ಪ್ರಚಾರ ಸಾಮಗ್ರಿಗಳ ರೌದ್ರಾವತಾರಕ್ಕೆ ಬ್ರೇಕ್
ಮೈಸೂರು

ಪ್ರಚಾರ ಸಾಮಗ್ರಿಗಳ ರೌದ್ರಾವತಾರಕ್ಕೆ ಬ್ರೇಕ್

March 22, 2019

ಮೈಸೂರು: ಚುನಾವಣೆ ಎಂದರೆ ಸಾಕು ಒಂದು ಕಾಲದಲ್ಲಿ ಸಾರ್ವ ಜನಿಕ ಸ್ಥಳಗಳಲ್ಲಿ ಪ್ರಚಾರದ ಭರಾಟೆ ಬಲು ಜೋರಿರುತ್ತಿತ್ತು. ಎಲ್ಲಿ ನೋಡಿದರಲ್ಲಿ ರಾಜ ಕೀಯ ಪಕ್ಷಗಳ ಪೋಸ್ಟರ್‍ಗಳು, ಬಂಟಿಂಗ್ಸ್ ಗಳು, ಬ್ಯಾನರ್‍ಗಳು, ಕಟೌಟ್‍ಗಳು ಹಾಗೂ ಕರಪತ್ರಗಳು ಸೇರಿದಂತೆ ನಾನಾ ವಿಧದ ಪ್ರಚಾರ ಸಾಮಗ್ರಿ ರಾರಾಜಿಸುತ್ತಿದ್ದವು.

ಆದರೆ ಕೆಲ ವರ್ಷಗಳಿಂದೀಚೆಗೆ ಚುನಾ ವಣಾ ಆಯೋಗದ ಕಟ್ಟುನಿಟ್ಟಿನ ನಿಯಮಾ ವಳಿಗಳು ಇಂತಹ ಸನ್ನಿವೇಶಕ್ಕೆ ಕಡಿವಾಣ ಹಾಕಿದೆ. ಇದರ ಪರಿಣಾಮ ಚುನಾವಣೆಯ ಅಂದಿನ ಅಬ್ಬರದ ಪ್ರಚಾರದ ಕಿರಿಕಿರಿಯಿಂದ ಸಾರ್ವಜನಿಕರು ಮುಕ್ತರಾಗಿದ್ದಾರೆ. ಅದಾಗ್ಯೂ ಪಕ್ಷ ಹಾಗೂ ಅಭ್ಯರ್ಥಿಗಳು ಹಲವು ಮಿತಿ ಗಳಲ್ಲಿ ಪ್ರಚಾರ ನಡೆಸಲು ಅವಕಾಶ ನೀಡ ಲಾಗಿದೆ. ಇದೀಗ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಚಟುವಟಿಕೆಗಳು ಗರಿಗೆದರಿದ್ದರೂ ಪೋಸ್ಟರ್, ಫ್ಲೆಕ್ಸ್, ಬಂಟಿಂಗ್ಸ್ ಹಾಗೂ ಬ್ಯಾನರ್ ಸೇರಿದಂತೆ ಯಾವುದೇ ಪ್ರಚಾರ ಸಾಮಗ್ರಿ ಗಳ ಮುದ್ರಣಕ್ಕೆ ಮುದ್ರಣಾಲಯಗಳಿಗೆ ಬೇಡಿಕೆ ಒದಗಿ ಬಂದಿಲ್ಲ.

ಚುನಾವಣೆ ಪ್ರಚಾರಕ್ಕೆ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಅಂಗಡಿ-ಮುಂಗಟ್ಟು, ರಸ್ತೆ-ಗಲ್ಲಿಗಳಲ್ಲಿ ಬ್ಯಾನರ್, ಪೋಸ್ಟರ್‍ಗಳು ಜಗಜ್ಜಾಹೀರಾಗುತ್ತಿದ್ದ ಕಾಲದಲ್ಲಿ ಮುದ್ರಣಾಲಯಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿತ್ತು. ಆದರೆ ಈಗ ಅಂತಹ ಸನ್ನಿವೇಶ ಇಲ್ಲವಾಗಿದ್ದು, ಅವೂ ಆಯೋಗದ ಕಣ್ಗಾವಲಿನಲ್ಲೇ ಕೆಲಸ ಮಾಡಬೇಕಿದೆ. ಜೊತೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನವಾದ ಮಾ.29ರ ಬಳಿಕವಷ್ಟೇ ಬಹುತೇಕ ಮುದ್ರಣಾಲಯದತ್ತ ರಾಜ ಕೀಯ ಪಕ್ಷದವರು ಎಡೆತಾಕಲಿದ್ದಾರೆ.

