ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಹಚಾರ ಬಿಡಿಸಬೇಕಾಗುತ್ತೆ…
ಮೈಸೂರು

ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಹಚಾರ ಬಿಡಿಸಬೇಕಾಗುತ್ತೆ…

August 3, 2019

ಬೆಂಗಳೂರು, ಆ. 2 (ಕೆಎಂಶಿ)- ಸಾರ್ವಜನಿಕ ಸಮಸ್ಯೆಗಳ ಕಡತಗಳನ್ನು ಇಟ್ಟುಕೊಂಡು ಧೂಳಿಡಿಸುವ ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಬೇಕಾಗು ತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸಮಸ್ಯೆ ಪರಿಹಾರ ಮಾಡುವುದು ನಮ್ಮ ಸರ್ಕಾ ರದ ಮೊದಲ ಆದ್ಯತೆ. ಯಾವುದೇ ಕಡತ ನಿಮ್ಮ ಬಳಿ ಬಂದರೆ ಮೂರು ದಿನದಲ್ಲಿ ಅದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕೆಂದು ಜಿಲ್ಲಾಡಳಿತಕ್ಕೆ ಕಟ್ಟಾ ದೇಶ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯ ದರ್ಶಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳನ್ನು ದ್ದೇಶಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಮುಖ್ಯ ಮಂತ್ರಿಯವರು, ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದರೆ ಮುಖ್ಯ ಮಂತ್ರಿ ಹಾಗೂ ಸಚಿವರನ್ನು ಹುಡುಕಿಕೊಂಡು ರಾಜಧಾನಿವರೆಗೆ ಯಾಕೆ ಬರ್ತಾರೆ ಎಂದು ಖಾರ ವಾಗಿ ಪ್ರಶ್ನಿಸಿದರು. ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಹೂಡ ಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಎರಡು ಬಾರಿ ಜಿಲ್ಲಾ ಪ್ರವಾಸ ಕೈಗೊಂಡು ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಹಾಗೂ ತಾಲೂಕು ಕಚೇರಿಗಳಿಗೂ ಸಾರ್ವಜನಿಕರು ಅಲೆದಾಡುವಂತೆ ಮಾಡಬಾರದು. ಬರ ಹಾಗೂ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸ್ಥಿತಿ ನಿರ್ವಹಣೆ ಮಾಡುವಾಗ, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಕಾನೂನಿನ ನೆಪವೊಡ್ಡಿ ನಿರಾಕರಿ ಸುವುದು ಅಕ್ಷಮ್ಯ. ಕಾನೂನು ಇರುವುದೇ ಜನರ ಸೇವೆಗಾಗಿ, ಕಾನೂನು ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರವಾಸದ ಬಗ್ಗೆ ನಾನು ಪ್ರತಿ ತಿಂಗಳು ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತರೆ ಸಮಸ್ಯೆ ಗೊತ್ತಾಗುವುದಿಲ್ಲ. ಗ್ರಾಮೀಣ ಭಾಗಕ್ಕೆ ಹೋದರೆ ಗೊತ್ತಾಗುತ್ತದೆ ಎಂದರು. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಯಾವುದೋ ದುರಾಸೆಗೆ ಅವರನ್ನು ಅಲೆಸುವ ಕೆಲಸ ಮಾಡಬೇಡಿ. ನನಗೆ ನಿಮ್ಮ ಬಗ್ಗೆ ದೂರುಗಳು ಬಂದರೆ, ಯಾವುದೇ ಕ್ಷಣದಲ್ಲಿ ನಿಮ್ಮ ಕಚೇರಿಗೆ ಹಠಾತ್ ಭೇಟಿ ಮಾಡಿ, ಪರಿಶೀಲನೆ ಮಾಡುತ್ತೇನೆ. ಈ ಸಂದರ್ಭದಲ್ಲಿ ಕಡತಗಳನ್ನು ಕೊಳೆಯಲು ಬಿಟ್ಟಿದ್ದರೆ, ನಿಮಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಇಷ್ಟನ್ನು ನಿಮಗೆ ಹೇಳಿ ನಾನು ಎದ್ದು ಹೋಗುವವನಲ್ಲ. ಯಾವ್ಯಾವ ಅಧಿಕಾರಿಗಳು ಎಲ್ಲೆಲ್ಲಿ ಹೋಗಿದ್ದೀರಿ ಎಂಬ ಕುರಿತು ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ನೇರವಾಗಿ ಎಚ್ಚರಿಸಿದ ಅವರು,ನಮ್ಮ ಕಾನೂನುಗಳು ಬಡವರು, ಪರಿಶಿಷ್ಟರು, ಕಾರ್ಮಿಕರ ಬದುಕಿಗೆ ಚೈತನ್ಯ ನೀಡಬೇಕೇ ಹೊರತು ಅಡ್ಡಿಯಾಗಬಾರದು ಎಂದು ಕಿವಿ ಮಾತು ಹೇಳಿದರು. ತೆರಿಗೆ ಹಣದಿಂದ ಬದುಕುತ್ತಿದ್ದೇವೆ ಎಂಬ ಪ್ರಜ್ಞೆ ಇಲ್ಲದಿದ್ದರೆ ನಾವೆಲ್ಲ ಇದ್ದೂ ಸತ್ತಂತೆ ಎಂಬುದನ್ನು ಮರೆಯಬೇಡಿ. ಆಡಳಿತ ಯಂತ್ರ ಚುರುಕಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಮನೆಗೆ ಹೋಗಲು ತಯಾರಿರಬೇಕು. ರಾಜ್ಯದ ಜನ ತಮ್ಮ ಕೆಲಸಗಳಿಗೆ ರಾಜಧಾನಿಗೆ ಅಲೆದಾಡದಂತೆ ನೋಡಿಕೊಳ್ಳಬೇಕು ಎಂದರೆ ಜಿಲ್ಲಾಡಳಿತ ಚುರುಕಾಗಬೇಕು. ಕಾನೂನಿನ ನೆಪದಲ್ಲಿ ಅವರ ಕೆಲಸಗಳಿಗೆ ಕಡಿವಾಣ ಹಾಕುವ ಪ್ರವೃತ್ತಿ ತಪ್ಪಬೇಕು. ನೀವು ಖುದ್ದಾಗಿ ಜನರ ಕಷ್ಟಗಳನ್ನು ನೋಡಿ ಬನ್ನಿ. ಆಗ ಆಡಳಿತ ಯಾವ್ಯಾವ ಹಂತಗಳಲ್ಲಿ ಚುರುಕಾಗಬೇಕು ಎಂಬುದು ನಿಮಗೇ ಅರಿವಾಗುತ್ತದೆ ಎಂದ ಅವರು, ಹಿರಿಯ ಅಧಿಕಾರಿಗಳು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗಿ. ಅದು ನಿಮ್ಮ ಕೆಳಗಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೂ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದರು.

