ಇಂದು ಸಂಪುಟ ವಿಸ್ತರಣೆ
ಮೈಸೂರು

ಇಂದು ಸಂಪುಟ ವಿಸ್ತರಣೆ

June 14, 2019

ಬೆಂಗಳೂರು: ಬಂಡಾಯ, ಪಕ್ಷಾಂತರ ಬೆದರಿಕೆಗೂ ಸೊಪ್ಪು ಹಾಕದ ಕಾಂಗ್ರೆಸ್ ತನ್ನ ಪಕ್ಷದ ಯಾವುದೇ ಶಾಸಕರಿಗೂ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡುತ್ತಿಲ್ಲ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾಳೆ ಮಧ್ಯಾಹ್ನ 1-30ಕ್ಕೆ ತಮ್ಮ ಸಂಪುಟ ವನ್ನು 3ನೇ ಬಾರಿಗೆ ವಿಸ್ತರಿಸಲಿದ್ದಾರೆ. ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಇಬ್ಬರು, ಇಲ್ಲವೆ ಮೂವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿ ದ್ದಾರೆ. ಆಪರೇಷನ್ ಕಮಲದ ಮೂಲಕ ಕುಮಾರಸ್ವಾಮಿ ಸರ್ಕಾರವನ್ನು ಉರುಳಿ ಸುವ ಯತ್ನಕ್ಕೆ ಬಿಜೆಪಿ ವರಿಷ್ಠರು ತಿಲಾಂಜಲಿ ಹಾಕಿರುವ ಹಿನ್ನೆಲೆಯಲ್ಲಿ ಸ್ವಲ್ಪ ಧೈರ್ಯ ತೋರಿರುವ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಯಾವುದೇ ಬಂಡಾಯ ಶಾಸಕರಿಗೆ ವಿಸ್ತರಣೆಯಲ್ಲಿ ಅವಕಾಶ ಮಾಡಿ ಕೊಡುತ್ತಿಲ್ಲ. ಪಕ್ಷೇತರ ಶಾಸಕ ಎಚ್. ನಾಗೇಶ್ (ಮುಳಬಾಗಿಲು)
ಅವರು ಜೆಡಿಎಸ್ ಕೋಟಾದಿಂದಲೂ, ಆರ್. ಶಂಕರ್ (ರಾಣೆಬೆನ್ನೂರು) ಕಾಂಗ್ರೆಸ್ ಕೋಟಾದಿಂದಲೂ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೆಡಿಎಸ್ ಕೋಟಾದಡಿ ಸಂಪುಟದಲ್ಲಿ ಮತ್ತೊಂದು ಸ್ಥಾನ ಖಾಲಿ ಇದ್ದು, ಆ ಸ್ಥಾನಕ್ಕೆ ಅಲ್ಪಸಂಖ್ಯಾತರ ಕೋಮಿಗೆ ಸೇರಿದ ಬಿ.ಎಂ. ಫಾರೂಕ್ ಅವರನ್ನು ಮಂತ್ರಿ ಮಾಡಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಸಮ್ಮತಿಸಿದ್ದಾರೆ. ಆದರೆ ಮುಖ್ಯಮಂತ್ರಿ ಅವರಿಗೆ ಎಚ್. ವಿಶ್ವನಾಥ್ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳ ಬೇಕೆಂಬ ಇಚ್ಛೆ ಇದೆ. ಈ ಬಗ್ಗೆ ಸಂಪುಟ ಸೇರಲಿರುವ 3ನೇ ಅಭ್ಯರ್ಥಿ ಯಾರೆಂಬುದು ತಡರಾತ್ರಿ ವೇಳೆಗೆ ನಿರ್ಧಾರವಾಗಲಿದೆ. ಇಂತಹ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸಮಾ ಲೋಚನೆ ನಡೆಸಲಿದ್ದಾರೆ. ವಿಸ್ತರಣೆ ನಂತರ ಸಣ್ಣ-ಪುಟ್ಟ ಖಾತೆಗಳ ಬದಲಾವಣೆ ಮಾಡಲು ಮುಖ್ಯಮಂತ್ರಿ ಅವರು ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಸಂಪುಟ ಸೇರಲು ಕಾಂಗ್ರೆಸ್‍ನಲ್ಲಿ 10ರಿಂದ 15 ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ, ಅವರಲ್ಲಿ ಪ್ರಮುಖವಾಗಿ ರಾಮಲಿಂಗಾ ರೆಡ್ಡಿ, ಬಿ.ಸಿ. ಪಾಟೀಲ್, ಆರ್. ನಾಗೇಂದ್ರ, ಎಚ್.ಕೆ. ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಎಂ.ಕೃಷ್ಣಪ್ಪ ಇತರರು. ಆದರೆ ಈ ಬಾರಿಯ ವಿಸ್ತರಣೆ ಸಂದರ್ಭದಲ್ಲಿ ಇವರ್ಯಾರಿಗೂ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತಿಲ್ಲ. ಮುಖ್ಯಮಂತ್ರಿ ಕೂಡ ವಿಸ್ತರಣೆ ವಿಷಯದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿಲ್ಲ, ಅವರು ಇಂದು ಇಡೀ ದಿನ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆಯಲ್ಲಿ ನಿರತರಾಗಿದ್ದರು.