ಯುವಕನನ್ನು ಅಪಹರಿಸಿ 50 ಸಾವಿರ   ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಸೆರೆ
ಮೈಸೂರು

ಯುವಕನನ್ನು ಅಪಹರಿಸಿ 50 ಸಾವಿರ  ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಸೆರೆ

December 3, 2019

ಮೈಸೂರು, ಡಿ.2(ಆರ್‍ಕೆ)- ಯುವಕನನ್ನು ಅಪಹರಿಸಿ 50 ಸಾವಿರ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಮೈಸೂರಿನ ನಾಡನಹಳ್ಳಿಯ ಮಂಜುನಾಥ ಅಲಿಯಾಸ್ ಮಂಜು(29), ನಾಗರಾಜು ಅಲಿಯಾಸ್ ಕೋತಿ ನಾಗ(25) ಹಾಗೂ ಹೆಬ್ಬಾಳು 3ನೇ ಹಂತದ ಸುಬ್ರಹ್ಮಣ್ಯೇಶ್ವರ ನಗರ ನಿವಾಸಿ ನವೀನ್(32) ಬಂಧಿತರು.

ಡಿಸೆಂಬರ್ 1ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ಸರ್ಕಲ್ ಬಳಿಯಿಂದ ಯಶವಂತ ಎಂಬ 21 ವರ್ಷದ ಯುವಕನನ್ನು ಅಪಹರಿಸಿದ್ದರು. ಆತನ ಸಹೋದರ ಮನುಗೆ ಕರೆ ಮಾಡಿ 50 ಸಾವಿರ ರೂ. ಹಣಕ್ಕೆ ಒತ್ತಾಯಿಸುತ್ತಿದ್ದರು. ತಕ್ಷಣ ಮನು ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಇನ್‍ಸ್ಪೆಕ್ಟರ್ ಹೆಚ್.ಹರಿಯಪ್ಪ, ಅಪಹರಣ ಪ್ರಕರಣ ನಡೆದ ಕೇವಲ ಒಂದು ತಾಸಿನಲ್ಲೇ ಆರೋಪಿಗಳನ್ನು ನಾಡನ ಹಳ್ಳಿಯ ಕನಕ ಭವನದ ಬಳಿ ಬಂಧಿಸಿ ಯಶವಂತನನ್ನು ಸುರಕ್ಷಿತವಾಗಿ ಕರೆತಂದರು.

ಬಂಧಿತ ಅಪಹರಣಕಾರರು ಐಷಾರಾಮಿ ಜೀವನ ನಡೆಸಲು ಹಣಕ್ಕಾಗಿ ಯಶವಂತ ನನ್ನು ಅಪಹರಿಸಿ ಕಾರಿನಲ್ಲಿ ಇರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಮೂವರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಡಿಸಿಪಿ ಎಂ.ಮುತ್ತುರಾಜ್ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್.ಶಶಿಧರ್ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾ ಚರಣೆಯಲ್ಲಿ ಆಲನಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ಹೆಚ್.ಹರಿಯಪ್ಪ, ಎಎಸ್‍ಐ ಹೆಚ್.ಕೆ.ಶ್ರೀಧರ, ಸಿಬ್ಬಂದಿಗಳಾದ ಚೌಡಪ್ಪ, ಶಿವಪ್ರಸಾದ್, ಮಾಣಿಕ್ ಅವರು ಭಾಗವಹಿಸಿದ್ದರು.

Translate »