ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ
ಮೈಸೂರು

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

September 23, 2019

ಮೈಸೂರು/ಹುಣಸೂರು, ಸೆ.22(ಕೆಕೆ)- ಹುಣಸೂರು, ಕೆ.ಆರ್.ಪೇಟೆ ಸೇರಿದಂತೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ (ಸೆ.23)ಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಸೆ.30 ಕಡೇ ದಿನವಾಗಿದ್ದು, ಚುನಾ ವಣಾಧಿಕಾರಿಗಳಾಗಿರುವ ಆಯಾಯ ತಾಲೂಕು ವ್ಯಾಪ್ತಿಯ ಉಪವಿಭಾಗಾಧಿಕಾರಿಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಅ.1ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.3ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ಅ.21ರಂದು ಮತದಾನ ನಡೆಯಲಿದ್ದು, ಅ.24ಕ್ಕೆ ಫಲಿತಾಂಶ ಹೊರಬೀಳಲಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಹುಣಸೂರು ಉಪವಿಭಾ ಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲೇ ಮೊದಲ ಬಾರಿಗೆ ಹುಣಸೂರು ಕ್ಷೇತ್ರದ ಚುನಾವಣೆಗೆ ನೂತನ ಮಾದರಿಯ `ಎಂ-3’ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸÀ ಲಾಗುತ್ತದೆ ಎಂದು ತಿಳಿಸಿದರು. ಹಳೆಯ `ಎಂ-2’ ಮಾದರಿಯ ತಂತ್ರಜ್ಞಾನ ಇವಿಎಂ ಯಂತ್ರಗಳಲ್ಲಿ ಕೇವಲ 60 ಅಭ್ಯರ್ಥಿಗಳ ಹೆಸರನ್ನು ಮಾತ್ರ ದಾಖಲಿಸಬಹುದಿತ್ತು. ಆದರೆ ಹೊಸ ಮಾದರಿ `ಎಂ-3’ ತಂತ್ರಜ್ಞಾನದ ಮತಯಂತ್ರಗಳಲ್ಲಿ 280 ಅಭ್ಯರ್ಥಿಗಳ ಹೆಸರು ಹೊಂದಿಸಲು ಅವಕಾಶವಿದೆ. ಈ ಮತಯಂತ್ರಗಳನ್ನು ತಮಿಳುನಾಡಿನ ನಾಗಪಟ್ಟಣಜಿಲ್ಲೆಯಿಂದ ತರಲಾಗುತ್ತಿದ್ದು, ನಗರಸಭೆಯ ಕಾರ್ಯಾಲಯದಲ್ಲಿ ಸಂಗ್ರಹಿಸಿ, ಸುರಕ್ಷತೆ ದೃಷ್ಟಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ವರದಿ ಸಲ್ಲಿಸಲು ಸೂಚನೆ: ಅಧಿಕ ಮಳೆ, ನೆರೆಯಿಂದಾಗಿ ತಾಲೂಕಿನ ಕೆಲ ಶಾಲಾ- ಕಾಲೇಜುಗಳ ಕೊಠಡಿಗಳಿಗೆ ಹಾನಿಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಮಾಹಿತಿ ಯಂತೆ 67 ಕೊಠಡಿಗಳಿಗೆ ಹಾನಿಯಾಗಿದೆ. ಮತಗಟ್ಟೆ ಸ್ಥಾಪಿಸುವ ಶಾಲಾ-ಕಾಲೇಜುಗಳನ್ನು ಪರಿಶೀಲಿಸಿ ಸೆ.23ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಮತಗಟ್ಟೆ ಸ್ಥಳಾಂತರ ಅಥವಾ ಹೊಸ ಮತಗಟ್ಟೆ ಸೃಷ್ಟಿಗೆ ಅವಕಾಶವಿಲ್ಲ. ಹಾಗಾಗಿ ಹಾನಿಗೊಳಗಾಗಿರುವ ಕೊಠಡಿಗಳನ್ನೇ ದುರಸ್ತಿಪಡಿಸಿ, ಬಳಸಿಕೊಳ್ಳಲಾಗುವುದು. ಒಂದು ವೇಳೆ ಸಾಧÀ್ಯವಾಗದಿದ್ದರೆ ಅದೇ ಶಾಲಾ-ಕಾಲೇಜುಗಳಲ್ಲಿ ಬೇರೆ ಕೊಠಡಿಗಳಲ್ಲಿ ಮತಗಟ್ಟೆ ಸ್ಥಾಪಿಸಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಸಿಬ್ಬಂದಿಗೆ ತರಬೇತಿ: ಶಾಲೆಗಳು ಮತ್ತು ಅಂಗನವಾಡಿ ಕೆಂದ್ರಗಳಲ್ಲಿ ಮತದಾರರಿಗೆ `ಎಂ-3’ ಮಾದರಿಯ ಮತಯಂತ್ರದ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು. ಅಲ್ಲದೆ ಮತದಾನದ ಬಗ್ಗೆ ಅರಿವು ಮೂಡಿಸಲು ಜನತೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉಪಚುನಾವಣೆ ಪ್ರಕ್ರಿಯೆಯಲ್ಲಿ ಹುಣಸೂರು ಉಪವಿಭಾಗಾಧಿಕಾರಿಗಳು ಚುನಾವಣಾಧಿಕಾರಿಗಳಾಗಿ ಹಾಗೂ ತಹಶಿಲ್ದಾರ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ದೂರು ಅಥವಾ ಮಾಹಿತಿಗೆ ಹುಣಸೂರು ಕಂಟ್ರೋಲ್ ರೂಂ(08222-252040) ಹಾಗೂ ಮೈಸೂರು ಡಿಸಿ ಕಚೇರಿ ಸಹಾಯವಾಣಿ (1950) ಅನ್ನು ಸಂಪರ್ಕಿಸಬಹುದು. ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು. ಸಭೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಪವಿಭಾಗಾಧಿಕಾರಿ ವೀಣಾ, ಡಿವೈಎಸ್ಪಿ ಸುಂದರ್‍ರಾಜ್, ತಹಶಿಲ್ದಾರ್ ಬಸವರಾಜು, ಸರ್ಕಲ್ ಇನ್‍ಸ್ಪೆಕ್ಟರ್ ಪೂವಯ್ಯ, ಹೆಚ್.ಎಸ್. ಶಿವಯ್ಯ, ಎಸ್.ಜಯರಾಮ್, ಅಸ್ವಾಳ್ ಕೆಂಪೇಗೌಡ, ರಾಘು, ವಕೀಲ ಪುಟ್ಟರಾಜು, ಸಂತೋಷ್, ಯೋಗೇಶ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದ ಉಭಯ ಪಕ್ಷಗಳ 17 ಶಾಸಕರು, ವಿಭಿನ್ನ ರಾಜಕೀಯ ಸನ್ನಿವೇಶ, ಬೆಳವಣಿಗೆ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್‍ಕುಮಾರ್ ಅವರು ಎಲ್ಲಾ ರೆಬೆಲ್ ಶಾಸಕರ ಶಾಸಕತ್ವ ಅನರ್ಹಗೊಳಿಸಿ, ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ, 17 ಜನರೂ ನ್ಯಾಯಾಲಯದ ಮೆಟ್ಟಿಲೇರಿದ್ದು, ಅನರ್ಹತೆ ಪ್ರಕರಣ ಸುಪ್ರಿಂಕೋರ್ಟ್‍ನಲ್ಲಿ ನಾಳೆ(ಸೆ.23) ವಿಚಾರಣೆಗೆ ಬರಲಿದೆ. ಅಷ್ಟರಲ್ಲಿ ಚುನಾವಣಾ ಆಯೋಗ ದೇಶದ ವಿವಿಧ ರಾಜ್ಯಗಳಲ್ಲಿನ ಚುನಾವಣೆಗಳ ಜೊತೆಗೆ ರಾಜ್ಯದ ಈ 17 ಕ್ಷೇತ್ರಗಳಿಗೂ ಉಪಚುನಾವಣೆ ಘೋಷಿಸಿ, ಪ್ರಕ್ರಿಯೆ ಆರಂಭಿಸಿದೆ.

Translate »