ಮಂಡ್ಯ, ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಪೂರ್ಣ ಸಾಲ ಮನ್ನಾ ಆಗಲಿಲ್ಲ ಎಂದು ಮನ ನೊಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ದೇಮಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಕಚ್ಚಿಗೆರೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ವರದಿ: ಚಾಮರಾಜ ನಗರ ತಾಲೂಕಿನ ದೇಮಹಳ್ಳಿ ಗ್ರಾಮದ ನಂಜುಂಡಪ್ಪನವರ ಮಗ ಚಿಕ್ಕಸ್ವಾಮಿ ಉ. ಬೆಳ್ಳಪ್ಪ (42) ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಸ್ವಾಮಿ ತಮಗಿದ್ದ ಎರಡೂ ವರೆ ಎಕರೆ ಜಮೀನಿನಲ್ಲಿ ಬಾಳೆ ಮತ್ತು ಉದ್ದು ಬೆಳೆ ದಿದ್ದರು. ಮಳೆ ಇಲ್ಲದ ಕಾರಣ ಬೆಳೆ ನಾಶವಾಗಿತ್ತು. ವ್ಯವಸಾಯಕ್ಕಾಗಿ ಇವರು ಗ್ರಾಮದ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ಸಾವಿರ, ಉಮ್ಮತ್ತೂರು ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 49 ಸಾವಿರ ಹಾಗೂ ಖಾಸಗಿ ಯಾಗಿ 2 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ರಾಜ್ಯ ಸರ್ಕಾರ ರೈತರ ಪೂರ್ಣ ಸಾಲ ಮನ್ನಾ ಮಾಡುವುದಾಗಿ ಈ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಇದ ರಿಂದ ತಾವು ಮಾಡಿರುವ ಸಾಲ ಮನ್ನಾ ಆಗಲಿದೆ ಎಂಬ ಭರವಸೆಯನ್ನು ಚಿಕ್ಕ ಸ್ವಾಮಿ ಹೊಂದಿದ್ದರು. ಆದರೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುರು ವಾರ ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ 2009ರ ಏಪ್ರಿಲ್ 1ರಿಂದ 2017ರ ಡಿಸೆಂಬರ್31ರ ಒಳಗಿನ 2 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಆದರೆ ಚಿಕ್ಕಸ್ವಾಮಿ 2018ರ ಫೆಬ್ರವರಿಯಲ್ಲಿ ಮಾಡಿದ್ದ ಸಾಲ ಮನ್ನಾ ಆಗಿರಲಿಲ್ಲ.
ಗುರುವಾರ ರಾತ್ರಿ ತೀವ್ರ ಬೇಸರದಿಂದ ಮನೆಯಲ್ಲಿ ಮಲಗಿದ್ದ ಚಿಕ್ಕಸ್ವಾಮಿ, ಮಧ್ಯರಾತ್ರಿ ವೇಳೆಗೆ ತನ್ನ ಪಂಚೆಯಲ್ಲೇ ಮನೆಯ ತೊಲೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಒದ್ದಾಡುತ್ತಿದ್ದ ಚಿಕ್ಕಸ್ವಾಮಿಯನ್ನು ತಂದೆ ನಂಜುಂಡಸ್ವಾಮಿ ಹಾಗೂ ಸಂಬಂಧಿಕರು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸÀಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ 7.30ರಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೃತ ಚಿಕ್ಕಸ್ವಾಮಿ ತಂದೆ ನಂಜುಂಡಪ್ಪ ಕುದೇರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಂಡ್ಯ ವರದಿ: ಇದೇ ಕಾರಣಕ್ಕೆ ಮಂಡ್ಯ ಜಿಲ್ಲೆ ಕಚ್ಚಿಗೆರೆ ಗ್ರಾಮದ ನಿವಾಸಿ ಕೆ.ಸಿ.ಭದ್ರಯ್ಯ (60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರಯ್ಯ ತಮ್ಮ 2 ಎಕರೆ ಜಮೀನಿನಲ್ಲಿ ಕಬ್ಬು, ಭತ್ತ ಬೆಳೆಯುತ್ತಿದ್ದರು. ಕೃಷಿಗಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಿಎಂ ಕುಮಾರಸ್ವಾಮಿ ಬಜೆಟ್ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದ ಭದ್ರಯ್ಯ, ಕೇವಲ 2 ಲಕ್ಷ ಮಾತ್ರ ಸಾಲ ಮನ್ನಾ ಮಾಡಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಭದ್ರಯ್ಯ ಅವರು ಸಿಎಂ ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಬಜೆಟ್ ನೋಡಿ ಮನನೊಂದು ತಡರಾತ್ರಿ ನೇಣಿಗೆ ಶರಣಾಗಿದ್ದಾರೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಮಂಡ್ಯ ಗ್ರಾಮಾಂತರ ಠಾಣೆಯ ಎಸ್‍ಐ ಅಜರುದ್ದೀನ್ ತಿಳಿಸಿದ್ದಾರೆ.