ಮೈಸೂರಲ್ಲಿ ಪ್ರತಾಪ್ ಸಿಂಹ ಭರ್ಜರಿ ರೋಡ್ ಶೋ
ಮೈಸೂರು

ಮೈಸೂರಲ್ಲಿ ಪ್ರತಾಪ್ ಸಿಂಹ ಭರ್ಜರಿ ರೋಡ್ ಶೋ

ಮೈಸೂರು: ಬಹಿರಂಗ ಪ್ರಚಾರಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿರುವಾಗ ಅಭ್ಯರ್ಥಿ ಗಳು ಬಿರುಸಿನ ಮತ ಬೇಟೆ ನಡೆಸುತ್ತಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಮೈಸೂರಿನ ಚಾಮ ರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಭರ್ಜರಿ ರೋಡ್ ಶೋ ನಡೆಸಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಜಂಟಿ ಪ್ರಚಾರ ನಡೆಸುವ ಮೂಲಕ ಸಂಚಲನ ಮೂಡಿಸಿ ದ್ದಾರೆ. ಉಳಿದಂತೆ ಬಿಎಸ್‍ಪಿ ಅಭ್ಯರ್ಥಿ ಡಾ.ಬಿ.ಚಂದ್ರ ಹಾಗೂ ಪಕ್ಷೇತರ ಅಭ್ಯರ್ಥಿಗಳೂ ಸಹ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಚುನಾವಣಾ ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು.

ಸಿಂಹ ರೋಡ್ ಶೋ: ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಶಾಸಕ ಎಲ್.ನಾಗೇಂದ್ರ ಅವರೊಂದಿಗೆ ಭರ್ಜರಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಬಿರುಸಿನ ಚುನಾವಣಾ ಪ್ರಚಾರ ಮಾಡಿದರು.

ಕೆ.ಜಿ.ಕೊಪ್ಪಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬೆಳಿಗ್ಗೆ 8.30 ಗಂಟೆಗೆ ರೋಡ್ ಶೋ ಆರಂಭಿಸಿದ ಪ್ರತಾಪ್ ಸಿಂಹ ಅವರೊಂದಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಶಾಸಕ ಎಲ್.ನಾಗೇಂದ್ರ, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀರಾಂ ಸೇರಿದಂತೆ ಹಲವರಿದ್ದರು. ಕೆ.ಜಿ.ಕೊಪ್ಪಲಿನ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದ ಮೂಲಕ ತೆರಳಿದ ಅವರು, ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿ ಸಾಗಿ ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನ ಸರ್ಕಲ್‍ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ಸಂಸದನಾಗಿ ತಾವು ಮೈಸೂರಿಗೆ ತಂದ ಅನುದಾನ, ಕಾರ್ಯಗತ ಮಾಡಿದ ಹಲವು ಮಹತ್ತರ ಯೋಜನೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ಭಾರತ ನಿರ್ಮಾಣದ ಕನಸನ್ನು ನನಸು ಮಾಡಲು ಮತ್ತೊಮ್ಮೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ನಂತರ ಬೋಗಾದಿ ರಸ್ತೆ, ಜೆಸಿಇ ರಸ್ತೆ, ಹುಣಸೂರು ರಸ್ತೆ, ಜಯಲಕ್ಷ್ಮಿಪುರಂ ಮಾರ್ಗವಾಗಿ ಚಂದ್ರಕಲಾ ಆಸ್ಪತ್ರೆ ಜಂಕ್ಷನ್ ಬಳಿಯಿಂದ ಮತ್ತೆ ಕಾಳಿದಾಸ ರಸ್ತೆ ಮಾರ್ಗವಾಗಿ ಪಂಚವಟಿ ಸರ್ಕಲ್, ವಿವಿ ಮೊಹಲ್ಲಾ ಮೂಲಕ ಮಾತೃ ಮಂಡಳಿ ಸರ್ಕಲ್‍ಗೆ ಬಂದು ಅಲ್ಲಿಂದಲೂ ಭಾಷಣ ಮಾಡಿದರು. ನಂತರ ಪಡುವಾರಹಳ್ಳಿ, ಒಂಟಿಕೊಪ್ಪಲು, ಟೆಂಪಲ್ ರಸ್ತೆ, ಕೆಆರ್‍ಎಸ್ ರಸ್ತೆ, ಆಕಾಶವಾಣಿ ವೃತ್ತ, ಯಾದವಗಿರಿ, ಎ.ರಾಮಣ್ಣ ವೃತ್ತದ ಮೂಲಕ ಬಂಬೂ ಬಜಾರ್‍ನಲ್ಲಿ ರೋಡ್ ಶೋ ನಡೆಸಿದ ಅವರು, ತಿಲಕ್‍ನಗರ, ಪಂಚಮುಖಿ ಗಣಪತಿ ದೇವಸ್ಥಾನ, ಮಂಡಿ ಮೊಹಲ್ಲಾ, ಕೆ.ಆರ್.ಆಸ್ಪತ್ರೆ, ಇರ್ವಿನ್ ರಸ್ತೆ ಮೂಲಕ ಅಶೋಕ ರಸ್ತೆ, ಹಳ್ಳದ ಕೇರಿಗಳಲ್ಲಿ ಮತ ಪ್ರಚಾರ ನಡೆಸಿದರು. ಮಧ್ಯಾಹ್ನ 1.30 ಗಂಟೆ ವೇಳೆಗೆ ನಜರ್‍ಬಾದಿಗೆ ತೆರಳಿ ನಿಂಬುಜಾದೇವಿ ದೇವಸ್ಥಾನ ರಸ್ತೆ ಹಾಗೂ ಸುತ್ತಮುತ್ತಲಿನಲ್ಲಿ ರೋಡ್ ಶೋ ನಡೆಸಿದ ಪ್ರತಾಪ್ ಸಿಂಹ ಅವರು, ಸಂಜೆ ಬಿಎಂಶ್ರೀ ನಗರ, ಮೇಟಗಳ್ಳಿ, ಬೃಂದಾವನ, ಮಂಜುನಾಥ, ಗೋಕುಲಂ, ಹೆಬ್ಬಾಳು ಬಡಾವಣೆಗಳಲ್ಲೂ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಎಲ್ಲೆಡೆ ಜನರು ಪ್ರತಾಪ್ ಸಿಂಹ ಪರ ಘೋಷಣೆ ಕೂಗಿ ಭಾರೀ ಬೆಂಬಲ ಸೂಚಿಸಿದರು.

April 15, 2019

Leave a Reply

Your email address will not be published. Required fields are marked *