ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಸಂಗೀತ ಸಮ್ಮೇಳನಕ್ಕೆ ಚಾಲನೆ
ಮೈಸೂರು

ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಸಂಗೀತ ಸಮ್ಮೇಳನಕ್ಕೆ ಚಾಲನೆ

December 3, 2019

ಮೈಸೂರು, ಡಿ.2(ಎಂಕೆ)- ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಇಪ್ಪತ್ತಾರನೆಯ ಸಂಗೀತ ಸಮ್ಮೇಳನಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.

ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ಆಯೋಜಿಸಿರುವ 5 ದಿನಗಳ ಸಂಗೀತ ಸಮ್ಮೇ ಳನವನ್ನು ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಸ್ಥಾಪಕ ಭಾಷ್ಯಂ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಗೀತ-ಸಾಹಿತ್ಯ ಸರ ಸ್ವತಿಯ ಹೃದಯವಾಗಿದೆ. ಸಂಗೀತ ಸಾಧಾರಣವಾದುದ್ದಲ್ಲ. ಬ್ರಹ್ಮಧ್ಯಾನ, ಯೋಗಧ್ಯಾನದ ಶಿಕ್ಷಣ ಪಡೆಯುವಂತೆಯೇ ಆಚಾರ್ಯ ಗುರುಗಳ ಮೂಲಕ ಸಂಗೀತ ಕಲಿಯಬೇಕು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳಂತೆ ಸಂಗೀತವೇದ 5ನೇ ವೇದವಾಗಿದೆ ಎಂದು ಹೇಳಿದರು.

ಎಲ್ಲಾ ಆಯಾಮಗಳಲ್ಲಿಯೂ ಸಂಗೀತಕ್ಕೆ ಪ್ರಥಮ ಸ್ಥಾನ ನೀಡಲಾಗಿದೆ. ಹಾಡುವಾಗ ಒಂದು ರಾಗ ವ್ಯತ್ಯಾಸವಾದರೂ ಅಪಶಕುನದಂತೆ ಭಾಸವಾಗುತ್ತದೆ. ಸಂಗೀತ ರಾಗದಿಂದ ಮನ ಸ್ಸಿಗೆ ಹಿತವನ್ನು ಕೊಡುವುದು ಮಾತ್ರವಲ್ಲದೆ, ಪರಮಾತ್ಮನ ಸಾನಿಧ್ಯ ದೊಂದಿಗೆ ಮುಕ್ತಿಮಾರ್ಗವನ್ನು ನೀಡುತ್ತದೆ. ಸಂಗೀತ ಮಾನಸಿಕ ರೋಗಗಳನ್ನು ಗುಣಪಡಿಸುತ್ತದೆ ಎಂದು ತಿಳಿಸಿದರು.

ಜೆಎಸ್‍ಎಸ್ ಸಂಸ್ಥೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದದಿಂದ ದೇಶ-ವಿದೇಶಗಳಲ್ಲಿ ತನ್ನ ಶಾಖೆಗಳನ್ನು ತೆÀರೆದುಕೊಂಡು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಭಾರತದ ವಿಜ್ಞಾನಿಗಳು ಮಾಡುತ್ತಿರುವ ಚಂದ್ರಯಾನ ಪ್ರಯೋಗ ಯಶಸ್ವಿ ಯಾಗಿ ಚಂದ್ರನಲ್ಲಿ ಜನರು ವಾಸಮಾಡುವುದಾದರೇ ಅಲ್ಲಿಯೂ ಜೆಎಸ್‍ಎಸ್ ಸಂಸ್ಥೆ ತನ್ನ ಕೇಂದ್ರವನ್ನು ತೆರೆಯುತ್ತದೆ ಎಂದು ಬಣ್ಣಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಮೈಸೂರಿನಲ್ಲಿ ನೂರಾರು ಸಂಗೀತ ಶಾಲೆಗಳು ಗುರುಕುಲಗಳೇ ಹೆಚ್ಚಾಗಿವೆ. ಮೈಸೂರು ಸಂಸ್ಥಾನ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿ ದ್ದಂತೆಯೇ ಜೆಎಸ್‍ಎಸ್ ಸಂಸ್ಥೆಯೂ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಸನಾತನ ಧರ್ಮ ಪ್ರಾರಂಭವಾದಾಗಲೇ ಸಂಗೀತವೂ ಆರಂಭ ವಾಯಿತು ಎಂದು ತಿಳಿದುಕೊಂಡಿದ್ದೇವೆ. ಮನೆಯಲ್ಲಿ ನಡೆ ಯುವ ಪೂಜೆ-ಉಪಚಾರಗಳಲ್ಲಿಯೂ ಸಂಗೀತವಿರುತ್ತದೆ. ಇಂತಹ ಸಂಗೀತವನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಜವಾ ಬ್ದಾರಿಯಾಗಿದೆ ಎಂದು ಹೇಳಿದರು.

