ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ದೋಚಿದ ಖದೀಮರು: ತನಿಖೆ ಚುರುಕು
ಮೈಸೂರು

ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ದೋಚಿದ ಖದೀಮರು: ತನಿಖೆ ಚುರುಕು

June 26, 2018

ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣದ ತನಿಖೆಯನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ.

ಕುವೆಂಪುನಗರ ಎನ್ ಬ್ಲಾಕ್, ಕೆಎಸ್ ಆರ್‍ಟಿಸಿ ಡಿಪೋ ರಸ್ತೆಯಲ್ಲಿರುವ ಕೆ.ಜೆ. ಲೀಲಾದೇವಿ ಅವರ ಮನೆಗೆ ಜೂ.22 ರಂದು ಪಾಲಿಕೆ ಅಧಿಕಾರಿಗಳೆಂದು ಹೇಳಿ ಕೊಂಡು ಬಂದಿದ್ದ ಇಬ್ಬರು ಖದೀಮರು, ಮನೆಯನ್ನು ಅಳತೆ ಮಾಡಿ, ಆಸ್ತಿ ಕಾರ್ಡ್ ನೀಡುವುದಾಗಿ ನಂಬಿಸಿ, ಮನೆಯ ಮಾಲೀಕರಾದ ಲೀಲಾದೇವಿ ಹಾಗೂ ಕೆಲಸದಾಕೆ ಮಂಗಳಮ್ಮ ಅವರನ್ನು ಟೆರೇಸ್‍ಗೆ ಕರೆದೊಯ್ದು, ಅದೇ ಸಮಯಕ್ಕೆ ಮತ್ತೋರ್ವ ಸಹಚರನಿಗೆ ಮೊಬೈಲ್‍ನಲ್ಲಿ ಮಾಹಿತಿ ನೀಡಿ, ಸುಮಾರು 280 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಕುವೆಂಪುನಗರ ಪೊಲೀಸರು, ಲೀಲಾದೇವಿ ಅವರು ನೀಡಿದ ಮಾಹಿತಿ ಯನ್ವಯ ಖದೀಮರ ರೇಖಾಚಿತ್ರ ಬಿಡಿಸಿ, ಅಕ್ಕಪಕ್ಕದಲ್ಲಿರುವ ಸಿಸಿ ಟಿವಿ ಫುಟೇಜ್ ಗಳನ್ನು ಸಂಗ್ರಹಿಸಿ, ತನಿಖೆ ಚುರುಕುಗೊಳಿ ಸಿದ್ದಾರೆ. ಪ್ರಕರಣ ಸಂಬಂಧ ಹಲವು ಮಾಹಿತಿ ಕಲೆಹಾಕಿದ್ದು, ಕಳ್ಳರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಮತ್ತೊಂದು ಮನೆಗೆ ತೆರಳಿದ್ದ ಖದೀಮರು: ಲೀಲಾದೇವಿ ಅವರ ಮನೆಗೆ ಬರುವ ಮುನ್ನ ಖದೀಮರು, ಅದೇ ರಸ್ತೆಯಲ್ಲಿರುವ ಬೇರೊಂದು ಮನೆಗೆ ತೆರಳಿ ಜಾಲ ಬೀಸಿ, ವಿಫಲರಾಗಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಖದೀಮರು ಮೊದಲು ತೆರಳಿದ್ದ ಮನೆಯ ವರು ಪ್ರಶ್ನೆ ಮಾಡಿ, ಬಚಾವಾಗಿದ್ದಾರೆ. ನಿಮ್ಮ ಮನೆಯನ್ನು ಅಳತೆ ಮಾಡಬೇಕು ಎಂದು ಹೇಳಿದಾಗ, ನೀವು ಕರ್ತವ್ಯ ನಿರ್ವಹಿಸುವುದು ಎಲ್ಲಿ?. ನಿಮ್ಮ ಉಸ್ತುವಾರಿ ಅಧಿಕಾರಿ ಯಾರು?. ನಿಮ್ಮ ಗುರುತಿನ ಪತ್ರ ತೋರಿಸಿ. ನಿಮ್ಮ ಹಾಗೂ ಮೇಲಧಿಕಾರಿ ಗಳ ಮೊಬೈಲ್ ನಂಬರ್ ಕೊಡಿ ಎಂದು ಖದೀಮರನ್ನು ಪ್ರಶ್ನಿಸಿದ್ದರಿಂದ, ಏನೋ ಸಬೂಬು ಹೇಳಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ 2ನೇ ಪ್ರಯತ್ನವಾಗಿ ಲೀಲಾದೇವಿ ಅವರ ಮನೆಯ ಕದ ಬಡಿದು, ವಂಚಿಸುವಲ್ಲಿ ಸಫಲರಾಗಿದ್ದಾರೆ.

Translate »