ಬೈಕಿಗೆ ಕಾರು ಡಿಕ್ಕಿ: ನವ ವಿವಾಹಿತೆ ಸೇರಿ ಇಬ್ಬರು ಸಾವು
ಮೈಸೂರು

ಬೈಕಿಗೆ ಕಾರು ಡಿಕ್ಕಿ: ನವ ವಿವಾಹಿತೆ ಸೇರಿ ಇಬ್ಬರು ಸಾವು

March 16, 2019

ಮೈಸೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಬಸ್ಸಿಗಾಗಿ ಕಾದು ನಿಂತಿದ್ದ ನವವಿವಾಹಿತೆ ಸೇರಿ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಕೋಟಿಶೆಟ್ಟಿಪುರ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.

ಶ್ರೀರಂಗಪಟ್ಟಣ ತಾಲೂಕು ಕೋಡಿಶೆಟ್ಟಿಪುರ ಗ್ರಾಮದ ಮೌನಶ್ರೀ ಹಾಗೂ ಉತ್ತರ ಕರ್ನಾಟಕ ಭಾಗದ ಸಂತೋಷ(25) ಸಾವನ್ನಪ್ಪಿದವರು. ಗಾಯಗೊಂಡಿರುವ ಬೈಕ್ ಸವಾರ ಶ್ರೀಧರ ಹಾಗೂ ಕಾರಿನಲ್ಲಿದ್ದ ಮೂವರನ್ನು ಮೈಸೂರಿನ ನಾರಾಯಣ ಹೃದಯಾ ಲಯಕ್ಕೆ ದಾಖಲಿಸಲಾಗಿದೆ. ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಮೌನಶ್ರೀ ಅವರು ಮೈಸೂರಿನ ಕಾಲೇಜಿಗೆ ಬರಲು ಕೋಡಿಶೆಟ್ಪಿಪುರ ಬಳಿ ರಸ್ತೆ ಬದಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಮಾರುತಿ ರಿಟ್ಜ್ ಕಾರು, ಕೋಡಿಶೆಟ್ಟಿಪುರ ಬಳಿ ಬೈಕಿಗೆ ಇಂದು ಬೆಳಿಗ್ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಪರಿಣಾಮ ರಸ್ತೆ ಬದಿ ನಿಂತಿದ್ದ ಮೌನಶ್ರೀಗೆ ಬೈಕ್ ಅಪ್ಪಳಿಸಿದ್ದರಿಂದ ಆಕೆಯ ಕಾಲು ತುಂಡಾಗಿ ತೀವ್ರವಾಗಿ ಗಾಯಗೊಂಡರು. ಅದೇ ವೇಳೆ ಬೈಕ್ ಹಿಂಬದಿ ಸವಾರ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮೌನಶ್ರೀ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆತಂದಾಗ ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಶ್ರೀಧರ ಹಾಗೂ ಕಾರಿನಲ್ಲಿದ್ದ ಮೂವರನ್ನು ಸಾರ್ವಜನಿಕರು ಮೈಸೂರಿನ ನಾರಾಯಣ ಹೃದಯಾಲಯಕ್ಕೆ ಕರೆತಂದು ದಾಖಲಿಸಿದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

Translate »