ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಘಟಿತರಾಗಲು ಕರೆ: ನರಸೀಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಘಟಿತರಾಗಲು ಕರೆ: ನರಸೀಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

July 29, 2018

ತಿ.ನರಸೀಪುರ: ಮುಂಬರುವ ಲೋಕಸಭಾ ಚುನಾವಣೆ ಗೆಲುವಿಗೆ ಮುನ್ನುಡಿಯಾಗಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾರ್ಯಕರ್ತರು ಹಾಗೂ ಮುಖಂಡರು ಸಂಘಟಿತರಾಗಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಹೇಳಿದರು.

ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ನಡೆದ ಪುರಸಭೆ ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಸಂಘಟಿತರಾಗದೆ ಯಾವುದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮುಖಂಡರೆಲ್ಲರೂ ಒಗ್ಗೂಡಿ, ಗೆಲ್ಲುವಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ತಿ.ನರಸೀಪುರ ಪುರಸಭೆಯಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲು ಸಾಧ್ಯವಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆಗಸ್ಟ್‌ನಲ್ಲಿ ಪುರಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದೇ ಪುರಸಭೆಯನ್ನು ಬಿಜೆಪಿ ತೆಕ್ಕೆಗೆ ಕಸಿದುಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.

ಸಭೆಯನ್ನು ಉದ್ಘಾಟಿಸಿದ ಬಿಜೆಪಿ ಜಿಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಆಯಾಯ ಕ್ಷೇತ್ರಗಳಲ್ಲಿ ಸಭೆ ನಡೆಸಲಾಗುವುದು. ಚುನಾವಣೆಯಲ್ಲಿನ ಲೋಪದೋಷಗಳ ಕುರಿತು ಕಾರ್ಯಕರ್ತರಿಂದ ಅಭಿಪ್ರಾಯ ಪಡೆದು ರಾಜ್ಯ ಸಮಿತಿಗೆ ವರದಿ ನೀಡಲಾಗುವುದು. ಪುರಸಭೆ ಚುನಾವಣೆಯಲ್ಲಿ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಪಕ್ಷದ ಗೆಲುವಿಗೆ ಶ್ರಮಿಸಬೇಕು. ಪುರಸಭೆಯಲ್ಲಿ ಗೆದ್ದರೆ ಮುಂದಿನ ಲೋಕಸಭೆ ಚುನಾವಣೆಯ ಹಾದಿ ಸುಗಮವಾಗಲಿದೆ ಎಂದು ತಿಳಿಸಿದರು.

ಜಿ.ಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಸದಸ್ಯರಾದ ಸದಾನಂದ, ಮಂಗಳ ಸೋಮಶೇಖರ್, ಹಿರಿಯ ಮುಖಂಡ ತೋಟದಪ್ಪ ಬಸವರಾಜು, ಕಿರುತೆರೆ ನಟ ಆರ್.ಅರ್ಜುನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಸಿ.ಅಶೋಕ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ಕ್ಷೇತ್ರಾಧ್ಯಕ್ಷರಾದ ಎ.ಎನ್.ಶಿವಯ್ಯ, ಹೆಚ್.ಎಂ.ಪರಶಿವಮೂರ್ತಿ, ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಜಿ.ಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಎಸ್.ಬಿ.ಸುರೇಶ, ಪುರಸಭೆ ಉಪಾಧ್ಯಕ್ಷೆ ರತ್ನಮ್ಮ, ತಾ.ಪಂ ಸದಸ್ಯ ರತ್ನರಾಜ್, ಮಾಜಿ ಅಧ್ಯಕ್ಷ ಡಿ.ಕೃಷ್ಣಮೂರ್ತಿ, ಹಿಂ.ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎ.ಎನ್.ರಂಗುನಾಯಕ, ಎಸ್.ಡಿ.ಮಹೇಂದ್ರ, ಟೌನ್ ಅಧ್ಯಕ್ಷರಾದ ಬಿ.ವೀರಭದ್ರಪ್ಪ, ಎಲ್.ಮಂಜುನಾಥ್, ಸ್ಲಂ ಮೋರ್ಚಾ ಅಧ್ಯಕ್ಷ ಕೆ.ಗಣೇಶ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಾದಪ್ಪ, ಪಿಎಸಿಸಿ ಅಧ್ಯಕ್ಷ ಎಂ.ಪರಶಿವಮೂರ್ತಿ, ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ಧಪ್ಪ, ನಿವೃತ್ತ ಫಾರೆಸ್ಟರ್ ಶಿವಸ್ವಾಮಿ, ಮಣಿಕಂಠರಾಜ್‍ಗೌಡ, ಬಾಗಳಿ ಯೋಗೇಶ, ಗ್ರಾ.ಪಂ ಮಾಜಿ ಸದಸ್ಯರಾದ ಎಂ.ಮಿಥುನ್, ಎಸ್.ಲಕ್ಷ್ಮೀ, ಕಲ್ಮಹಳ್ಳಿ ವಿಜಯಕುಮಾರ್, ನಾಗರಾಜು(ತಾತಪ್ಪ), ಬಿ.ಮಹೇಶ, ವಿಜಯಕುಮಾರ್, ಸುಜ್ಜಲೂರು ಮಹದೇವ, ಬಿ.ಪಿ.ಪರಶಿವಮೂರ್ತಿ, ದಯಾನಂದ ಪಟೇಲ್, ನಾಗಲಗೆರೆ ಶಿವಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.

Translate »