ಬಿಎಸ್‍ಎನ್‍ಎಲ್ ಕಚೇರಿಗಳಲ್ಲಿ ಮಾನವ ಸಂಪನ್ಮೂಲ ಸೇವೆ ಒದಗಿಸುವ ಟೆಂಡರ್ ಬಗ್ಗೆ ಆಕ್ಷೇಪ
ಮೈಸೂರು

ಬಿಎಸ್‍ಎನ್‍ಎಲ್ ಕಚೇರಿಗಳಲ್ಲಿ ಮಾನವ ಸಂಪನ್ಮೂಲ ಸೇವೆ ಒದಗಿಸುವ ಟೆಂಡರ್ ಬಗ್ಗೆ ಆಕ್ಷೇಪ

September 7, 2018

ಮೈಸೂರು: ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಬಿಎಸ್ ಎನ್‍ಎಲ್ (ಪ್ರಧಾನ ವ್ಯವಸ್ಥಾಪಕರು-ಟೆಲಿಕಾಂ) ಕಚೇರಿ ವ್ಯಾಪ್ತಿಯಲ್ಲಿ ಮಾನವ ಸಂಪನ್ಮೂಲ ಸೇವೆ ಒದಗಿಸುವ ಸಂಬಂಧ ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳಿಗೆ ಅವಕಾಶ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಸ್.ಎಂ.ಪ್ರಸಾದ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸಲು ಕಾನೂನುಬಾಹಿರ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಹೌಸ್ ಕೀಪಿಂಗ್, ಸ್ವಚ್ಛತೆ ಹಾಗೂ ಕಾವಲುಗಾರಿಕೆ ಸೇವೆ ಒದಗಿಸುವ ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು. ಹಲವು ವರ್ಷಗಳಿಂದ ಟೆಂಡರ್ ಕರೆದು ಪರಿಶೀಲಿಸಿ ಸೇವಾ ಶುಲ್ಕದಲ್ಲಿ ಒಂದೇ ದರಪಟ್ಟಿ ನಮೂದಿಸುವ ಎಲ್-1 ಸಂಸ್ಥೆಗಳಿಗೆ ಸಮಾನಾಂತರವಾಗಿ ಹಂಚಿಕೆ ಮಾಡಿ ಸೇವೆ ಒದಗಿಸಲು ಅನುವು ಮಾಡಲಾಗುತ್ತಿತ್ತು. ಇದೀಗ ಕರೆದಿರುವ ಟೆಂಡರ್‍ಗಳಲ್ಲಿ ಸದರಿ ಸೇವೆಗಳನ್ನು ಒದಗಿಸಲು ಯಾವ ಸಂಸ್ಥೆ ತನ್ನ 3 ವರ್ಷಗಳ ವಾರ್ಷಿಕ ವಹಿವಾಟಿನಲ್ಲಿ ಹೆಚ್ಚಿನ ಪ್ರಮಾಣದ ವಹಿವಾಟು ನಡೆಸಿದೆ ಎಂಬುದರ ಆಧಾರದಲ್ಲಿ ಎಲ್ಲಾ ಸೇವೆಗಳನ್ನು ಅಂತಹ ಒಂದೇ ಸಂಸ್ಥೆಗೆ ನೀಡಲು ಮುಂದಾಗಿದ್ದಾರೆ. ಈ ರೀತಿಯ ಕ್ರಮವು ಕೆಟಿಪಿಪಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಆಪಾದಿಸಿದರು. ಜಯಲಕ್ಷ್ಮೀಪುರಂನ ಬಿಎಸ್‍ಎನ್‍ಎಲ್ ಕಚೇರಿಯ ಈ ಕಾರ್ಯವೈಖರಿ ಸಂಬಂಧ ಈಗಾಗಲೇ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಿದ್ದರೂ ಸದರಿಯವರು ಒಂದೇ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಹೊರಟಿದ್ದು, ಕೂಡಲೇ ಇದರಿಂದ ಹಿಂದೆ ಸರಿದು
ಈ ಹಿಂದಿನಂತೆ ಟೆಂಡರ್ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದರು. ಸಮಿತಿಯ ಜಿ.ಡಿ.ಮಹಾದೇವಸ್ವಾಮಿ, ಜ್ಯೋತಿ ಪ್ರಭಾ, ಮಂಜುಳ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »