ಬಿಜೆಪಿಯಿಂದ ಆಫರ್ ಬಂದಿರುವುದು ನಿಜ: ಒಂದು ವಾರದಲ್ಲಿ ನಿರ್ಧಾರಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್
ಮೈಸೂರು

ಬಿಜೆಪಿಯಿಂದ ಆಫರ್ ಬಂದಿರುವುದು ನಿಜ: ಒಂದು ವಾರದಲ್ಲಿ ನಿರ್ಧಾರಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್

October 27, 2019

ಮೈಸೂರು,ಅ.26(ಎಂಟಿವೈ)-ಬಿಜೆಪಿಯಿಂದ ನನಗೆ ಪಕ್ಷ ಸೇರುವಂತೆ ಆಹ್ವಾನ ಬಂದಿರುವುದು ನಿಜ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆ ನನ್ನ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇನ್ನೊಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ಹೊರ ಹೋಗಲು ಸಿದ್ಧಗೊಂಡಿರುವು ದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಇತ್ತೀಚೆಗೆ ಬಿಜೆಪಿ ನಾಯಕರು ನನಗೆ ನೀಡಿರುವ ಆಹ್ವಾನ ಕುರಿತಂತೆ ಈಗಾಗಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಸಿದ್ದರಾಮಯ್ಯ ಅವರು ನೀಡಿದ್ದ ಆಶ್ವಾಸನೆ ನಂಬಿ ಕಾಂಗ್ರೆಸ್‍ಗೆ ಸೇರಿದೆ. ನನಗೆ ಟಿಕೆಟ್ ನೀಡಿದ ಸಿದ್ದರಾಮಯ್ಯರಿಗೆ ಭಾರವಾಗಿ ಇರಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್‍ನಲ್ಲಿ ಅಧಿಕಾರ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ ಎಂದರು.

ಲೋಕಸಭಾ ಚುನಾವಣೆ ನಂತರ ನನ್ನಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ರಾಜಕಾರಣಿಗಳು ಎಷ್ಟು ವರ್ಷ ಮನೆಯಲ್ಲಿ ಕೂರಲು ಸಾಧ್ಯ? ಬದಲಾವಣೆ ಬಯಸಿ ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿದ್ದೇನೆ. ಕಾಂಗ್ರೆಸ್ ಏಕೆ ಬಿಟ್ಟೆ, ಅಲ್ಲಿನ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ವಿವರಿಸುತ್ತೇನೆ ಎಂದರು. ಸದ್ಯ ನಾನು ಗೊಂದಲದಲ್ಲಿ ಇದ್ದೇನೆ. ಈ ವಿಚಾರದಲ್ಲಿ ಒಂದೇ ಬಾರಿ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ. ಪಕ್ಷಕ್ಕೆ ಹೋದರೆ ಅಲ್ಲಿ ನಮ್ಮ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡು ನಿರ್ಧರಿಸಬೇಕು ಎಂದರು.

Translate »