವಂತೆ ಮನವಿ ಮಾಡಿದರು. ಬಳಿಕ ನಗರದ ಡಿ.ಸಿ ಕಚೇರಿ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

Translate »