ಅದಾಗ್ಯೂ ಚುನಾವಣಾ ಪ್ರಚಾರ ಸಾಮಗ್ರಿ ಗಳ ಮುದ್ರಣದ ಭರಾಟೆ ಸ್ಥಳೀಯವಾಗಿ ಅಷ್ಟೇನೂ ಜೋರಾಗದು ಎಂದೇ ಅಂದಾ ಜಿಸಬಹುದು. ಏಕೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭಾ ಚುನಾವಣೆ ಯಷ್ಟು ಕಾವು ಈ ಚುನಾವಣೆಯಲ್ಲಿ ಕಂಡು ಬಾರದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪ್ರಚಾರ ಸಾಮಗ್ರಿ ಗಳನ್ನು ಮಾಡಿಸಲು ಮುಂದಾಗುತ್ತವೆ. ಹೀಗಾಗಿ ಸ್ಥಳೀಯ ಮುದ್ರಕರಿಗೆ ಅಂತಹ ಲಾಭವಾಗುವ ಸನ್ನಿವೇಶ ಕಡಿಮೆ ಇದೆ.

ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಗಳೂ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಈಗಾಗಲೇ ಜಿಲ್ಲೆಯ ಮುದ್ರ ಣಾಲಯ ಮಾಲೀಕರ ಸಭೆ ನಡೆಸಿ ಪಬ್ಲಿ ಷರ್, ಪ್ರಿಂಟರ್ ಹಾಗೂ ಬ್ಯಾನರ್ ಏಜೆ ನ್ಸಿಯ ಹೆಸರು ಕಡ್ಡಾಯವಾಗಿ ಪ್ರಕಟಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ಚುನಾ ವಣಾ ಪ್ರಚಾರದ ಎಲ್ಲಾ ರೀತಿ ಮುದ್ರಣ ಗಳಿಗೆ ಸಂಬಂಧಿಸಿದಂತೆ ಅವುಗಳ ಸಮಗ್ರ ವಿವರಗಳನ್ನು `ಬಿ-ಫಾರಂ’ನಲ್ಲಿ ಭರ್ತಿ ಮಾಡಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದ್ದು, ಮುದ್ರಣಕಾರರಿಗೆ ಮಾಹಿತಿ ನೀಡಲು ಹೊಸ `ಇ-ಮೇಲ್ ಖಾತೆ’ ತೆರೆ ಯಲು ಕ್ರಮ ವಹಿಸಲಾಗಿದೆ. ಈ ಇ-ಮೇಲ್ ಖಾತೆಗೆ ಪ್ರತಿ ದಿನವೂ ಚುನಾವಣಾ ಸಾಮಗ್ರಿಗಳ ಮುದ್ರಣಾ ವಿವರಗಳ ಮಾಹಿತಿ ಒದಗಿಸಬೇಕಿದೆ.

ಪ್ಲಾಸ್ಟಿಕ್‍ಗೆ ಆದ್ಯತೆ ಬೇಡ: ಚುನಾವಣಾ ಪ್ರಚಾರದ ಬ್ಯಾನರ್, ಕರಪತ್ರಗಳು ಹಾಗೂ ಇನ್ನಿತರ ಮುದ್ರಣಗಳಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಿಲ್ಲೆಯ ಮುದ್ರಣಕಾರ ರಿಗೆ ಮೈಸೂರು ಜಿಲ್ಲಾ ಚುನಾವಣಾಧಿ ಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‍ಗೆ ಕಡಿವಾಣ ಬೀಳಲಿದ್ದು, ಇದರ ಜೊತೆಗೆ ಮೈಸೂರು ನಗರ ಪಾಲಿಕೆಯೂ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಪ್ಲಾಸ್ಟಿಕ್‍ಗೆ ಕಡಿ ವಾಣ ಬೀಳಲಿದೆ.

ಎಂ.ಬಿ.ಪವನ್‍ಮೂರ್ತಿ

Translate »