ಚುನಾವಣೆ: ಮತದಾನ ಸಂಬಂಧ ಹಿಂದೆಂದೂ ಕಂಡು  ಕೇಳರಿಯದಂತಹ ವಿಶಿಷ್ಟ ರೀತಿ `ಜಾಗೃತಿ’ ಕಾರ್ಯಕ್ರಮ
ಮೈಸೂರು

ಚುನಾವಣೆ: ಮತದಾನ ಸಂಬಂಧ ಹಿಂದೆಂದೂ ಕಂಡು ಕೇಳರಿಯದಂತಹ ವಿಶಿಷ್ಟ ರೀತಿ `ಜಾಗೃತಿ’ ಕಾರ್ಯಕ್ರಮ

March 22, 2019

ಮೈಸೂರು: ಎಲ್ಲಾ ಮತದಾರರು ಒಳಗೊಳ್ಳುವ ಸುಗಮ, ನೈತಿಕ ಚುನಾವಣೆ ಆಶಯ ದೊಂದಿಗೆ ಚುನಾವಣಾ ಆಯೋಗ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ಈಗಾಗಲೇ `ಮಿಂಚಿನ ನೋಂದಣಿ’ ಕಾರ್ಯಕ್ರಮದ ಮೂಲಕ ಹೊಸ ಮತ ದಾರರ ಸೇರ್ಪಡೆ ಕಾರ್ಯ ಮುಗಿದಿದ್ದು, ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ, ನೈತಿಕ ಮತದಾನ ಮಾಡಬೇಕೆಂಬ ಜಾಗೃತಿ ಮೂಡಿಸುವ ಕಾರ್ಯ ಅವಿರತವಾಗಿ ನಡೆ ದಿದೆ. 2014ರ ಲೋಕಸಭೆ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳ ಪಟ್ಟಿ ಮಾಡಿ, ಅಂತಹ ಸ್ಥಳಗಳಲ್ಲಿ ಹೆಚ್ಚಿನ ಪ್ರಚಾರ ನಡೆಸ ಲಾಗುತ್ತಿದೆ. ಸ್ವೀಪ್ ಸಮಿತಿಯು ಬೂತ್ ಮಟ್ಟದ ಅಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರೊಂದಿಗೆ ಮನೆ ಮನೆ ಗಳಿಗೆ ತೆರಳಿ ಕಡ್ಡಾಯ ಹಾಗೂ ನೈತಿಕ ಮತ ದಾನಕ್ಕೆ ಮನವಿ ಮಾಡುತ್ತಿದೆ. ಕರಪತ್ರಗಳ ಹಂಚುವ ಮೂಲಕ ಎಲ್ಲಾ ಮತದಾರರನ್ನೂ ಪ್ರಜಾಪ್ರಭುತ್ವ ಹಬ್ಬಕ್ಕೆ ಆಹ್ವಾನಿಸಲಾಗುತ್ತಿದೆ.

