ವೇತನ ಬಾಕಿಗೆ ಆಗ್ರಹಿಸಿ ಮೈಸೂರಿನಲ್ಲಿ ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಮೈಸೂರು

ವೇತನ ಬಾಕಿಗೆ ಆಗ್ರಹಿಸಿ ಮೈಸೂರಿನಲ್ಲಿ ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

February 25, 2019

ಮೈಸೂರು: ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಬಿಎಸ್‍ಎನ್‍ಎಲ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಬಿಎಸ್‍ಎನ್‍ಎಲ್ ನಾನ್ ಪರ್ಮನೆಂಟ್ ಎಂಪ್ಲಾಯಿಸ್ ಯೂನಿಯನ್‍ನ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಘಟಕ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಯಲಕ್ಷ್ಮೀಪುರಂನ ಬಿಎಸ್‍ಎನ್‍ಎಲ್ ಸಂಸ್ಥೆಯ ದೂರ ಸಂಪರ್ಕ ಮಹಾಪ್ರಬಂಧಕರ ಕಾರ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ವೇತನ ನೀಡದೇ ದುಡಿಸಿಕೊಳ್ಳುತ್ತಿರುವುದು ಅತ್ಯಂತ ಅಮಾನವೀಯ. ಇದು 1970ರ ಗುತ್ತಿಗೆ ಕಾರ್ಮಿಕರ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಎಸ್‍ಎನ್‍ಎಲ್ ಆಡಳಿತ ಮಂಡಳಿ ವೇತನ ನೀಡುವ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇತನ ಪಾವತಿ ಮಾಡದಿರುವ ಸಂಬಂಧ ಪ್ರಧಾನ ವ್ಯವಸ್ಥಾಪಕರು, ರಾಜ್ಯ ವಲಯ ಅಧಿಕಾರಿಗಳು ಹಾಗೂ ದೆಹಲಿಯ ಉನ್ನತಾಧಿಕಾರಿಗಳಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರ ಜೊತೆಗೆ ಕಾರ್ಮಿಕರು ಸಂಘಟಿತ ರಾಗುವುದನ್ನು ಸಹಿಸದೇ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ 6 ಮಂದಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಹೀಗಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೇ ಸಂಸ್ಥೆಯ ಸ್ಥಳೀಯ ಪ್ರಧಾನ ವ್ಯವಸ್ಥಾಪಕರು ನ್ಯಾಯಾಂಗದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಹಂತ ಹಂತವಾಗಿ ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಮೂಲಕ ಸಾರ್ವಜನಿಕ ಉದ್ಯಮದಿಂದ ಮುಕ್ತಗೊಳಿಸಲು ಮುಂದಾಗಿದೆ. ಕೂಡಲೇ ಸರ್ಕಾರ ತನ್ನ ನಿಲುವುಗಳನ್ನು ಬದಲಿಸಿಕೊಂಡು ಸಂಸ್ಥೆಯ ಬೆಳವಣಿಗೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡಬೇಕು. ಬಿಎಸ್‍ಎನ್‍ಎಲ್ ಗ್ರಾಹಕರಿಗೂ 4ಜಿ ತರಾಂಗ ಸೌಲಭ್ಯ ಕಲ್ಪಿಸಿ ಸಂಸ್ಥೆಯ ಪ್ರಗತಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಕಾರ್ಯದರ್ಶಿ ಹೆಚ್.ಎಸ್.ಜಗದೀಶ್ ಸೇರಿದಂತೆ ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »