ಪರಿಸರ, ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬ್ರೇಕ್
ಮೈಸೂರು

ಪರಿಸರ, ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬ್ರೇಕ್

October 27, 2019

ಮೈಸೂರು, ಅ.26- ನರಕ ಚತುರ್ದಶಿ, ಧನ ಲಕ್ಷ್ಮೀ ಪೂಜೆ ಹಾಗೂ ಬಲಿಪಾಡ್ಯಮಿಯನ್ನು ದೀಪಾ ವಳಿ ಹಬ್ಬವಾಗಿ ಸಂಭ್ರಮಿಸುತ್ತೇವೆ. ಕೆಡುಕನ್ನು ತೊಡೆದು ಒಳಿತನ್ನು ಕರುಣಿಸುವಂತೆ ದೀಪಗಳ ಬೆಳಗಿ ದೇವರಲ್ಲಿ ಮೊರೆಯಿಡುತ್ತೇವೆ. ಹೀಗೆ ಮನೆ-ಮನಗಳ ಬೆಳಗುವ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಒಂದು ಪ್ರತೀತಿಯಂತೆ ನಡೆದು ಬಂದಿದೆ. ಸಾಲು ಸಾಲು ದೀಪಗಳ ಬೆಳಗಿಸುವ ಸಂಪ್ರದಾಯವನ್ನು ಪಕ್ಕಕ್ಕೆ ಸರಿಸಿ, ಕ್ಷಣಮಾತ್ರದಲ್ಲಿ ಅಬ್ಬರಿಸಿ, ಬೂದಿಯಾಗುವ ಪಟಾ ಕಿಗೆ ಜನ ಮೊರೆ ಹೋಗಿದ್ದರು. ಆದರೆ ಕಾಲ ಕಳೆದಂತೆ ಹಲವು ಕಾರಣಗಳಿಂದ ಪಟಾಕಿ ತಣ್ಣಗಾಗುತ್ತಿದೆ.

ಎರಡಿಂಚು ಉದ್ದದ ಮದ್ದಿಗೆ ಕಿಡಿ ಹೊತ್ತಿಸಿ, ಶರ ವೇಗದಲ್ಲಿ ಹಿಂದಕ್ಕೆ ಹೆಜ್ಜೆ ಹಾಕುವಷ್ಟರಲ್ಲಿ ಕಿವಿಗೆ ಭಾರೀ ಶಬ್ಧ ಬಡಿಯುತ್ತದೆ, ಸುತ್ತಮುತ್ತ ಕೆಟ್ಟ ರಸಾಯನಿಕ ವಾಸನೆ ಬೀರುವ ಹೊಗೆ ಆವರಿಸುತ್ತದೆ, ಬೆಂಕಿ ಕಿಡಿ ಗಳೊಂದಿಗೆ ಪೇಪರ್ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತವೆ. ಇನ್ನಷ್ಟು ರಾಕೆಟ್ ಮಾದರಿಯಲ್ಲಿ ಆಗಸ ದತ್ತ ಜಿಗಿದು ಗಾಳಿಯಲ್ಲೇ ಸುಟ್ಟು ಬೂದಿಯಾಗುತ್ತವೆ. ಹೀಗೆ ಕ್ಷಣಕಾಲದಲ್ಲಿ ಸಿಡಿಯುವ ಪಟಾಕಿಯಿಂದ ಹಣ ಪೋಲಾಗುವುದರ ಜೊತೆಗೆ ಪರಿಸರಕ್ಕೆ ದೊಡ್ಡ ಹೊಡೆತವೇ ಬೀಳುತ್ತದೆ. ಈ ಕಾರಣದಿಂದಲೇ ವಾಯು ಮಾಲಿನ್ಯ, ಶಬ್ಧಮಾಲಿನ್ಯ ಉಂಟು ಮಾಡುವ ಪಟಾಕಿ, ಸಿಡಿಮದ್ದುಗಳನ್ನು ತಯಾರಿಸದಂತೆ ಕಾರ್ಖಾನೆಗಳಿಗೆ ಸರ್ಕಾರ ನಿರ್ಬಂಧ ಹೇರಿದೆ. ಪಟಾಕಿಯ ದುಷ್ಪರಿ ಣಾಮದ ಬಗ್ಗೆ ಜನರಿಗೂ ಅರಿವಿದೆ. ಹಾಗಾಗಿ ವರ್ಷ ಕಳೆದಂತೆ ಪಟಾಕಿ ಮಾರಾಟ ಕ್ಷೀಣಿಸುತ್ತಿದೆ.

