ಮೈಸೂರು: ಬಿಎಸ್‍ಎನ್‍ಎಲ್ ಕಳಪೆ ಸೇವೆ, ಅಧಿಕಾರಿಗಳ ಗೈರು ಹಾಜರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತು ವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಸಂಬಂಧ ಸಂಸದ ರಿಬ್ಬರೂ ಕಿಡಿಕಾರಿದರು.
ಕಳೆದ ಸಭೆಯಲ್ಲಿ ಬಿಎಸ್‍ಎನ್‍ಎಲ್ ಸೇವೆ ಬಗ್ಗೆ ಕೇಳಿ ಬಂದಿದ್ದ ದೂರಿಗೆ ಸಂಬಂ ಧಿಸಿದಂತೆ ಅಧಿಕಾರಿಗಳು ನೀಡಿದ ಅನು ಪಾಲನ ವರದಿ ಹಿನ್ನೆಲೆಯಲ್ಲಿ ಮಾತನಾ ಡಿದ ಆರ್.ಧ್ರುವನಾರಾಯಣ್, ನೀವು ಅಧಿಕಾರಿಗಳು ಬಿಎಸ್‍ಎನ್‍ಎಲ್ ಮುಚ್ಚಲು ನಿರ್ಧರಿಸಿದ್ದೀರಾ? ಬಹಳ ಕಡೆ ನೆಟ್‍ವರ್ಕ್ ಇರೋಲ್ಲ. ಇಂಟರ್‍ನೆಟ್ ಸೌಲಭ್ಯದ ಬಗ್ಗೆಯೂ ದೂರುಗಳಿವೆ. ಇಂದು ಎಲ್ಲವೂ ಕಂಪ್ಯೂಟರಿಕರಣಗೊಂಡಿದ್ದು, ಇಂಟರ್ ನೆಟ್ ಇಲ್ಲದೇ ಯಾವುದೇ ಕೆಲಸ ಆಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಮೈಸೂರು ತಾಪಂ ಇಓ ಲಿಂಗರಾಜಯ್ಯ ಮಾತನಾಡಿ, ಬಿಎಸ್ ಎನ್‍ಎಲ್‍ನ ಇಂಟರ್‍ನೆಟ್ ಸಮಸ್ಯೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ದೂರು ಹೇಳಿ ಕೊಂಡರೂ ಕೂಡಲೇ ಸ್ಪಂದಿಸುವುದೂ ಇಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಬಿಎಸ್‍ಎನ್‍ಎಲ್ ಅಧಿಕಾರಿ, ಪ್ರಸ್ತುತ ಬಿಎಸ್‍ಎನ್‍ಎಲ್ ಇಂಟರ್‍ನೆಟ್ ಸೇವೆ ಯಲ್ಲಿ ವೇಗದ ಸಮಸ್ಯೆ ಇದೆ. ನಮ್ಮ ಕಡೆ ಯಿಂದ ಅಂತಹ ಯಾವುದೇ ತೊಂದರೆ ಆಗದಂತೆ ಸೇವೆ ನೀಡಲಾಗುತ್ತಿದೆ ಎಂದರು.
ಸಭೆ ನಡೆಸಿ ಸಮಸ್ಯೆ ಬಗೆಹರಿಸಿ: ಬಳಿಕ ಮಾತನಾಡಿದ ಆರ್.ಧ್ರುವನಾರಾಯಣ್, ಸಮಸ್ಯೆ ಹೇಳಿದ ಒಬ್ಬ ತಾಪಂ ಇಓ ಅವ ರಿಗೇ ನೀವು ಸ್ಪಂದಿಸದಿದ್ದರೆ, ಸಾಮಾನ್ಯ ಜನರೊಂದಿಗೆ ನಿಮ್ಮ ವರ್ತನೆ ಇನ್ನು ಹೇಗೆ ಇರುತ್ತದೊ? ಎಂದು ಕಿಡಿಕಾರಿದರಲ್ಲದೆ, ತಾಪಂ ಸಭೆಗಳಲ್ಲೂ ಬಿಎಸ್‍ಎನ್‍ಎಲ್ ಅಧಿಕಾರಿ ಗಳು ಹಾಜರಿರಬೇಕು ಎಂದು ತಾಕೀತು ಮಾಡಿದರು. ಅಲ್ಲದೆ, ತಾಪಂ ಇಓಗಳು ಹಾಗೂ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿ ಪಂಚಾಯಿತಿಗಳಿಗೆ ಬಿಎಸ್ ಎನ್‍ಎಲ್ ಸೇವೆ ಸಮರ್ಪಕವಾಗಿ ದೊರೆಯು ವಂತೆ ಕ್ರಮ ಕೈಗೊಳ್ಳಲು ಜಿಪಂ ಸಿಇಓ ಕೆ. ಜ್ಯೋತಿ ಅವರಿಗೆ ನಿರ್ದೇಶನ ನೀಡಿದರು.
