ವಾರದಲ್ಲಿ ನಿಮ್ಮ ಕಾನೂನು ಅವಕಾಶಗಳನ್ನೆಲ್ಲಾ ಮುಗಿಸಿ
ಮೈಸೂರು

ವಾರದಲ್ಲಿ ನಿಮ್ಮ ಕಾನೂನು ಅವಕಾಶಗಳನ್ನೆಲ್ಲಾ ಮುಗಿಸಿ

February 6, 2020

ನವದೆಹಲಿ, ಫೆ.5- ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆ ಜಾರಿಯಾಗುವುದನ್ನು ಕಳೆದ ವಾರ ತಡೆಹಿಡಿದ ದೆಹಲಿ ಪಟಿಯಾಲಾ ನ್ಯಾಯಾ ಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

`ಈ ನಾಲ್ವರೂ ಅಪರಾಧಿಗಳನ್ನು ಒಟ್ಟಿಗೇ ಗಲ್ಲಿಗೇರಿಸ ಬೇಕು. ಬೇರೆಬೇರೆಯಾಗಿ ನೇಣಿಗೆ ಹಾಕುವಂತಿಲ್ಲ’ ಎಂದು ಸೂಚನೆ ನೀಡಿದ ಹೈಕೋರ್ಟ್ ನ್ಯಾಯಾಧೀಶ ಸುರೇಶ್‍ಕುಮಾರ್ ಖೇತ್ ಅವರು, ಅಪರಾಧಿಗಳು ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಿದ್ದರೂ, ಅರ್ಜಿ ಸಲ್ಲಿಸುವುದಿದ್ದರೂ ಇನ್ನೊಂದು ವಾರದಲ್ಲಿ ಅದನ್ನೆಲ್ಲ ಪೂರ್ಣಗೊಳಿಸಿಕೊಳ್ಳಬೇಕು ಎಂದು ಕಾಲಮಿತಿಯನ್ನೂ ವಿಧಿಸಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ತಮಗೆ ವಿಧಿಸಲಾಗಿರುವ ಮರಣದಂಡನೆಯನ್ನು ವಿಳಂಬಗೊಳಿಸಿ ಕೊಳ್ಳಲು ಲೆಕ್ಕಾಚಾರ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ದರು. ಅಪರಾಧಿಗಳು ಮರಣದಂಡನೆ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ ಎಂದು ವಾದಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ನಾಲ್ವರು ಅಪ ರಾಧಿಗಳಿಗೆ ಸುಪ್ರೀಂಕೋರ್ಟ್ 2017ರಲ್ಲಿಯೇ ಮರಣ ದಂಡನೆ ಶಿಕ್ಷೆ ಖಚಿತಪಡಿಸಿದೆ. ಬಳಿಕ ಡೆತ್ ವಾರಂಟ್ ಜಾರಿ ಮಾಡುವಲ್ಲಿ ಯಾರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ಪವನ್ ಗುಪ್ತಾ, ವಿನಯ್‍ಕುಮಾರ್ ಶರ್ಮಾ, ಅಕ್ಷಯ್‍ಕುಮಾರ್ ನನ್ನು ಫೆ.1ರಂದೇ ನೇಣಿಗೇರಿಸಬೇಕಿತ್ತು. ಆದರೆ ಕೆಲವು ಕಾನೂನು ಪ್ರಕ್ರಿಯೆಗಳಿಂದಾಗಿ ದೆಹಲಿಯ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ಜಾರಿಗೆ ತಡೆ ನೀಡಿತು.

ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದವು. ಫೆ.2ರಂದು ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಸುರೇಶ್ ಕುಮಾರ್ ಖೇತ್, ಬುಧವಾರಕ್ಕೆ ತೀರ್ಪು ಕಾಯ್ದಿರಿಸಿದ್ದರು.

ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಬಾಕಿ ಉಳಿದಿ ದ್ದರೆ, ಇತರ ಅಪರಾಧಿಗಳನ್ನು ನೇಣಿಗೇರಿಸಬಹುದು ಎಂದು ದೆಹಲಿ ಜೈಲು ನಿಯಮಗಳು ಹೇಳುವುದಿಲ್ಲ. ಸುಪ್ರೀಂ ಕೋರ್ಟ್‍ವರೆಗೂ ನಾಲ್ವರೂ ಅಪರಾಧಿಗಳ ಹಣೇಬರಹ ಒಂದೇ ತೀರ್ಪಿನಿಂದ ನಿರ್ಧಾರವಾಗಿದೆ. ಎಲ್ಲಾ ಅಪರಾಧಿಗಳ ಗಲ್ಲು ಶಿಕ್ಷೆ ಒಟ್ಟಿಗೇ ಜಾರಿಯಾಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ನ್ಯಾಯಮೂರ್ತಿಗಳು ಹೇಳಿದರು

Translate »