ಮೃತ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಹಾಸನ

ಮೃತ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

July 29, 2018

ಹಾಸನ: ಕಳೆದ ಸಾಲಿನಲ್ಲಿ ಬಾಕಿ ಉಳಿದಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಪರಿಹಾರವನ್ನು ತಕ್ಷಣ ಸಂಪೂರ್ಣವಾಗಿ ವಿತರಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಂಟಿ ಕೃಷಿ ನಿರ್ದೇಶಕರ ಉಳಿತಾಯ ಖಾತೆಯಲ್ಲಿ ಲಭ್ಯವಿರುವ ಹಣದಲ್ಲಿ ಬಾಕಿ ಇರುವ 10 ರೈತರ ಆತ್ಮಹತ್ಯೆ ಪ್ರಕರಣದ ಪರಿಹಾರ ವಿತರಿಸಿ, ನಂತರ ಅದನ್ನು ಸರ್ಕಾರದಿಂದ ಪುನರ್ ಭರಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸರಾಸರಿ 492 ಮಿ.ಮೀ.ಮಳೆಯಾಗಿದ್ದು, ಶೇ.75 ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ 330 ಹೆಕ್ಟೇರ್ ತಂಬಾಕು, 50 ಹೆಕ್ಟೇರ್ ಅಲಸಂದೆ ಬೆಳೆ ಹಾನಿಗೀಡಾಗಿದೆ. ಹಲವೆಡೆ ಕೃಷಿ ಜಮೀನು ಹಾನಿಗೀಡಾಗಿದೆ. ರಾಗಿ, ಜೋಳ, ಭತ್ತ, ಬಿತ್ತನೆ ಪ್ರಗತಿಯಲ್ಲಿದೆ. 2017-18ನೇ ಸಾಲಿನಲ್ಲಿ 84 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, 21 ಪ್ರಕರಣಗಳ ಉಪವಿಭಾಗಾ ಧಿಕಾರಿ ಸಮಿತಿಯಲ್ಲಿ ತಿರಸ್ಕೃತಗೊಂಡಿವೆ. ಉಳಿದ 63 ಪ್ರಕರಣಗಳಲ್ಲಿ 53 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಉಳಿದ 10 ಪ್ರಕರಣಗಳು ಹಣ ಪಾವತಿಗೆ ಬಾಕಿ ಇದೆ. ಖಜಾನೆ 2 ತಂತ್ರಾಂಶದಲ್ಲಿ ಹಣ ಮರುಪಾವತಿ ಪಡೆಯಲು ಕಷ್ಟವಾಗು ತ್ತ್ತಿರುವ ಕಾರಣ ಉಳಿತಾಯ ಖಾತೆಯಲ್ಲಿರುವ ಹಣವನ್ನು ನೇರವಾಗಿ ಪರಿಹಾರ ವಿತರಣೆಗೆ ಬಳಸಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಈ ಬಗ್ಗೆ ತಾವು ಸರ್ಕಾರದ ಹಂತದಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದರಲ್ಲದೆ, ಜಿಲ್ಲೆಯಲ್ಲಿ ಯಾವುದೇ ತಾಲೂಕಿನಲ್ಲಿ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ ಯಲ್ಲಿ ಕೊರತೆಯಾಗದಂತೆ ಎಚ್ಚರ ವಹಿಸಿ. ಬೆಳೆಹಾನಿ, ಅತಿವೃಷ್ಠಿ, ಅನಾವೃಷ್ಠಿ ಸಂದರ್ಭದಲ್ಲಿ ಬೆಳೆಯ ಬೇಕಾದ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಎಂದು ತಿಳಿಸಿದರು.

