ಮೈಸೂರು ನಗರಪಾಲಿಕೆಗೆ ಮುಡಾದಿಂದ 12 ಖಾಸಗಿ ಬಡಾವಣೆ ಹಸ್ತಾಂತರ ಪ್ರಕ್ರಿಯೆ ರದ್ದು
ಮೈಸೂರು

ಮೈಸೂರು ನಗರಪಾಲಿಕೆಗೆ ಮುಡಾದಿಂದ 12 ಖಾಸಗಿ ಬಡಾವಣೆ ಹಸ್ತಾಂತರ ಪ್ರಕ್ರಿಯೆ ರದ್ದು

August 28, 2019

ಮೈಸೂರು, ಆ.27(ಎಸ್‍ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಿಂದ ನಗರಪಾಲಿಕೆಗೆ ಇತ್ತೀಚೆಗೆ 12 ಖಾಸಗಿ ಬಡಾವಣೆಗಳನ್ನು ಹಸ್ತಾಂತರಿ ಸಿರುವ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಕೌನ್ಸಿಲ್ ನಿರ್ಣಯ ಕೈಗೊಳ್ಳಲಾಗಿದೆ.

ಮುಡಾ ಆಯುಕ್ತ ಕಾಂತರಾಜು ಅವರು ನಗರಪಾಲಿಕೆ ಪ್ರಭಾರ ಆಯುಕ್ತರಾಗಿದ್ದ ಸಂದರ್ಭದಲ್ಲಿ 12 ಖಾಸಗಿ ಬಡಾವಣೆ ಗಳನ್ನು ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದು ನಮ್ಮ ಗಮನಕ್ಕೂ ಬಂದಿಲ್ಲ, ಕೌನ್ಸಿಲ್ ನಲ್ಲೂ ಮಂಡನೆಯಾಗಿಲ್ಲ. ಹಾಗಾಗಿ ಈ ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ಮಂಗಳ ವಾರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮೇಯರ್ ಪುಷ್ಪಲತಾ ಜಗ ನ್ನಾಥ್ ನಿರ್ಣಯ ಪ್ರಕಟಿಸಿದರು.

ಅಲ್ಲದೆ 2 ವರ್ಷದಿಂದ ಈವರೆಗೆ ನಡೆ ದಿರುವ ಒಟ್ಟು 73 ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆಯನ್ನೂ ಪರಿಶೀಲಿಸಿ, ಕೌನ್ಸಿಲ್ ಗಮನಕ್ಕೆ ಬಾರದಂತೆ ಹಸ್ತಾಂತರಿಸಿಕೊಂಡಿ ರುವ ಬಡಾವಣೆಗಳಿದ್ದರೆ ಅವುಗಳನ್ನೂ ರದ್ದುಗೊಳಿಸಲಾಗುವುದು. ಅಲ್ಲದೆ ಆಯಾ ಕಾರ್ಪೊರೇಟರ್ ಜೊತೆಗೂಡಿ ಸಲಹಾ ಸಮಿತಿಯು ಹಸ್ತಾಂತರ ಮಾಡಿಕೊಂಡಿ ರುವ ಎಲ್ಲಾ ಬಡಾವಣೆಗಳ ಮೂಲ ಸೌಲಭ್ಯ ಪರಿಶೀಲಿಸಿ, ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗು ವುದು ಎಂದು ಅವರು ಸ್ಪಷ್ಟಪಡಿಸಿದರು.

