ಶಾಸಕರು, ಮುಖಂಡರೊಂದಿಗೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆ
ಮೈಸೂರು

ಶಾಸಕರು, ಮುಖಂಡರೊಂದಿಗೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆ

May 30, 2019

ಬೆಂಗಳೂರು: ಪಕ್ಷದ ಶಾಸಕರು, ಮುಖಂಡರ ಜೊತೆ ಸಮಾಲೋಚನೆ ನಡೆಸಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಯ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಸಮ್ಮುಖದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಒಂದು ವೇಳೆ ಅಗತ್ಯ ಕಂಡುಬಂದರೆ ಕಾಮರಾಜ್ ಸೂತ್ರ ಅನುಸರಿಸಲೂ ಹಿಂಜರಿಯ ಬಾರದು, ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೊರತುಪಡಿಸಿ ಉಳಿದ ಎಲ್ಲಾ ಸಚಿವರಿಂದ ರಾಜೀನಾಮೆ ಕೊಡಿಸಿ, ದೊಡ್ಡ ಮಟ್ಟದಲ್ಲೇ ಸಂಪುಟ ಪುನರ್ ರಚನೆಗೂ ಚಿಂತನೆ ನಡೆದಿದೆ. ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನ, ಆದಷ್ಟು ಶೀಘ್ರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ಶಾಸಕರು, ಸಚಿವರು ಹಾಗೂ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆಯಬೇಕು. ಬಹುಮತದ ಅಭಿಪ್ರಾಯಕ್ಕೆ ಪಕ್ಷ ತಲೆಬಾಗಿ, ಅದರಂತೆ ಮುಂದುವರೆಯಲು ತೀರ್ಮಾನ ತೆಗೆದುಕೊಂಡ ಹಿನ್ನೆಲೆಯಲ್ಲಿ ಒಂದೆರಡು ದಿನದಲ್ಲಿ ಆಗಬೇಕಿದ್ದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ.

ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದರಿಂದ ಸರ್ಕಾರ ಗೊಂದಲಕ್ಕೆ ಸಿಲುಕಬಾರದು. ಇದನ್ನು ಗಮನದಲ್ಲಿಟ್ಟುಕೊಂಡು, ಎಲ್ಲರ ವಿಶ್ವಾಸ ಪಡೆದು ತೀರ್ಮಾನ ಕೈಗೊಳ್ಳೋಣ. ಇದೇ ಸಂದರ್ಭದಲ್ಲಿ ಮಿತ್ರ ಪಕ್ಷ ಜೆಡಿಎಸ್ ಕೂಡ ತನ್ನ ಶಾಸಕರು ಮತ್ತು ಮುಖಂಡರ ಜೊತೆಗೆ ಸಮಾಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರಲಿ. ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಕುಮಾರಕೃಪಾದಲ್ಲಿ ನಡೆದ ಸಭೆಯಲ್ಲಿ, ಬಿಜೆಪಿಯ ನಡೆಯ ಬಗ್ಗೆ ಗಹನವಾದ ಸಮಾಲೋಚನೆ ನಡೆಸಿದರು. ಕರ್ನಾಟಕದಲ್ಲಿ ನಮ್ಮ ಸರ್ಕಾರ ಉರುಳಿಸಿ ಸರ್ಕಾರ ರಚನೆ ಕಸರತ್ತು ಬಿಜೆಪಿ ಕೈಬಿಟ್ಟಂತಿದೆ. ಮತ್ತೆ ಯಾವ ತಂತ್ರದ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸಬಹುದು ಎಂಬ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ತಮಗೆ ಬಂದ ಮಾಹಿತಿಗಳ ಬಗ್ಗೆಯೂ ಸಭೆಯ ಗಮನಕ್ಕೆ ತಂದು, ಆ ಕುರಿತೂ ಚರ್ಚೆ ನಡೆಯಿತು. ಬಿಜೆಪಿಗೆ ನಾವು ಆಹಾರವಾಗಬಾರದು. ಇದಕ್ಕಾಗಿ ಮೊದಲು ನಮ್ಮಲ್ಲೇ ವಿಶ್ವಾಸ ಗಟ್ಟಿ ಮಾಡಿಕೊಂಡು ನಂತರ ಶಾಸಕರ ಮನವೊಲಿಸುವ ಕಾರ್ಯ ಮಾಡೋಣ ಮತ್ತು ಅವರುಗಳಿಗೆ ತಿಳುವಳಿಕೆ ಹೇಳೋಣ ಎಂಬ ತೀರ್ಮಾನಕ್ಕೆ ಸಭೆ ಬಂದಿದೆ.

Translate »