ತೋಟಗಾರಿಕೆ ಉಪನಿರ್ದೇಶಕ ಡಾ.ಸಂಜಯ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಮುಂಗಡವಾಗಿ ನೋಂದಣಿ ಮಾಡಿಸಿದಂತಹ 1,300 ರೈತರಿಗೆ 1,250 ಮೆಟ್ರಿಕ್ ಟನ್‍ಗಳಷ್ಟು ದೃಢೀಕೃತ ಬಿತ್ತನೆ ಆಲೂಗೆಡ್ಡೆಯನ್ನು ಶೇ.50 ಸಹಾಯಧನದಲ್ಲಿ ವಿತರಿಸಲಾಗಿದೆ. ಹಲವೆಡೆ ಬೆಳೆಯು ಪ್ರಸ್ತುತ ಉತ್ತಮ ಸ್ಥಿತಿಯಲ್ಲಿ ಇದ್ದು, ಅತಿವೃಷ್ಠಿಯಿಂದ 6,530 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ ಎಂದರು.

ಜಿಲ್ಲೆಯಲ್ಲಿ 6,530 ಹೆಕ್ಟೇರ್ ಪ್ರದೇಶದಲ್ಲಿನ ಹಾನಿಗೀಡಾ ಗಿರುವ ಆಲೂಗೆಡ್ಡೆ ಬೆಳಗಾರರ ಸಂಪೂರ್ಣ ಖಾತೆ ವಿವರಗಳನ್ನು ಸಂಗ್ರಹಿಸಿ ಇನ್ನೊಂದು ವಾರದೊಳಗೆ ಅಂತಿಮಗೊಳಿಸಿ ಪ್ರಕೃತಿ ವಿಕೋಪ ನಿಧಿಯಲ್ಲಿ ಪರಿಹಾರ ವಿತರಿಸಲು ಕ್ರಮ ವಹಿಸಿ ಎಂದು ನವೀನ್ ರಾಜ್ ಸಿಂಗ್ ನಿರ್ದೇಶನ ನೀಡಿದರು.

ಅತಿವೃಷ್ಠಿಯಲ್ಲಿ ಹಾನಿಗೀಡಾಗಿರುವ ಬೆಳೆ ಜನ-ಜಾನುವಾರು ಜೀವ ಹಾನಿ ಮನೆಗಳ ಹಾನಿಗೆ ತಕ್ಷಣ ಪರಿಹಾರ ವಿತರಿಸಿ. ಮನೆ ಸಂಪೂರ್ಣ ಹಾನಿಗೀಡಾಗಿದ್ದಲ್ಲಿ ಹೊಸದಾಗಿ ಆಶ್ರಯ ಮನೆ ವಿತರಿಸಿ. ಶಾಲೆ, ಅಂಗನವಾಡಿ, ರಸ್ತೆ, ಆಸ್ಪತ್ರೆಗಳ ದುರಸ್ತಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರಲ್ಲದೆ, ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಸರ್ವೇ ಕಾರ್ಯಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ ಕಂದಾಯ ಮುಕ್ತ ಗ್ರಾಮಗಳ ಪರಿವರ್ತನೆಗೆ ಆದ್ಯತೆ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.

ಕುಡಿಯುವ ನೀರು, ವಿದ್ಯುಚ್ಛಕ್ತಿ, ಗ್ರಾಮೀಣ ರಸ್ತೆಗಳು, ಉದ್ಯೋಗ ಖಾತ್ರಿ, ನಗರೋತ್ಥಾನ ಯೋಜನೆಗಳ ಅನುಷ್ಠಾನ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗಳ ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಗಳ ಯೋಜನಾ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಕೈಗೊಂಡಿರುವ ಆಡಳಿತ ಸುಧಾರಣೆ ಕ್ರಮ ಹಾಗೂ ತಾಲೂಕು ಮಟ್ಟದ ಜನ ಸಂಪರ್ಕ ಸಭೆಗಳ ಕುರಿತು ವಿವರಿಸಿದರು. ಸಭೆಯಲ್ಲಿ ಜಿಪಂ ಸಿಇಓ ಜಿ.ಜಗದೀಶ್, ಎಡಿಸಿ ಬಿ.ಆರ್.ಪೂರ್ಣಿಮಾ, ಎಸಿ ಲಕ್ಷ್ಮಿಕಾಂತರೆಡ್ಡಿ ಪ್ರೊಬೇ ಷನರಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಮತ್ತಿತರರಿದ್ದರು.

Translate »