ಜನಸಂದಣಿ ಇರುವ ಸ್ಥಳಗಳಲ್ಲಿ `ನಾನು ಕಡ್ಡಾಯವಾಗಿ, ಯಾವುದೇ ಜಾತಿ, ಮತ, ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡುತ್ತೇನೆ’ ಎಂಬ ಪ್ರತಿಜ್ಞಾ ವಿಧಿ ಬೋಧಿ ಸಲಾಗುತ್ತಿದೆ. ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ದಲ್ಲಿ ಮತ ಚಲಾಯಿ ಸಿದ ಬಳಿಕ ಪಕ್ಕದಲ್ಲಿಡುವ ವಿವಿ ಪ್ಯಾಟ್‍ನಲ್ಲಿ ಖಾತ್ರಿ ಪಡಿಸಿಕೊಳ್ಳುವ ಬಗ್ಗೆ ಎಲ್ಲಾ ಮತ ಗಟ್ಟೆ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗು ತ್ತಿದೆ. ಹೆದ್ದಾರಿಗಳು, ಪ್ರಮುಖ ರಸ್ತೆಗಳು, ವೃತ್ತಗಳು ಸೇರಿದಂತೆ ಹೆಚ್ಚು ಜನ ಸಂಚಾರ ವಿರುವ ಸ್ಥಳಗಳಲ್ಲಿ ಮತದಾನದ ಮಹತ್ವ ಸಾರುವ ಹೋರ್ಡಿಂಗ್ಸ್, ಭಿತ್ತಿಪತ್ರ, ಪೋಸ್ಟರ್‍ಗಳನ್ನು ಅಳವಡಿಸಲಾಗುತ್ತಿದೆ. ಮಾಜಿ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್, ಸಾಹಿತಿ ಚಂದ್ರಶೇಖರ ಕಂಬಾರ ಸೇರಿ ದಂತೆ ಸಾಹಿತ್ಯ, ಕ್ರೀಡೆ, ಸಿನಿಮಾ ಇನ್ನಿತರ ಕ್ಷೇತ್ರಗಳ ಸಾಧಕರ ಭಾವಚಿತ್ರವುಳ್ಳ ಮತ ದಾನ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಮಾಲ್‍ಗಳು, ವಾಣಿಜ್ಯ ಸಂಕೀರ್ಣ ಗಳ ಬಳಿಯೂ ಪ್ರದರ್ಶಿಸಲಾಗಿದೆ. `ಬೆರಳಿಗೆ ಇಂಕು, ಪ್ರಜಾಪ್ರಭುತ್ವಕ್ಕೆ ಲಿಂಕು’, `ನಿಮ್ಮ ಮತ, ನಿಮ್ಮ ಹಕ್ಕು’ ಎಂಬಿತ್ಯಾದಿ ಆಕ ರ್ಷಕ ಸಾಲುಗಳೂ ಪೋಸ್ಟರ್‍ಗಳಲ್ಲಿವೆ.

ಬೆಳಕಿನ ಜಾಗೃತಿ: ಕತ್ತಲು ಸರಿಸುವ ಬೆಳ ಕಿನ ಮೂಲಕವೂ ಮತದಾನ ಜಾಗೃತಿಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ವಿಧಾನ ಸಭಾ ಚುನಾವಣಾ ಮಾದರಿಯಲ್ಲೇ ಈ ಬಾರಿಯೂ ಮೈಸೂರಿನ ಚಾಮುಂಡಿ ಬೆಟ್ಟದ ತುದಿಯಲ್ಲಿ `ನಿಮ್ಮ ಮತ ನಿಮ್ಮ ಹಕ್ಕು’ ಸಾಲುಗಳ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದೆ. ಮತದಾನದಿನ ಪೂರ್ವದ 15 ದಿನಗಳ ಕಾಲ ಈ ದೀಪಾ ಲಂಕಾರ ಇರಲಿದೆ. ಮತದಾನದಿನದ ಹಿಂದಿನ ರಾತ್ರಿ ಮೈಸೂರಿನ ಪ್ರಮುಖ ವೃತ್ತ ಗಳಿಗೆ ದೀಪಾಲಂಕಾರ ಮಾಡುವ, ಕೆ.ಆರ್.ವೃತ್ತದಲ್ಲಿ ನಾಲ್ಕು ರಸ್ತೆಗಳಿಂದ ಏಕಕಾಲಕ್ಕೆ ಪಂಜಿನ ಮೆರವಣಿಗೆ ನಡೆಸಿ, ವೃತ್ತದ ಬಳಿ ಬೆಳಕಿನ ಹಬ್ಬ ಸೃಷ್ಟಿಸುವ ಚಿಂತನೆಯೂ ಸ್ವೀಪ್ ಸಮಿತಿಯಲ್ಲಿದೆ.

