ಮಡಿಕೇರಿ: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ಈ ಹಿಂದೆ ಖಾಸಗಿ ಬಸ್ ನಿಲಾಣವಾಗಿದ್ದ ನಗರಸಭೆಯ ಬಹುರೂಪಿ ಕಟ್ಟಡವನ್ನು ಕೆಡವಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಈ ಕಟ್ಟಡಕ್ಕೆ ತೀವ್ರ ಹಾನಿಯಾಗಿತ್ತು. 1936ರಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟು, ಆ ಬಳಿಕ ಕೆಲ ವರ್ಷಗಳ ಕಾಲ ಮಡಿಕೇರಿ ಪುರಸಭೆಯ ಕಚೇರಿಯಾಗಿ, ತದನಂತರ ವಾಣಿಜ್ಯ ಮಳಿಗೆ ಮತ್ತು ಖಾಸಗಿ ಬಸ್ ನಿಲ್ದಾಣವಾಗಿಯೂ ಈ ಕಟ್ಟಡ ರೂಪಾಂತರವನ್ನೂ ಹೊಂದಿತ್ತು. ಮಾತ್ರವಲ್ಲದೆ ಕಳೆದ 15 ವರ್ಷಗಳ ಹಿಂದೆ ಮಡಿಕೇರಿ ದಸರಾ ಜನೋತ್ಸವದ ವೇದಿ ಕೆಯಾಗಿಯೂ ಮಾರ್ಪಡುವ ಮೂಲಕ ಬಹುರೂಪದ ಕಟ್ಟಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಕಳೆದ 20 ವರ್ಷ ಗಳಿಂದ ಶಿಥಿಲತೆಯ ಹಾದಿ ಹಿಡಿದು ಮಳೆ ನೀರು ಸೋರಿಕೆಯ ಕಾರಣದಿಂದಾಗಿ ಕಟ್ಟಡದ ಮೇಲ್ಬಾಗದಲ್ಲಿದ್ದ ವಾಣಿಜ್ಯ ಮಳಿಗೆಗಳು ತೆರವುಗೊಂಡಿದ್ದವು.
ಮಡಿಕೇರಿ ನಗರದ ಹೃದಯ ಭಾಗ ದಲ್ಲಿ ಬ್ರಿಟಿಷರ ಕಾಲದ ಕುರುಹುಗಳಿಗೆ ಸಾಕ್ಷಿ ಹೇಳುತ್ತಿದ್ದ ಈ ಕಟ್ಟಡಕ್ಕೆ ಪ್ರಕೃತಿ ವಿಕೋಪದ ಕರಿನೆರಳು ಬಿದ್ದ ಹಿನ್ನೆಲೆ ಯಲ್ಲಿ ಮುಂಜಾಗೃತಾ ಕ್ರಮವಾಗಿ ಕಟ್ಟಡವನ್ನು ಕೆಡವಲಾಗುತ್ತಿದೆ. ಈ ಪ್ರದೇಶದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿ ಸಲು ಕೂಡ ನಗರ ಸಭೆ ಯೋಜನೆ ರೂಪಿಸಿದೆ. ನಗರಸಭೆಯ 3ನೇ ಹಂತದ ಹಣಕಾಸು ಯೋಜನೆಯ ಅಡಿಯಲ್ಲಿ ವಿವಿಧ 3 ಯೋಜನೆಗಳಿಗಾಗಿ ಒಟ್ಟು 2.66 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಈ ಪೈಕಿ ಸುದರ್ಶನ ವೃತ್ತದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ಹೊಸ ಖಾಸಗಿ ಬಸ್ ನಿಲ್ದಾಣ ದಲ್ಲಿ ವಾಣಿಜ್ಯ ಮಳಿಗೆ ಮತ್ತು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಿಸಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.
ಹಗಲಿನ ವೇಳೆಯಲ್ಲಿ ಹಳೇ ಖಾಸಗಿ ಬಸ್ ನಿಲ್ದಾಣದ ಪ್ರದೇಶದಲ್ಲಿ ಜನ, ವಾಹನ ಸಂಚಾರ ಹೆಚ್ಚಿರುವ ಹಿನ್ನಲೆಯಲ್ಲಿ ರಾತ್ರಿ ವೇಳೆಯಲ್ಲಿ ಕಟ್ಟಡವನ್ನು ಕೆಡವಲಾಗುತ್ತಿದೆ. 2 ಜೆಸಿಬಿ ಯಂತ್ರಗಳು ಕಟ್ಟಡ ಕೆಡವುವ ಕೆಲಸದಲ್ಲಿ ನಿರತವಾಗಿವೆ. ನೂತನ ವಾಣಿಜ್ಯ ಮಳಿಗೆ ನಿರ್ಮಾಣಕ್ಕೂ ಮೊದಲು ಹಿಂಬದಿಯಲ್ಲಿರುವ ಗುಡ್ಡ ಕುಸಿಯದಂತೆ ತಡೆಗೋಡೆಯನ್ನು ಪ್ರಥಮ ಹಂತದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯ ಭಾಗದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹಾಗಿ ಉಳಿದಿದ್ದ ಬಹುರೂಪಿ ಕಟ್ಟಡವೊಂದು ಇನ್ನು ಮುಂದೆ ಕೇವಲ ನಾಮಸ್ಮರಣೆಗೆ ಮಾತ್ರ ಮೀಸಲಾಗಿರಲಿದೆ.