ಮುಡಾದಿಂದ ನಗರ ಪಾಲಿಕೆಗೆ ಯಾವ ನಿಬಂಧನೆಗಳಿಗೆ ಒಳಪಟ್ಟು ಹೊಸ ಬಡಾ ವಣೆಗಳನ್ನು ಹಸ್ತಾಂತರಿಸಿಕೊಳ್ಳಲಾಗು ತ್ತದೆ? ಹಾಗೂ ಹಸ್ತಾಂತರಿಸುವ ಮುನ್ನ ಯಾವೆಲ್ಲಾ ಸೌಲಭ್ಯಗಳನ್ನು ಕಲ್ಪಿಸಿರ ಬೇಕೆಂದು 59ನೇ ವಾರ್ಡ್ ಸದಸ್ಯೆ ಸುನಂದ ಪಾಲನೇತ್ರ ಕೌನ್ಸಿಲ್ ಸಭೆಗೆ ಮಂಡಿಸಿದ ಪ್ರಶ್ನೆಗಳು ಸುದೀರ್ಘ ಚರ್ಚೆ ಹಾಗೂ ನಿರ್ಣಯಕ್ಕೆ ಕಾರಣವಾಯಿತು. ಮುಡಾದಿಂದ ಪಾಲಿಕೆಗೆ ಹಸ್ತಾಂತರಿಸಿ ರುವ ಅನೇಕ ಬಡಾವಣೆಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲಎಂದು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿರುವ ಬಡಾವಣೆಗಳ ದುಸ್ಥಿತಿಯನ್ನು ಉದಾಹರಿಸಿ ಸಭೆಗೆ ತಿಳಿಸಿದರಲ್ಲದೆ, ಮುಡಾ ಅಧಿಕಾರಿಗಳು ಹೇಳುವಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದರೆ ನಾನು ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆಂದು ಸವಾಲು ಹಾಕಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಶಿವಕುಮಾರ್, ಪಾಲಿಕೆ ಗುತ್ತಿಗೆದಾರರಿಗೆ 160 ಕೋಟಿ ರೂ. ಬಾಕಿ ನೀಡಬೇಕಿದೆ. ಈ ಸಂದರ್ಭದಲ್ಲಿ ಹೊಸ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸುವುದು ಅಸಾಧ್ಯ. ಹಾಗಾಗಿ ಈಗಾಗಲೇ ಹಸ್ತಾಂತರಿಸಿರುವ ಬಡಾವಣೆಗಳಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಇಲ್ಲವೇ ಅದಕ್ಕೆ ಬೇಕಾಗುವಷ್ಟು ಹಣವನ್ನು ಭರಿಸುವಂತೆ ಸ್ಪಷ್ಟವಾಗಿ ತಿಳಿಸಬೇಕೆಂದು ಒತ್ತಾಯಿಸಿದರು.

ಮಾಜಿ ಮೇಯರ್ ಅಯೂಬ್‍ಖಾನ್ ಮಾತನಾಡಿ, ಕೆಲ ದಿನಗಳ ಹಿಂದೆ ಹಸ್ತಾಂತರ ಮಾಡಿಕೊಂಡಿರುವ ಬಡಾವಣೆಗಳಲ್ಲಿ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ, ಉದ್ಯಾನವನ ಹೀಗೆ ಯಾವುದೇ ಮೂಲ ಸವಲತ್ತು ಒದಗಿಸಿಲ್ಲ. ಇದಕ್ಕೆಲ್ಲಾ ಕೋಟ್ಯಾಂತರ ರೂ. ಹಣ ಬೇಕಾಗುತ್ತದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಾಲಿಕೆಯಿಂದ ಇದೆಲ್ಲಾ ಸಾಧ್ಯವಿಲ್ಲ. ಇದೆಲ್ಲಾ ತಿಳಿದಿದ್ದರೂ ಯಾವ ಆಧಾರದಲ್ಲಿ ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದರಿಂದ ಪಾಲಿಕೆ ಆಡಳಿತ ಬಗ್ಗೆಯೇ ಸಂಶಯ ಮೂಡುತ್ತದೆ ಎಂದು ವಿಷಾಧಿಸಿದರು.