ಮೈಸೂರಲ್ಲೂ ಪಟಾಕಿ ಖರೀದಿ ಕಡಿಮೆಯಾಗಿ ರುವುದರಿಂದ ಬಂಡವಾಳ ಹಾಕಿರುವ ವ್ಯಾಪಾರಿಗಳು ಕೈ ಸುಟ್ಟುಕೊಳ್ಳುವ ಆತಂಕದಲ್ಲಿದ್ದಾರೆ. ಆಕಾಶದೆತ್ತರಕ್ಕೆ ಹಾರುವ, ಭಾರೀ ಶಬ್ಧ ಹಾಗೂ ಹೊಗೆ ಬರುವ ಪಟಾಕಿ ಗಳನ್ನು ತಯಾರಿಸದಂತೆ ಕರ್ನಾಟಕ ಮತ್ತು ತಮಿಳು ನಾಡು ಸರ್ಕಾರಗಳು ಕಡಿವಾಣ ಹಾಕಿರುವ ಹಿನ್ನೆಲೆ ಯಲ್ಲಿ ಈ ವರ್ಷ ಭಾರೀ ಶಬ್ಧ ಬರುವ ಪಟಾಕಿಗಳು ಮಾರುಕಟ್ಟೆಗೆ ಬಂದಿಲ್ಲ. ತಮಿಳುನಾಡಿನ ಶಿವಕಾಶಿಯಲ್ಲಿ ಸರ್ಕಾರದ ನಿರ್ದೇಶನದಂತೆ ಭಾರೀ ಸದ್ದು ಮಾಡುವ ಹಾಗೂ ಹೆಚ್ಚು ಹೊಗೆ ಸೃಷ್ಟಿಸುವ ಪಟಾಕಿಗಳಿಗೆ ಬ್ರೇಕ್ ಹಾಕಿದೆ. 5,000 ಮತ್ತು 10,000 ಸಂಖ್ಯೆಯಲ್ಲಿ ಪಟಾಕಿ ಗಳಿರುವ ದೊಡ್ಡ ಸರ ಪಟಾಕಿಗಳ ತಯಾರಿಯನ್ನು ರದ್ದುಪಡಿಸಲಾಗಿದೆ. ಪರಿಸರ ಕಾಳಜಿಯುಳ್ಳ ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಜಾಗೃತಿ ಮೂಡಿಸು ತ್ತಿವೆ. ಪರಿಸರಕ್ಕೆ ಹಾನಿಯಾಗುವಂತಹ ಪಟಾಕಿ ಕೈಬಿಟ್ಟು ಮಣ್ಣಿನ ದೀಪ ಹಚ್ಚಿ ದೀಪಾವಳಿ ಆಚರಿಸುವಂತೆ ಮನವಿ ಮಾಡುತ್ತಿವೆ. ಇದೆಲ್ಲದರ ಪರಿಣಾಮ ಪಟಾಕಿ ವ್ಯಾಪಾರ ಕ್ಷೀಣಿಸಿದೆ ಎಂದು ಹೆಬ್ಬಾಳಿನ ದೇವೀರಮ್ಮ ಎಂಟರ್‍ಪ್ರೈಸಸ್ ಅಂಗಡಿ ಮಾಲೀಕ ವಿ. ರವಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಪರಿಸರಕ್ಕೆ ಹೆಚ್ಚು ಮಾರಕವಲ್ಲದ ಪಟಾಕಿ ಮಾರಾ ಟಕ್ಕೂ ತೊಂದರೆಯಾಗಿದೆ. ಶೇ.18ರಷ್ಟು ಜಿಎಸ್‍ಟಿ ವಿಧಿಸಿರುವುದರಿಂದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಪಟಾಕಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಬೆಲೆ ಹೆಚ್ಚಾಗಿರುವುದರಿಂದ ಗ್ರಾಹಕರು ಸಹಜವಾಗಿ ಪಟಾಕಿ ಕೊಳ್ಳಲು ಹಿಂದೇಟು ಹಾಕುತ್ತಿ ದ್ದಾರೆ. ಇತ್ತೀಚೆಗೆ ಪಟಾಕಿ ವ್ಯಾಪಾರ ಗಣನೀಯ ವಾಗಿ ಕಡಿಮೆಯಾಗಿದ್ದು, ಲಾಭ ನಿರೀಕ್ಷೆಯಿರಲಿ ಹಾಕಿರುವ ಬಂಡವಾಳ ಕೈ ಸೇರುವುದೂ ಅನುಮಾನ. ಆದರೂ ಹಲವು ವರ್ಷಗಳಿಂದ ಪಟಾಕಿ ವ್ಯಾಪಾರ ಮಾಡು ತ್ತಿರುವ ಕಾರಣಕ್ಕೆ ಈ ಬಾರಿಯೂ ಅನಿವಾರ್ಯ ವಾಗಿ ಹೆಬ್ಬಾಳ್‍ನಲ್ಲಿ ಅಂಗಡಿ ತೆರೆದಿದ್ದೇವೆ ಎಂದು ಮತ್ತೋರ್ವ ವರ್ತಕ ಭಾಸ್ಕರ್ ಹೇಳಿದರು.

