ಎನ್‍ಆರ್ ವ್ಯಾಪ್ತಿಯ ನೂರಾರು ಮಂದಿ ದೂರು ಸಲ್ಲಿಕೆ
ಮೈಸೂರು

ಎನ್‍ಆರ್ ವ್ಯಾಪ್ತಿಯ ನೂರಾರು ಮಂದಿ ದೂರು ಸಲ್ಲಿಕೆ

June 14, 2019

ಮೈಸೂರು: ಐಎಂಎ ಸಂಸ್ಥೆಯ ಬಹು ಕೋಟಿ ವಂಚನೆಯಲ್ಲಿ ಮೈಸೂರಿಗರೂ ಸೇರಿದ್ದು, ವಂಚನೆಗೊಳಗಾದ ನೂರಾರು ಮಂದಿ ಗುರುವಾರ ಮೈಸೂರಿನ ಉದಯಗಿರಿಯಲ್ಲಿರುವ ಜಬ್ಬಾರ್ ಫಂಕ್ಷನ್ ಹಾಲ್‍ನಲ್ಲಿ ಪೊಲೀಸರಿಗೆ ತಮ್ಮ ದೂರು ಅರ್ಜಿಗಳನ್ನು ಸಲ್ಲಿಸಿದರು.

ಐಎಂಎ ಸಂಸ್ಥೆಗೆ ಮೈಸೂರಿನಲ್ಲಿಯೂ ಸಾವಿ ರಾರು ಮಂದಿ ಲಕ್ಷಾಂತರ ಹಣ ಹೂಡಿದ್ದು, ಸಂಸ್ಥೆಯ ಇತ್ತೀಚಿನ ಬೆಳವಣಿಗೆಗಳಿಂದ ತೀರಾ ಕಂಗಾಲಾಗಿದ್ದಾರೆ. ಮೈಸೂರಿನವರಲ್ಲಿ 3 ಲಕ್ಷದಿಂದ 16 ಲಕ್ಷ ರೂ.ಗಳವರೆಗೂ ಕಳೆದುಕೊಂಡವರು ಸಾಕಷ್ಟಿದ್ದಾರೆ. ಬೆಂಗಳೂರಿಗೆ ಹೋಗಿ ದೂರು ಸಲ್ಲಿಸಲಾಗದವರಿಗಾಗಿ ಮೈಸೂರಿನಲ್ಲಿಯೇ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದ್ದು, ಉದಯ ಗಿರಿ ಪೊಲೀಸ್ ಠಾಣೆ ಪಕ್ಕದಲ್ಲಿರುವ ಜಬ್ಬಾರ್ ಫಂಕ್ಷನ್ ಹಾಲ್‍ನಲ್ಲಿ ತೆರೆಯಲಾಗಿದ್ದ ಕೌಂಟರ್ ನಲ್ಲಿ ಗುರುವಾರ ವಂಚನೆಗೊಳಗಾದ ನೂರಾರು ಮಂದಿ ಕಿಕ್ಕಿರಿದು ಜಮಾಯಿಸಿದ್ದರು. ಸಮಾಜ ಸೇವಕ ಅಮೀನ್ ಸೇಠ್, ಜೀಶಾನ್ ಇನ್ನಿತರರು ವಾಟ್ಸಾಪ್ ಗ್ರೂಪ್ ಮಾಡಿ ವಂಚನೆಗೊಳಗಾದ ವರಿಗೆ ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ನೆರವಾದರು.

