ಡಾ.ಅಂಬೇಡ್ಕರ್ ಚಿಂತನೆ ಸರ್ವಕಾಲಿಕ ಅನ್ವಯ
ಮೈಸೂರು

ಡಾ.ಅಂಬೇಡ್ಕರ್ ಚಿಂತನೆ ಸರ್ವಕಾಲಿಕ ಅನ್ವಯ

June 26, 2018

ಮೈಸೂರು:  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನ್ನೂರು ಚೆನ್ನಪ್ಪ ಅಭಿಪ್ರಾಯಪಟ್ಟರು.

ಪುರಭವನದಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 127ನೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು, ದಲಿತರು, ಶೋಷಿತರು, ಮಹಿಳೆಯರಿಗೆ ಸಮಾನತೆ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಸಂವಿಧಾನ ರಚನೆ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಈ ವರ್ಗದವರಿಗೆ ಸಮಾನತೆ ತರಲು ತಮ್ಮದೇ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ದಾರ್ಶನಿಕರ ಜಯಂತಿಯನ್ನು ವಿವಿಧ ಸಂಘ-ಸಂಸ್ಥೆಗಳು ವರ್ಷ ಪೂರ್ತಿ ಆಚರಣೆ ಮಾಡುತ್ತಿರುವುದು ಹರ್ಷದಾಯಕ ಎಂದರು.

ಇಂದಿನ ಪೀಳಿಗೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪರಿಚಯಿಸಬೇಕು. ಇದರಿಂದ ಯುವಕರು ಉತ್ತಮ ಪ್ರಜೆಗಳಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ರಾಜ್ಯ ಸರ್ಕಾರ ದಲಿತ ಕಲಾವಿದರ ಏಳಿಗೆಗೆ 40 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕಲಾವಿದರಲ್ಲಿ ಮನವಿ ಮಾಡಿದರು. ದಲಿತರಲ್ಲಿ ಉತ್ತಮ ಕಲಾವಿದರಿಗೆ ಅವಕಾಶಗಳಿರುವುದಿಲ್ಲ. ಅವಕಾಶ ಇದ್ದರೂ ವೇದಿಕೆಗಳಿರುವುದಿಲ್ಲ. ಇವೆಲ್ಲಾವನ್ನು ಮನ ಗಂಡಿರುವ ರಾಜ್ಯ ಸರ್ಕಾರ ಕಲಾವಿದರಿಗೆ ಪ್ರತ್ಯೇಕ ಅನುದಾನ ವನ್ನೇ ಮೀಸಲಿಟ್ಟಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಕರಾಮುವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಗೌರವ ನಿರ್ದೇಶಕಿ ಪ್ರೊ.ಮಹದೇವಿ, ಉದಯ್‍ಕುಮಾರ್, ಸಂಘದ ಪದಾಧಿಕಾರಿಗಳಾದ ಜಿ.ಎಸ್.ಜಯರಾಮರಾಜು, ಎಂ.ಪುಟ್ಟಸ್ವಾಮಿ, ಎಸ್.ರಾಜು, ಪಿ.ಎನ್.ಮಂಗಳ, ಗುರದತ್ ಸೇರಿದಂತೆ ಇತರರಿದ್ದರು.

Translate »