ಕೌನ್ಸಿಲ್ ಗಮನಕ್ಕೆ ತರದಂತೆ ಬಡಾವಣೆಗಳ ಹಸ್ತಾಂತರ ಮಾಡಿಕೊಳ್ಳಬಹುದೇ ಎಂದು ಪಾಲಿಕೆಯ ಜೆಡಿಎಸ್ ನಾಯಕಿ ಪ್ರೇಮಾ ಶಂಕರೇಗೌಡ, ಮುಡಾ ಸದಸ್ಯರೂ ಆಗಿರುವ ಕಾರ್ಪೊರೇಟರ್ ಎಸ್‍ಬಿಎಂ ಮಂಜು ಪ್ರಶ್ನಿಸಿದರು. ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ವಲಯ ಆಯುಕ್ತ ಶಿವಾನಂದಮೂರ್ತಿ, ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಕೌನ್ಸಿಲ್‍ನಲ್ಲಿ ಮಂಡನೆಯಾಗಬೇಕು. ಹಾಗೆಯೇ 2017ರಿಂದ ಈವರೆಗೆ ಕೌನ್ಸಿಲ್ ಗಮನಕ್ಕೆ ತಂದು ಒಟ್ಟು 73 ಬಡಾವಣೆ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಆದರೆ ಮುಡಾ ಆಯುಕ್ತ ಕಾಂತರಾಜು ಅವರು ಪಾಲಿಕೆ ಪ್ರಭಾರ ಆಯುಕ್ತರಾಗಿದ್ದ ಸಂದರ್ಭದಲ್ಲಿ ಆಡಿಟ್ ಕಮಿಟಿ ಗಮನಕ್ಕೆ ತಂದು ಈ 12 ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪಾಲಿಕೆ ವಿಪಕ್ಷ(ಬಿಜೆಪಿ) ನಾಯಕ ಬಿ.ವಿ.ಮಂಜುನಾಥ್ ಮಾತನಾಡಿ, ಮೇಯರ್, ಉಪಮೇಯರ್ ಗಮನಕ್ಕೂ ಬಾರದಂತೆ ಎಲ್ಲವೂ ಅಧಿಕಾರಿಗಳ ಮಟ್ಟದಲ್ಲೇ ಎಲ್ಲವೂ ನಡೆಸಲಾಗಿದೆ. ನಿಯಮ ಬಾಹಿರವಾಗಿ ನಡೆಸಲಾಗಿರುವ 12 ಬಡಾವಣೆ ಹಸ್ತಾಂತರ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಈವರೆಗೆ ಹಸ್ತಾಂತರಿಸಿಕೊಂಡಿರುವ ಎಲ್ಲಾ ಬಡಾವಣೆಗಳಲ್ಲಿರುವ ಸೌಲಭ್ಯ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಬೇಕು. ಸಮಿತಿ ವರದಿ ಬಂದ ನಂತರ ಮೂಲ ಸೌಲಭ್ಯಗಳಿಗೆ ಅಗತ್ಯವಾದ ಹಣವನ್ನು ಮುಡಾದಿಂದ ಭರಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಸದಸ್ಯ ರಮೇಶ್ ಮಾತನಾಡಿ, ನರಸಿಂಹರಾಜ ಕ್ಷೇತ್ರ ವ್ಯಾಪ್ತಿಗೆ ಬರುವ ಈ 12 ಬಡಾವಣೆ ಹಸ್ತಾಂತರ ಪ್ರಕ್ರಿಯೆನ್ನು ರದ್ದುಪಡಿಸುವುದಾದರೆ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ 73 ಬಡಾವಣೆ ಹಸ್ತಾಂತರವನ್ನೂ ಕೈಬಿಡಬೇಕು. ಇಲ್ಲವೇ ಎಲ್ಲಾ ಬಡಾವಣೆಗಳ ಪರಿಶೀಲನೆ ನಡೆಸಿ, ಸೌಲಭ್ಯ ಕಲ್ಪಿಸಲು ಬೇಕಾದ ಹಣವನ್ನು ಮುಡಾದಿಂದ ಪಡೆಯಬೇಕು. ಇದರಲ್ಲೂ ತಾರತಮ್ಯ ಮಾಡಬಾರದು ಎಂದು ಅಭಿಪ್ರಾಯಿಸಿದರು.
ಕಡೆಗೆ ಕೌನ್ಸಿಲ್ ಗಮನಕ್ಕೆ ತಾರದೆ ಬಡಾವಣೆ ಹಸ್ತಾಂತರ ಮಾಡಿಕೊಂಡಿರುವ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ಕೌನ್ಸಿಲ್ ಅಭಿಪ್ರಾಯದಂತೆ ಕಾಂತರಾಜು ಅವರು ಪ್ರಭಾರ ಆಯುಕ್ತರಾಗಿದ್ದ ಸಂದರ್ಭದಲ್ಲಿ 12 ಬಡಾವಣೆ ಹಸ್ತಾಂತರ ಮಾಡಿಕೊಂಡಿರುವುದನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಆಯಾ ವ್ಯಾಪ್ತಿಯ ಸದಸ್ಯರನ್ನೂ ಒಳಗೊಂಡ ಸಲಹಾ ಸಮಿತಿ ವತಿಯಿಂದ ಈವರೆಗೆ ಹಸ್ತಾಂತರವಾಗಿರುವ ಎಲ್ಲಾ 73 ಬಡಾವಣೆಗಳ ಸಂಬಂಧ ಪರಿಶೀಲನೆ ನಡೆಸಿ, ಕೌನ್ಸಿಲ್ ಗಮನಕ್ಕೆ ಬರದಂತೆ ಹಸ್ತಾಂತರವಾಗಿರುವ ಬಡಾವಣೆಗಳನ್ನೂ ಕೈಬಿಡಲಾಗುವುದು. ಜೊತೆಗೆ ಬಡಾವಣೆಗಳಲ್ಲಿರುವ ಮೂಲ ಸೌಲಭ್ಯಗಳ ಬಗ್ಗೆ ಪಟ್ಟಿ ಮಾಡಿ, ಅಗತ್ಯದಷ್ಟು ಹಣವನ್ನು ಮುಡಾದಿಂದ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂಬ ನಿರ್ಧಾರ ತಿಳಿಸಿದರು.