ಇದೇ ರೀತಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ಹಠಾತ್ ಭೇಟಿ ನೀಡಬೇಕು. ಕಚೇರಿಗಳಿಗೆ ಅಂಟಿಕೊಂಡು ಕೂರುವ ಬದಲು ಈ ರೀತಿ ಹಳ್ಳಿಗಳಲ್ಲಿ ಪ್ರವಾಸ ಮಾಡಿದರೆ ತಳ ಮಟ್ಟದ ಸಮಸ್ಯೆಗಳ ಅರಿವಾಗುತ್ತದೆ ಎಂದರು. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು. ನಿಮ್ಮ ಮೇಲೆ ಶಾಸಕರು ಬಂದು ದೂರು ನೀಡಿದರೂ ನಾನು ಗಮನ ಕೊಡುವುದಿಲ್ಲ. ಬದಲಿಗೆ ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಅವರು ಭರವಸೆ ನೀಡಿದರು. ನನಗೆ ನನ್ನ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಇವತ್ತು ಒಂದೆಡೆ ಪ್ರವಾಹ ಪರಿಸ್ಥಿತಿ, ಮತ್ತೊಂದೆಡೆ ಬರಗಾಲದ ಪರಿಸ್ಥಿತಿ. ಈ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ನಿಮ್ಮ ಗುರಿಯಾಗಿರಲಿ.

ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ನೀಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ವಾರ ಗಡುವು ನೀಡುತ್ತೇನೆ. ಇರುವ ಎಲ್ಲ ಪ್ರಕರಣ ಇತ್ಯರ್ಥಗೊಳಿಸಬೇಕು. ಇಲ್ಲದಿದ್ದರೆ ಸುಮ್ಮನಿರಲ್ಲ ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ರಾಜ್ಯದ ನೂರಾ ಐದು ತಾಲೂಕುಗಳಲ್ಲಿ ಅಂತರ್ಜಲ ಕುಸಿದಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತಳ ಹಿಡಿದಿದೆ. ಪರಿಸ್ಥಿತಿಯ ಈ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಿ. ಜನ ಗುಳೆ ಹೋಗದಂತೆ ನೋಡಿಕೊಳ್ಳಿ. ಜಾನುವಾರುಗಳು ಮೇವು, ನೀರು ಸಿಗದೆ ಚಡಪಡಿಸುವಂತಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದರು.

ಬರಪೀಡಿತ ಪ್ರದೇಶದ ಅಧಿಕಾರಿಗಳಿಗೆ ಮೂರು ತಿಂಗಳು ಸರ್ಕಾರಿ ರಜೆ ಇಲ್ಲ. ಹಾಗೆಯೇ ಶನಿವಾರ, ಭಾನುವಾರವೂ ಕಾರ್ಯನಿರ್ವಹಿಸುವಂತೆ ಸಿಎಂ ಸೂಚಿಸಿದರು.

ಸಂಪುಟ ವಿಸ್ತರಣೆ: ಆ.5ಕ್ಕೆ ಬಿಎಸ್‍ವೈ ದೆಹಲಿ ಭೇಟಿ

ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರ ಜೊತೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 5 ರಂದು ದೆಹಲಿಗೆ ತೆರಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವುದಾದರೆ ಕಾರ್ಯಕರ್ತರ ಅಭಿಪ್ರಾಯವನ್ನು ಪರಿಗಣಿಸಿಯೇ ಪಕ್ಷ ತೀರ್ಮಾನಿಸಲಿದೆ. ಅನರ್ಹಗೊಂಡಿರುವ 17 ಮಂದಿ ಶಾಸಕರು ಎಲ್ಲಿಯೂ ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದು ಹೇಳಲಿಲ್ಲ. ಒಂದು ವೇಳೆ ನಮ್ಮ ಪಕ್ಷದ ತತ್ವ, ಸಿದ್ದಾಂತ ಒಪ್ಪಿಕೊಂಡು ಬರುವುದಾದರೆ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಲಾ ಗುವುದು.  ಈ ವಿಷಯದಲ್ಲಿ ನಾವು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅನರ್ಹ ಗೊಂಡಿರುವ ಶಾಸಕರಿಗೂ, ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ.

ದೋಸ್ತಿ ಸರ್ಕಾರದಲ್ಲಿ ಉಂಟಾದ ಭಿನ್ನಮತದಿಂದಾಗಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ಅನರ್ಹರಿಗೆ ಜಯ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜಡ್ಡುಗಟ್ಟಿದ್ದ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಮೈತ್ರಿ ಸರ್ಕಾರದ ಇಡೀ ಸಂಪುಟ ಸಭೆ ಮಾಡದಿರುವ ಕೆಲಸವನ್ನು ಬಿಎಸ್‍ವೈ ಒಬ್ಬರೇ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.ಈ ಬಾರಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನ ನೋಂದಣಿಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ನಮ್ಮ ನಿರೀಕ್ಷೆಗೂ ಮೀರಿದ ನೋಂದಣಿಯಾಗಿದೆ. ಸುಮಾರು ಐದು ಲಕ್ಷ ಮುಸ್ಲಿಮರಿಗೆ ಬಿಜೆಪಿ ಸದಸ್ಯತ್ವ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

 

 

Translate »