ಕೊಡಗಿನಲ್ಲಿ ಆನೆ ದಾಳಿಯಿಟ್ಟರೆ ಈ ಬಗ್ಗೆ ಪೊಲೀಸ್ ಠಾಣೆ, ಅರಣ್ಯ ಇಲಾಖೆಗೆ ಫೋನ್ ಮಾಡಲು ಸಾಧ್ಯವಾದ ಮಟ್ಟಿಗೆ ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಅಲ್ಲಿದೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದ ಸಂಸದ ಪ್ರತಾಪ್ ಸಿಂಹ, ನಿಮ್ಮ ಜಿಎಂ ಜಯರಾಮ್ ಅವರು ಬೃಹಸ್ಪತಿಯಂತೆ ಮಾತ ನಾಡುತ್ತಾರೆ. ದೂರಸಂಪರ್ಕದ ತಂತ್ರಜ್ಞಾನ, ತಾಂತ್ರಿಕತೆ ಬಗ್ಗೆ ನಮಗೆ ಅರಿವಿಲ್ಲ ಎಂದು ಭಾವಿಸಬೇಡಿ ಎಂದು ಕಿಡಿಕಾರಿದರು.
ಮಾಮೂಲಿಗಾಗಿ ಕಿರುಕುಳ: ನಜರ್ ಬಾದಿನಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇ ಶನಾಲಯದಲ್ಲಿ ಅಧಿಕಾರಿಗಳು ಮಾಮೂ ಲಿಗಾಗಿ (ಲಂಚ) ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ಹೆಚ್ಚು ಆರೋಪಗಳು ಕೇಳಿ ಬರುತ್ತಿದ್ದು, ಈ ಸಂಬಂಧ ಪರಿಶೀ ಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಅವರಿಗೆ ಸಂಸದ ಪ್ರತಾಪ್ ಸಿಂಹ ನಿರ್ದೇಶನ ನೀಡಿದರು. ಪರಿವಾರ ಹಾಗೂ ತಳವಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ಕೇಂದ್ರವೂ ಅಂಗೀಕರಿಸಿದೆ. ಇದನ್ನು ಸಂಸತ್‍ನಲ್ಲಿ ಪ್ರಸ್ತಾ ಪಿಸುವುದಷ್ಟೇ ಬಾಕಿ. ಇದೆಲ್ಲಾ ತಿಳಿದಿದ್ದರೂ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣದ ಉದ್ದೇ ಶಕ್ಕೆ ಜಾತಿ ಪ್ರಮಾಣ ಪತ್ರ ನೀಡುವುದಕ್ಕೂ ನಿರಾಕರಿಸಿರುವ ಉದಾಹರಣೆಗಳಿವೆ. ಜೊತೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ರಾಮಕೃಷ್ಣ, ಶಿವಕುಮಾರ್ ಎಂಬುವವರಿಗೆ ವಿನಾಕಾರಣ ನೋಟೀಸ್ ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಸಮು ದಾಯದವರಿಗೆ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಅವರಿಗೆ ಪ್ರತಾಪ್‍ಸಿಂಹ ಸೂಚಿಸಿದರು. ಶಾಸಕರಾದ ಡಾ.ಯತೀಂದ್ರ, ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.
ಬೆಂಬಲ ಬೆಲೆಯಡಿ ಡಿ.16ರಿಂದ ಭತ್ತ ಖರೀದಿ
ಮೈಸೂರು: ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿಸಲು ಡಿ.16ರಿಂದ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಮೈಸೂರು ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಈ ವಿಷಯ ತಿಳಿಸಿದರು. ಜಿಲ್ಲೆಯಲ್ಲಿ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಮುಂದಿನ ವಾರದಲ್ಲಿ ಬೆಳೆ ಕಟಾವು ಆರಂಭವಾಗಲಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ಈಗಾಗಲೇ ಭತ್ತಕ್ಕೆ 1,750 ರೂ. ಬೆಂಬಲ ಬೆಲೆ ನಿಗದಿಗೊಳಿಸಿದೆ. ಖರೀದಿ ಕೇಂದ್ರಗಳ ಸ್ಥಾಪನೆಗೆ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ನಂಜನಗೂಡು, ಕೆಆರ್ ನಗರ, ತಿ.ನರಸೀಪುರ ತಾಲೂಕಿನಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹೀಗೆ ಹೆಚ್ಚಾಗಿ ಭತ್ತ ಬೆಳೆಯುವ ತಾಲೂಕು ಕೇಂದ್ರಗಳಲ್ಲಿ ಹೆಚ್ಚುವರಿ ಖರೀದಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಡಿ.1ರಿಂದ 15ರವರೆಗೆ ಭತ್ತ ಮಾರಾಟ ಮಾಡುವ ರೈತರ ನೋಂದಣಿ ಮಾಡಿಕೊಳ್ಳಬೇಕು. ಡಿ.16 ರಿಂದ ಮೂರು ತಿಂಗಳವರೆಗೆ ಆಹಾರ ಇಲಾಖೆಯಿಂದ ಭತ್ತ ಖರೀದಿ ಮಾಡಲಿದ್ದು, ಖರೀದಿಸಿದ ಒಂದು ವಾರದೊಳಗೆ ಸಂಬಂಧ ಪಟ್ಟ ರೈತರ ಖಾತೆಗೆ ಹಣ ಜಮಾವಣೆ ಆಗಲಿದೆ ಎಂದು ಹೇಳಿದರು.