ಮೈಸೂರಿನ ಹೆಬ್ಬಾಳು, ಕುವೆಂಪುನಗರ, ಬಲ್ಲಾಳ್ ಸರ್ಕಲ್, ರಾಮಕೃಷ್ಣ ಪರಮಹಂಸ ವೃತ್ತ, ನ್ಯೂ ಕಾಂತರಾಜ ಅರಸ್ ರಸ್ತೆಯ ಶ್ರಿ ಬಂದಂತಮ್ಮ ಕಾಳಮ್ಮ ದೇವಸ್ಥಾನ, ಜೆಕೆ ಮೈದಾನ, ಪುರಭವನ, ಚಾಮುಂಡಿ ಪುರಂ ಸರ್ಕಲ್ ಮತ್ತಿತರ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳಿವೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿ ಸಿದರೆ ಮಳಿಗೆಗಳ ಸಂಖ್ಯೆ ಕಡಿಮೆಯಾಗಿದೆ. ಮಳಿಗೆ ತೆರೆಯಲು ಅಗ್ನಿಶಾಮಕ ಠಾಣೆ, ಚೆಸ್ಕಾಂ ಹಾಗೂ ಮೈಸೂರು ಮಹಾನಗರ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ (ಎನ್‍ಓಸಿ) ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕಿರುವ ಕಾರಣ ಅನೇಕ ವರ್ತಕರು ಹಿಂದೆ ಸರಿದಿದ್ದಾರೆ. ಈ ಹಿಂದೆ ಮೈಸೂರಿಗೆ ಶಿವಕಾಶಿ ಮತ್ತು ಬೆಂಗಳೂರಿನಿಂದ 30 ರಿಂದ 40 ಟ್ರಕ್ ಲೋಡ್ ಪಟಾಕಿಗಳನ್ನು ತರಿಸಲಾಗುತ್ತಿತ್ತು. ಆದರೆ ಈ ವರ್ಷ ಕೇವಲ ಸುಮಾರು 15ರಿಂದ 20 ಲೋಡ್ ಪಟಾಕಿ ಮಾತ್ರ ತರಿಸಲಾಗಿದೆ. ಮಳೆ ಬಂದರೆ ಈ ಪಟಾಕಿಯೂ ನೀರು ಪಾಲಾಗುತ್ತದೆ ಎಂದು ವರ್ತ ಕರು ಅಳಲು ತೋಡಿಕೊಂಡಿದ್ದಾರೆ.

ಎಸ್.ಟಿ. ರವಿಕುಮಾರ್

Translate »