ಪ್ರೀತಿಗೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಮಂಡ್ಯ, ಮೈಸೂರು

ಪ್ರೀತಿಗೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

July 7, 2018

ಮಂಡ್ಯ:  ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿ ದ್ದರಿಂದ ಪ್ರೇಮಿಗಳಿಬ್ಬರ ಜೀವನ ದುರಂತ ಅಂತ್ಯ ಕಂಡಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ಚಿಕ್ಕಾಯರಳ್ಳಿಯಲ್ಲಿ ನಡೆದಿದೆ.

ಮೂಲತಃ ಹೆಚ್.ಡಿ.ಕೋಟೆ ತಾಲೂಕು ಯಡಿಯಾಲ ಗ್ರಾಮದ ನಿವಾಸಿಗಳಾದ ಶಿವು @ ಚಿನ್ನು ಬಿನ್ ವೆಂಕಟೇಶ್(19) ಮತ್ತು ಅನ್ನಪೂರ್ಣ ಬಿನ್ ಭಾಗ್ಯಮ್ಮ (18) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಘಟನೆ ಹಿನ್ನೆಲೆ: ಶಿವು ಮತ್ತು ಅನ್ನಪೂರ್ಣ ಇಬ್ಬರೂ ಬಸ್‍ನಲ್ಲಿ ಹೆಚ್.ಡಿ.ಕೋಟೆಯಿಂದ ಗುರುವಾರವೇ ಶ್ರೀರಂಗಪಟ್ಟಣಕ್ಕೆ ಬಂದಿದ್ದು, ಕೆಆರ್‍ಎಸ್‍ಗೆ ತೆರಳಿ ಅಲ್ಲಿ ಸುತ್ತಮುತ್ತ ಸುತ್ತಾಡಿದ್ದಾರೆ. ಸಂಜೆಯಾದ ಬಳಿಕ ಸಮೀಪದ ಚಿಕ್ಕಾಯರಳ್ಳಿಯ ಕೋಲುಬಾವಿ ಆಂಜನೇಯ ದೇವಸ್ಥಾನದ ಬಳಿ ರಾತ್ರಿ ಕಳೆಯುವ ಪ್ರಯತ್ನ ಮಾಡಿದ್ದಾರೆ. ಇಬ್ಬರ ಮನೆಯವರ ವಿರೋಧವಿದ್ದ ಹಿನ್ನೆಲೆಯಲ್ಲಿ ಬೇಸತ್ತಿದ್ದ ಪ್ರೇಮಿಗಳು ವಿಷ ಸೇವಿಸಿದ್ದಾರೆ. ಪರಿಣಾಮ ಯುವಕ ಶಿವು ಸ್ಥಳದಲ್ಲೇ ಸಾನ್ನಪ್ಪಿದರೆ, ಯುವತಿ ಅನ್ನಪೂರ್ಣ ತೀವ್ರ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಗ್ರಾಮಸ್ಥರೊಬ್ಬರು ಆಂಜನೇಯಸ್ವಾಮಿ ದೇವಸ್ಥಾನದ ಕಡೆ ಹೋದಾಗ ಯುವಕ ಸಾವನ್ನಪ್ಪಿದ್ದು, ಯುವತಿ ಒದ್ದಾಡುತ್ತಿದ್ದುದನ್ನು ಕಂಡಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲ ಸೇರಿ ಅನ್ನಪೂರ್ಣಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಆಕೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾಳೆ ಎನ್ನಲಾಗಿದೆ.

ಶಿವು ಮತ್ತು ಅನ್ನಪೂರ್ಣ ಒಂದೇ ಕೋಮಿನವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಎರಡೂ ಮನೆಯವರ ತೀವ್ರ ವಿರೋಧವಿತ್ತು. ಇದೇ ಹಿನ್ನೆಲೆ ಯಲ್ಲಿ ಚಿಕ್ಕಾಯರಹಳ್ಳಿ ಬಳಿ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ ಮದುವೆಗೆ ಅರ್ಹನಲ್ಲ ಎನ್ನುವ ಕಾರಣದಿಂದಲೂ ಇಬ್ಬರು ಹತಾಶರಾಗಿದ್ದರೆಂದು ಹೇಳಲಾಗಿದೆ.

Translate »