ಮೈಸೂರಲ್ಲಿ ಬುದ್ಧ ಜಯಂತಿ: ಬುದ್ಧ ರಥದ ಅದ್ಧೂರಿ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಬುದ್ಧ ಜಯಂತಿ: ಬುದ್ಧ ರಥದ ಅದ್ಧೂರಿ ಮೆರವಣಿಗೆ

May 19, 2019

ಮೈಸೂರು: ಇಡೀ ಜಗತ್ತಿಗೆ ಶಾಂತಿ- ಸಹಬಾಳ್ವೆ, ಸಾಮರಸ್ಯದ ಸಂದೇಶ ಸಾರಿ, ಪ್ರೀತಿ-ಕರುಣೆ ಹಾಗೂ ವಿಶ್ವಾಸದ ಮಹತ್ವ ತಿಳಿಸಿದ ಬುದ್ಧ ಜಯಂತಿಯ ಸಂಭ್ರಮ ಶನಿವಾರ ಮೈಸೂರಿನಲ್ಲಿ ಕಳೆಗಟ್ಟಿತ್ತು.

ಬುದ್ಧ ಪೂರ್ಣಿಮಾ ಅಂಗವಾಗಿ ಭಾರತ್ ಮೂಲ ನಿವಾಸಿ ಫೌಂಡೇಷನ್ ವತಿಯಿಂದ ಬುದ್ಧರಥದ ಮೆರವಣಿಗೆ ನಡೆಸಲಾಯಿತು. ಬೌದ್ಧ ಧರ್ಮವನ್ನು ಭಾರತದಲ್ಲಿ ಮರು ಪ್ರತಿಷ್ಠಾಪನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣೆ ಹಿನ್ನೆಲೆಯಲ್ಲಿ ಭೀಮರಥವೂ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

ತಳಿರು-ತೋರಣ, ಪುಷ್ಪಗಳಿಂದ ಶೃಂಗಾರ ಗೊಂಡ ರಥಗಳಲ್ಲಿ ಭಗವಾನ್ ಬುದ್ಧರ ಪ್ರತಿಮೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿ ಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ಆ ಮೂಲಕ ಈ ಇಬ್ಬರು ಮಹನೀಯರ ಚಿಂತನೆಗಳು ಪಸರಿಸಿದವು. ಮಂಗಳವಾದ್ಯದ ಮಾಧುರ್ಯ, ಬ್ಯಾಂಡ್ ಸಂಗೀತದ ನೀನಾದ ಮೆರವಣಿಗೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಮೈಸೂರಿನ ಪುರಭವನದ ಆವರಣದಲ್ಲಿ ರಥ ಗಳಲ್ಲಿ ಪ್ರತಿಷ್ಠಾಪಿಸಿದ್ದ ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಡೀ ಜಗತ್ತಿಗೆ ಶಾಂತಿ-ಸಾಮರಸ್ಯದ ಮಹತ್ವ ತಿಳಿಸಿದ ಮಹಾನ್ ವ್ಯಕ್ತಿತ್ವ ಬುದ್ಧ. ಮಾನವ ಸಂಕುಲ ಶಾಂತಿ-ನೆಮ್ಮದಿಯ ಬದುಕು ಮಾಡುವ ಬಗೆ ತಿಳಿಸಿದ ದಾರ್ಶನಿಕರು. ಜಾತಿ-ಮತದ ಭೇದವಿಲ್ಲದೆ ಸರ್ವರೂ ಸಮಾನತೆ ಯಿಂದ ಬದುಕುವ ಹಾಗೂ ಪ್ರೀತಿ-ವಿಶ್ವಾಸದ ಬೆಳಕು ಚೆಲ್ಲುವ ಅಗತ್ಯತೆಯನ್ನು ಸಮಾಜಕ್ಕೆ ಹೇಳಿಕೊಟ್ಟಿ ದ್ದಾರೆ ಎಂದರಲ್ಲದೆ, ನಾಡಿನ ಸಮಸ್ತ ಜನತೆಗೆ ಬುದ್ಧ ಜಯಂತಿಯ ಶುಭಾಶಯ ತಿಳಿಸಿದರು.

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂ ಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಯಾರೇ ಆಡಳಿತಕ್ಕೆ ಬರಲಿ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಎಲ್ಲರೂ ಸೇರಿ ಬುದ್ಧನ ಸಂದೇಶ ದಂತೆ ಶಾಂತಿ, ಪ್ರೀತಿ-ವಿಶ್ವಾಸದಿಂದ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.

ಪುರಭವನದ ಆವರಣದಿಂದ ಹೊರಟ ಮೆರ ವಣಿಗೆಯು, ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆಗಳಲ್ಲಿ ಸಂಚರಿಸಿ ವಿನೋಬಾ ರಸ್ತೆ ಮಾರ್ಗವಾಗಿ ಕಲಾ ಮಂದಿರ ತಲುಪಿ ಅಂತ್ಯಗೊಂಡಿತು. ಫೌಂಡೇ ಷನ್‍ನ ಸಂಸ್ಥಾಪಕ ಅಧ್ಯಕ್ಷ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವ ಶರಣರು, ಮುಡುಕು ತೊರೆಯ ಶ್ರೀ ಉರಿಲಿಂಗ ಪೆದ್ದಿ ಶಾಖಾ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು. ಚಿಂತಕ ಪ್ರೊ.ಬಿ.ಪಿ.ಮಹೇಶ್‍ಚಂದ್ರಗುರು, ಎಪಿಎಂಸಿ ಉಪಾಧ್ಯಕ್ಷ ಚಿಕ್ಕಜವರಯ್ಯ, ಮುಖಂಡ ಸೋಮಯ್ಯ ಮಲೆಯೂರು ಮತ್ತಿತರರು ಪಾಲ್ಗೊಂಡಿದ್ದರು.

Translate »