ಮೈಸೂರು,ಅ.26(ಆರ್‍ಕೆ)- ನಿಗದಿತ ಸಮಯಕ್ಕೆ ವ್ಯಾಪಾರ ವಹಿವಾಟು ನಿಲ್ಲಿಸಲು ಹೇಳಿದ್ದಕ್ಕೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮನನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮಹಾರಾಣಿ ಪಿಯು ಕಾಲೇಜು ಎದುರು ಫಾಸ್ಟ್‍ಫುಡ್ ನಡೆಸುತ್ತಿದ್ದ ಸೋಮ, ಸಹೋದರ ಚಂದ್ರ ಶೇಖರ್ ಮತ್ತು ಸಹೋದರಿ ಲತಾ ಅವರು ರಾತ್ರಿ 11 ಗಂಟೆಯಾದರೂ ಅಂಗಡಿ ಬಂದ್ ಮಾಡದಿದ್ದರಿಂದ ಮುಚ್ಚಿಸಲು ಹೋದ ದೇವ ರಾಜ ಠಾಣೆ ಹೆಡ್ ಕಾನ್‍ಸ್ಟೇಬಲ್ ಮಂಜುನಾಥ್ ಹಾಗೂ ಹೋಂ ಗಾರ್ಡ್ ವಿರುದ್ಧ ತಿರುಗಿ ಬಿದ್ದು ಅಕ್ಟೋಬರ್ 19ರಂದು ರಾತ್ರಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್ ಅವರು, ಶುಕ್ರವಾರ ಆರೋಪಿ ಸೋಮನನ್ನು ಬಂಧಿಸಿದ್ದಾರೆ. ಘಟನೆ ನಡೆದ ದಿನವೇ ಚಂದ್ರಶೇಖರ್‍ನನ್ನು ಬಂಧಿಸಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೋಮನಿಗಾಗಿ ಶೋಧ ನಡೆಸುತ್ತಿದ್ದರು. ಲತಾ ಸಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.