ವಂಚನೆಗೊಳಗಾದವರಲ್ಲಿ ಶಾಲಾ ಶಿಕ್ಷಕರು, ಉದ್ಯಮಿಗಳು, ಸರ್ಕಾರಿ ನೌಕರರು, ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದ್ದಾರೆ. ಅನೇಕರು ಸಾಲ ಮಾಡಿ ಹಣ ಹೂಡಿದ್ದರೆ, ಇನ್ನೂ ಕೆಲವರು ಮನೆ, ಸೈಟ್ ಮಾರಿ ಹಣ ಇಟ್ಟಿದ್ದಾರೆ. ಉದಯಗಿರಿಯ ಕೆ. ಅಬ್ದುಲ್ ಏಜಾಜ್ ಮತ್ತು ಅವರ ಪತ್ನಿ ಸಬೀರಾ ಖಾತುನ್ ತಲಾ 9.50 ಲಕ್ಷ ಕಟ್ಟಿದ್ದಾರೆ. ಕಲ್ಯಾಣ ಗಿರಿಯ ಸಲೀಂ ಅವರ ಪತ್ನಿ ಮಬೀನ್ ತಾಜ್ ಅವರು ತಾವು ನಿವೃತ್ತಿಯಾದ ನಂತರ ಬಂದ 16 ಲಕ್ಷ ರೂ. ಕಟ್ಟಿ ಕೈಸುಟ್ಟುಕೊಂಡಿದ್ದಾರೆ. ವರ್ಷದ ಹಿಂದೆ ಹಣ ತೊಡಗಿಸಿದ್ದರು. ಬಡ್ಡಿ ಬರುತ್ತಿತ್ತು. ಆದರೆ ಮೂರು ತಿಂಗಳಿಂದ ಬರುವುದು ನಿಂತು ಹೋಗಿತ್ತು ಎನ್ನುತಾರೆ ಸಲೀಂ. ನೂರ್ ಝೈಬಾ ಎಂಬುವರು 2 ವರ್ಷದ ಹಿಂದೆ 10 ಲಕ್ಷ ಹೂಡಿ ದ್ದರು. ಮೂರು ತಿಂಗಳಿಂದ ಬಡ್ಡಿ ಬರುವುದು ನಿಂತು ಹೋಗಿತ್ತು. ಕೇಳಿದರೆ ಮುಂದಿನ ತಿಂಗಳಿನಿಂದ ಹಾಕುವು ದಾಗಿ ಹೇಳುತ್ತಿದ್ದರು ಎಂದು ಹಣ ಕಳೆದುಕೊಂಡವರು ಬೇಸರದಿಂದ ಪ್ರತಿಕ್ರಿಯಿಸಿದರು. 7 ತಿಂಗಳ ಹಿಂದಷ್ಟೇ 6 ಲಕ್ಷ ರೂ. ಹೂಡಿದ್ದ ಕಲ್ಯಾಣಗಿರಿಯ ಅಬ್ದುಲ್ ಜಬ್ಬಾರ್ ಎಂಬುವರು ಹಣ ಕಳೆದುಕೊಂಡ ಆತಂಕಕ್ಕೆ ಒಳಗಾಗಿದ್ದಾರೆ. ಶಾಂತಿನಗರದ ತಮೀಮ್ ಮೂರು ತಿಂಗಳ ಹಿಂದಷ್ಟೇ 3 ಲಕ್ಷ ಹೂಡಿದ್ದರು. ಆದರೆ ಹಣ ಹೂಡಿದ್ದಷ್ಟೇ ಅವರಿಗೆ ಒಮ್ಮೆಯೂ ಬಡ್ಡಿಯೂ ಇಲ್ಲ, ಕಟ್ಟಿದ ಅಸಲು ಇಲ್ಲ ಎಂಬಂತಾಗಿದೆ ಎಂದು `ಮೈಸೂರು ಮಿತ್ರ’ನೊಂದಿಗೆ ಅಳಲು ತೋಡಿಕೊಂಡರು.

ದೇವರಾಜ ಎಸಿಪಿ ಬದರಿನಾಥ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಉಮೇಶ್ ಉಸ್ತುವಾರಿಯಲ್ಲಿ ಪಿಎಸ್‍ಐ ಜಯಕೀರ್ತಿ, ಎಎಸ್‍ಐ ಎ.ಎನ್.ನಾಗರಾಜ ಇನ್ನಿತರು ಸಿಬ್ಬಂದಿ ವಂಚನೆಗೊಳಗಾದವರಿಂದ ದೂರು ಅರ್ಜಿ ಪಡೆಯುತ್ತಿದ್ದರು. ಶಾಂತಿನಗರ, ಉದಯಗಿರಿ, ರಾಜೀವ್‍ನಗರ, ಕಲ್ಯಾಣಗಿರಿ, ಕ್ಯಾತಮಾರನಹಳ್ಳಿ, ಪಿಎನ್‍ಟಿ ಕಾಲೋನಿ, ಗಾಯತ್ರಿಪುರಂ 2ನೇ ಹಂತ, ಮುನೇಶ್ವರನಗರ, ಗೌಸಿಯಾನಗರ ಇನ್ನಿತರ ಬಡಾವಣೆಗಳವರು ದೂರು ಅರ್ಜಿಗಳನ್ನು ಸಲ್ಲಿಸಿದರು.