ಆರಿಫ್ ಹುಸೇನ್-ಎಸ್‍ಬಿಎಂ ಮಂಜು ವಾಕ್ಸಮರ
ಮುಡಾದಿಂದ ಪಾಲಿಕೆಗೆ ಬಡಾವಣೆಗಳ ಹಸ್ತಾಂತರ ಸಂಬಂಧ ಸದಸ್ಯೆ ಸುನಂದ ಪಾಲನೇತ್ರ ಪ್ರಶ್ನಿಸಿದ ಸಂದರ್ಭದಲ್ಲಿ ಮುಡಾ ಸದಸ್ಯರೂ ಆದ ಕಾರ್ಪೊರೇಟರ್ ಎಸ್‍ಬಿಎಂ ಮಂಜು ಸ್ಪಷ್ಟನೆ ನೀಡುತ್ತಿದ್ದರು. ಅದಕ್ಕೆ ಸುನಂದ ಅವರು ನನಗೆ ಮೇಯರ್ ಅವರಿಂದ ಉತ್ತರ ಬೇಕೆಂದು ಕೇಳುತ್ತಿದ್ದರು. ಈ ವೇಳೆ ಮಾಜಿ ಮೇಯರ್ ಆರಿಫ್ ಹುಸೇನ್ ಎದ್ದುನಿಂತು, ಕೌನ್ಸಿಲ್ ಗಮನಕ್ಕೂ ತಾರದೆ ಬಡಾವಣೆ ಹಸ್ತಾಂತರ ಮಾಡಿಕೊಂಡಿರುವುದು ನಿಯಮ ಬಾಹಿರ. ನೀವು ಮುಡಾ ಸದಸ್ಯರಾಗುವ ಮುನ್ನ ಪಾಲಿಕೆ ಸದಸ್ಯ ಎಂಬುದನ್ನು ಮರೆಯಬೇಡಿ. ಮುಡಾ ಪರವಾಗಿ ಮಾತನಾಡಬೇಡಿ ಎಂದು ಎಸ್‍ಬಿಎಂ ಮಂಜು ಅವರಿಗೆ ಹೇಳಿದರು. ತಕ್ಷಣ ಸಿಟ್ಟಿಗೆದ್ದ ಎಸ್‍ಬಿಎಂ ಮಂಜು, ಆರೋಪ ಮಾಡುವ ಮುನ್ನ ಯೋಚಿಸಬೇಕು. ನಾನು ಪಾಲಿಕೆ ಸದಸ್ಯ ಎಂಬ ಅರಿವು ನನಗಿದೆ. ನಾನೇನು ಮುಡಾ ಪರವಾಗಿ ಮಾತನಾಡುತ್ತಿಲ್ಲ. ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಏರುಧ್ವನಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

Translate »