ಸಾಂಸ್ಕøತಿಕ ಸಂದೇಶ: ಹಾಡು, ನಾಟಕ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ಸ್ವೀಪ್ ಸಮಿತಿ ಮುಂದಾಗಿದೆ. ಚುನಾವಣಾ ಆಯೋಗದ ನಿರ್ದೇಶನದಡಿ ಸಾಹಿತ್ಯ ರಚಿಸಿ, ಹಾಡು, ಬೀದಿ ನಾಟಕಗಳನ್ನು ಪ್ರಸ್ತುತಪಡಿ ಸಲು ಸಿದ್ಧತೆ ನಡೆದಿದೆ. ಮೈಸೂರು ನಗರದ ಎಲ್ಲಾ ವಾರ್ಡ್‍ಗಳು, ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳು, ಜನ ಸಂದಣಿ ಪ್ರದೇಶಗಳಲ್ಲಿ ಹೀಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿಗೆ ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜನೆ ರೂಪಿಸಿಕೊಂಡಿವೆ. ಜಿಲ್ಲೆಯಾ ದ್ಯಂತ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ದ್ವನಿ ಮತ್ತು ದೃಶ್ಯದ ಮೂಲಕ ಮತದಾನದ ಅರಿವು ಮೂಡಿಸಲು ಪ್ರಚಾರ ವಾಹನ ವೊಂದು ಸಜ್ಜಾಗುತ್ತಿದೆ.

ಎಲ್ಲೆಲ್ಲೂ ಅರಿವಿನ ಸಾಲು: ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗಿರಿಜನ ಕಲ್ಯಾಣ, ವಾರ್ತಾ ಮತ್ತು ಪ್ರಸಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸ್ವೀಪ್ ಸಮಿತಿ ಮತ ದಾನ ಜಾಗೃತಿ ಕಾರ್ಯದಲ್ಲಿ ಸಕ್ರಿಯ ವಾಗಿದೆ. ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಜಾಥಾ, ಪ್ರತಿಜ್ಞಾ ವಿಧಿ ಬೋಧನೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದಷ್ಟೇ ಅಲ್ಲ ಸಾರಿಗೆ ಸಂಸ್ಥೆ ಬಸ್ ಟಿಕೆಟ್, ನಂದಿನಿ ಹಾಲಿನ ಪಾಕೆಟ್, ಚೆಸ್ಕಾಂ ವಿದ್ಯುತ್ ಬಿಲ್, ವೈದ್ಯರು ನೀಡುವ ಸಲಹಾ ಚೀಟಿ, ಬ್ಯಾಂಕ್ ಗಳ ಚಲನ್‍ಗಳನ್ನೂ `ನಿಮ್ಮ ಮತ ನಿಮ್ಮ ಹಕ್ಕು. ಮರೆಯದೆ ಮತ ಚಲಾಯಿಸಿ’ ಜಾಗೃತಿ ವಾಕ್ಯವನ್ನು ಮುದ್ರಿಸಲಾಗಿದೆ.

ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢ ಗೊಳಿಸುವ ಶಕ್ತಿ, ತರಗತಿ ಕೋಣೆಗಳಲ್ಲಿವೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾ ಗಿರುವ ಕಾರಣ, ಎಳೆ ಮನಸ್ಸುಗಳಿಗೆ ಕಡ್ಡಾಯ ಹಾಗೂ ನೈತಿಕ ಮತದಾನದ ಬಗ್ಗೆ ಜಾಗೃತಿ ಬಿತ್ತಲು ಸ್ವೀಪ್ ಸಮಿತಿ ಸಾಕಷ್ಟು ಕಾರ್ಯಕ್ರಮ ನಡೆಸಿದೆ. ಇದ ರೊಂದಿಗೆ ಪ್ರಮುಖವಾಗಿ ಯುವ ಮತದಾರರು ಸೇರಿದಂತೆ ಎಲ್ಲಾ ಅರ್ಹ ಮತದಾರರನ್ನು ಮತಗಟ್ಟೆಗಳಿಗೆ ಕರೆ ತರಲು ಅವಿರತವಾಗಿ ಶ್ರಮಿಸುತ್ತಿದೆ. `ನನ್ನ ಮತ ನಿರ್ಣಾಯಕ’ ಎಂಬ ಭಾವನೆಯಿಂದ ಪ್ರತಿಯೊಬ್ಬ ಮತದಾರ ನೈತಿಕ ಹಕ್ಕು ಚಲಾಯಿಸಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಗೌರವ ನೀಡಿದಂತಾಗುತ್ತದೆ.

Translate »