ವನ್ಯ ಪ್ರಾಣಿ ನೋವಿಗೂ ಸ್ಪಂದಿಸಿ ಮಾನವೀಯತೆ ಮೆರೆದ ಸಾ.ರಾ.ಮಹೇಶ್
ಕೊಡಗು

ವನ್ಯ ಪ್ರಾಣಿ ನೋವಿಗೂ ಸ್ಪಂದಿಸಿ ಮಾನವೀಯತೆ ಮೆರೆದ ಸಾ.ರಾ.ಮಹೇಶ್

August 4, 2018

ಮಡಿಕೇರಿ: ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿಯಿಂದ ಗಂಭೀರ ಗಾಯ ಗೊಂಡಿದ್ದ ಜಿಂಕೆಗೆ ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಅಧಿಕಾರಿಗಳ ಸಭೆ ನಡೆಸಲು ಸಚಿವ ಸಾ.ರಾ. ಮಹೇಶ್ ಮಡಿಕೇರಿಗೆ ಆಗಮಿಸುತ್ತಿದ್ದರು. ಕುಶಾಲನಗರ ಮಾರ್ಗವಾಗಿ ಮಡಿಕೇರಿ ಬರುವ ಸಂದರ್ಭ ಆನೆಕಾಡು ರಕ್ಷಿತಾರಣ್ಯ ಬಳಿ ತಮಿಳುನಾಡು ಮೂಲದ ಪ್ರವಾಸಿ ವಾಹನವೊಂದು ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿ ಹೊಡೆದಿತ್ತು. ವಾಹನದ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ತೆರಳಿದ್ದು, ಡಿಕ್ಕಿಯ ರಭಸಕ್ಕೆ ಜಿಂಕೆಯ ಮುಂಗಾಲಿಗೆ ಗಂಭೀರ ಗಾಯವಾಗಿ ರಸ್ತೆ ಬದಿಯಲ್ಲಿ ಬಿದ್ದು ಹೊರಳಾಡುತ್ತಿತ್ತು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜಿಂಕೆಯನ್ನು ಗಮನಿಸಿ ತಮ್ಮ ಕಾರು ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಬಳಿಕ ಸ್ಥಳಕ್ಕೆ ತೆರಳಿದ ಸಚಿವ ಸಾ.ರಾ.ಮಹೇಶ್ ನಿತ್ರಾಣಗೊಂಡಿದ್ದ ಜಿಂಕೆಗೆ ನೀರು ಕುಡಿಸಿ ಉಪಚರಿಸುವ ಮೂಲಕ ಮೂಕ ಪ್ರಾಣಿಯ ರೋಧನೆಗೆ ಮರುಗಿದರು. ತಕ್ಷಣವೇ ಜಿಂಕೆಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಜಿಂಕೆ ಸಂಪೂರ್ಣ ಗುಣ ಮುಖವಾಗುವವರೆಗೆ ನಿಗಾ ವಹಿಸಿ, ಬಳಿಕ ಅರಣ್ಯಕ್ಕೆ ಬಿಡುವಂತೆ ಸ್ಥಳದಲ್ಲಿದ್ದ ಅಧಿ ಕಾರಿಗಳಿಗೆ ಸೂಚನೆ ನೀಡಿದರು. ಜಿಂಕೆಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರ ರಿಯಾಗಿರುವ ವಾಹನ ವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಸಚಿವ ಸಾ.ರಾ.ಮಹೇಶ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆ ಮೂಲಕ ಮುಗ್ಧ, ಮೂಕಜೀವಿ ಜಿಂಕೆಯ ನೋವಿಗೆ ಮಿಡಿಯುವ ಮೂಲಕ ಸಚಿವ ಸಾ.ರಾ.ಮಹೇಶ್ ಮಾನವೀಯತೆ ಮೆರೆದರು.

Translate »