ಪಾಲಿಕೆ, ಮುಡಾ ಕಚೇರಿಗಳಲ್ಲಿ ಬ್ರೋಕರ್‍ಗಳದ್ದೇ ಕಾರುಬಾರು
ಮೈಸೂರು

ಪಾಲಿಕೆ, ಮುಡಾ ಕಚೇರಿಗಳಲ್ಲಿ ಬ್ರೋಕರ್‍ಗಳದ್ದೇ ಕಾರುಬಾರು

February 6, 2020

ಮೈಸೂರು, ಫೆ.5(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆಯ ಪ್ರಧಾನ ಕಚೇರಿ ಹಾಗೂ ನಗರದಾದ್ಯಂತ ಇರುವ ಎಲ್ಲಾ 9 ವಲಯ ಕಚೇರಿ ಮಾತ್ರವಲ್ಲ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲೂ ಮಧ್ಯವರ್ತಿಗಳದ್ದೇ ಕಾರುಬಾರು!

ಬ್ರೋಕರ್‍ಗಳಿಲ್ಲದೆ ಸಾರ್ವಜನಿಕರ ಯಾವ ಕೆಲಸಗಳೂ ಆಗುವುದಿಲ್ಲ. ಆಸ್ತಿ ತೆರಿಗೆ ಪಾವತಿ, ಕಂದಾಯ ನಿಗದಿ, ಖಾತಾ ನೋಂದಣಿ, ವರ್ಗಾವಣೆ, ನಕ್ಷೆ ಅನುಮೋದನೆ, ಟ್ರೇಡ್ ಲೈಸೆನ್ಸ್, ಜನನ, ಮರಣಪತ್ರ ಹಾಗೂ ಇನ್ನಿತರ ಸೇವೆಗಳಿಗೆ ಬರುವ ಸಾರ್ವಜನಿಕ ರನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತಾಯಿಸುವುದರಿಂದ ಬೇಸತ್ತು ಜನರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಇದು ಕೇವಲ ಪಾಲಿಕೆ ಕಚೇರಿಗಷ್ಟೇ ಸೀಮಿತವಾಗಿರದೆ, ಮುಡಾ, ರೆವಿನ್ಯೂ ಇಲಾಖೆ, ಆರ್‍ಟಿಓ, ಸಬ್ ರಿಜಿಸ್ಟ್ರಾರ್ ಕಚೇರಿ, ಲೋಕೋಪಯೋಗಿ ಇಲಾಖೆಗಳಲ್ಲೂ ವ್ಯಾಪಕವಾಗಿದೆ.

ಸಿಎ ನಿವೇಶನ ಪರಭಾರೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿದ ಬಡಾ ವಣೆಗಳು, ಖಾಸಗಿ ಬಡಾವಣೆಗಳಲ್ಲಿ ಮೀಸಲಾಗಿರುವ ಸಿಎ (ನಾಗರಿಕ ಸೌಲಭ್ಯ) ನಿವೇಶನಗಳನ್ನೂ ಮುಡಾ ಅಧಿಕಾರಿಗಳು ಪರಭಾರೆ ಮಾಡಿ ಖಾತೆ ಮಾಡಿ, ಕಂದಾಯ ನಿಗದಿ ಮಾಡಿಕೊಡುತ್ತಿರುವುದು ಕಂಡು ಬಂದಿದೆ. ಮೈಸೂರಿನ ಹೆಬ್ಬಾಳು, ವಿಜಯ ನಗರ, ಜೆ.ಪಿ.ನಗರ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿರುವ ಸಿಎ ನಿವೇಶನಗಳಿಗೂ ಖಾತೆ ಮಾಡುವ ಮುಡಾ ಅಧಿಕಾರಿಗಳು ಅಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳಿಗೂ ಪ್ಲಾನ್ ಅಪ್ರೂವ್ ಮಾಡಿ ಕಡೆಗೆ ಸಿಆರ್ ನೀಡುತ್ತಿ ರುವ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ ಮುಡಾ ನಕಲಿ ದಾಖಲೆ ಸೃಷ್ಟಿಸಿ, ಕಬಳಿಸಿದ್ದ ನಿವೇಶನಗಳ ಅಕ್ರಮ ಮಂಜೂರಾತಿ ರದ್ದುಪಡಿಸಿ, ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿತ್ತು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸರಿಯಾದ ದಾಖಲೆ ಒದಗಿಸದೇ, ನಿಗಾ ವಹಿಸದೇ ಇರುವುದರಿಂದ ಇಂತಹ ಆಸ್ತಿಗಳಲ್ಲಿ ಬಹುತೇಕ ಆಸ್ತಿ ಮುಡಾ ಕೈತಪ್ಪಿದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Translate »