ಭಾರತೀಯ ಸಂಸ್ಕøತಿಯ ವ್ಯವಸ್ಥೆಯನ್ನು ಶಾಸ್ತ್ರೀಯ ಸಂಗೀತ ದಲ್ಲಿ ಕಾಣುತ್ತಿದ್ದೇವೆ. ಮೊದಲೆಲ್ಲಾ ಪ್ರತಿಯೊಂದು ಮನೆಯೂ ಸಂಗೀತ ಶಾಲೆಯಾಗಿತ್ತು. ಆದರೆ ತಂತ್ರಜ್ಞಾನ ಬೆಳೆದಂತೆ ಸಂಗೀತ ಆಸಕ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಆದ್ದರಿಂದ ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಸಂಗೀತ ಕಲಿಸಬೇಕು ಎಂದರು. ರಾಜಕೀಯದಲ್ಲಿ ಮತಗಳಿ ಗಾಗಿ ಧರ್ಮ ಮತ್ತು ಆಚರಣೆ ವಿಚಾರದಲ್ಲಿ ವಿಂಗಡಣೆ ಮಾಡುವು ದನ್ನು ಕಾಣುತ್ತೇವೆ. ಆದರೆ ಸಂಗೀತ ಕ್ಷೇತ್ರದಲ್ಲಿ ಎಲ್ಲಾ ಧರ್ಮಿಯರು ಒಂದೇ ಆಗಿರುತ್ತಾರೆ. ಸಂಗೀತಕ್ಕೆ ಯಾವುದೇ ಭೇದವಿಲ್ಲ ಎಂದು ತಿಳಿಸಿದರು.

ಸನ್ಮಾನ: ಇದೇ ವೇಳೆ ಹಿರಿಯ ಕಲಾಪೋಷಕ ಬಿ.ಸಿ. ರಾಜ ಗೋಪಾಲ್ ಅವರಿಗೆ ‘ಸಂಗೀತ ಸೇವಾನಿಧಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಜತೆಗೆ ಸಂಗೀತ ಕ್ಷೇತ್ರದ ಸಾಧಕರಾದ ವಿದ್ವಾನ್ ವಿ.ಎಸ್.ರಮೇಶ್, ವಿದುಷಿ ಪುಸ್ತಕಂ ರಮಾ, ವಿದ್ವಾನ್ ಹೊನ್ನಪ್ಪ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಬಳಿಕ ನಡೆದ ವಿದುಷಿ ಚೈತ್ರಾ ಸಾಯಿರಾಂ ಅವರ ಗಾಯನ ಕಲಾಭಿಮಾನಿಗಳ ಮನಗೆದ್ದಿತು. ವಯೋಲಿನ್ ವಾದನದಲ್ಲಿ ವಿದ್ವಾನ್ ಅನಿರುದ್ಧ ಭಾರದ್ವಾಜ್, ಮೃದಂಗದಲ್ಲಿ ವಿದ್ವಾನ್ ಸಾಯಿಶಿವು ಲಕ್ಷ್ಮೀಕೇಶವ್, ಮೋರ್ಚಿಂಗ್‍ನಲ್ಲಿ ವಿದ್ವಾನ್ ವಿ.ಎಸ್. ರಮೇಶ್ ಸಹಕಾರ ನೀಡಿದರು. ನಾಳೆ (ಡಿ.3) ಬೆಳಿಗ್ಗೆ 10 ಗಂಟೆಗೆ ವಿದುಷಿ ಎಂ.ಎಲ್.ಭಾರತೀ ಅವರಿಂದ ‘ಸಂಗೀತಾಂ ಜಲಿ’, ವಿದ್ವಾನ್ ಪಟ್ಟಾಭಿರಾಮ್ ಪಂಡಿತ್ ಅವರಿಂದ ‘ವಿದ್ವತ್ ಗೋಷ್ಠಿ’ ಹಾಗೂ ಸಂಜೆ 5 ರಿಂದ ಸಂಗೀತ ಕಾರ್ಯಕ್ರಮ ಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‍ಎಸ್ ಸಂಗೀತ ಸಭಾ ಅಧ್ಯಕ್ಷ ಕೆ.ವಿ.ಮೂರ್ತಿ, ಕಾರ್ಯದರ್ಶಿ ಪ್ರೊ.ಕೆ.ರಾಮಮೂರ್ತಿ ರಾವ್, ಜಿ.ಎನ್.ಮಂಜುನಾಥ್, ತುಮಕೂರು ಯಶಸ್ವಿ, ಮಹತಿ ರಘುರಾಮ್ ಮತ್ತಿತರರು ಉಪಸ್ಥಿತರಿದ್ದರು.

Translate »