ಮುಖ್ಯಮಂತ್ರಿ ಚಂದ್ರು ಅವರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರಧಾನ
ಮೈಸೂರು

ಮುಖ್ಯಮಂತ್ರಿ ಚಂದ್ರು ಅವರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರಧಾನ

October 20, 2018

ಬೈಲಕುಪ್ಪೆ: ಕಾವೇರಿ ನದಿ ಮಲಿನ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ ಎಂದು ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.ಕೊಡಗಿನ ಗಡಿಭಾಗದ ಬಿ.ಎಂ.ರಸ್ತೆ ಬದಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಮ್ಮನ ಆವರಣದಲ್ಲಿ 6ನೇ ವರ್ಷದ ಕಾವೇರಿರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕಾವೇರಿ ನದಿ ನೀರಿಗಾಗಿ ತಮಿಳುನಾಡಿ ನವರು ಕ್ಯಾತೆ ತೆಗೆದಾಗ ಒಗ್ಗಟ್ಟಿನಿಂದ ಪಕ್ಷಭೇದ ಮರೆತು ನಾವೆಲ್ಲರೂ ಹೋರಾಟಕ್ಕೆ ಸಜ್ಜಾಗುತ್ತೇವೆ. ಅದೇ ರೀತಿ ಪ್ರವಾಹ ದಿಂದ ನಲುಗಿದ ಕೊಡಗಿನ ಕುಟುಂಬ ಸ್ಥರಿಗೆ ನೆರವಾಗಬೇಕಾಗಿದೆ. ನಾನು ಸಹ ಕೊಡಗಿನ ಸಂತ್ರಸ್ತರ ನೆರವಿಗೆ ದಾವಿಸು ತ್ತಿದ್ದೇನೆ ಎಂದು ತಿಳಿಸಿದರು. ಯಾವುದೋ ಸಣ್ಣಸಣ್ಣ ಕಾರಣಗಳನ್ನಿಟ್ಟುಕೊಂಡು ಆಯಾಯ ರಾಜ್ಯದ ಜನರು ರಾಜ್ಯ ವಿಭಜನೆಗೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಅಯ್ಯಪ್ಪಸ್ವಾಮಿ ಬಾಯ್ಬಿಟ್ಟು ಯಾರನ್ನು ದ್ವೇಷಿಸಿಲ್ಲ. ಗಂಡು-ಹೆಣ್ಣು ಎಂಬ ಭೇದ ಭಾವವಿಟ್ಟುಕೊಂಡು ಕೇರಳ ರಾಜ್ಯದ ಜನರು ಹೋರಾಟಕ್ಕೆ ಮುಂದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದರು. ನಾನು ಮುಖ್ಯಮಂತ್ರಿ ಚಂದ್ರು, ಹಾಲೀನು ಅಲ್ಲ! ಮಾಜಿನೂ ಅಲ್ಲ! ವಿಧಾನ ಸೌಧವನ್ನು ಯಾರಾದರು ಕೇಳಿದರೆ ಬರೆದುಕೊಡಲು ರೆಡಿಯಿದ್ದೇನೆ ಎಂದು ಹಾಸ್ಯಚಟಾಕಿ ಹಾರಿಸಿದರು. ಸಭೆಯಲ್ಲಿ ಮಾಜಿ ಅರಣ್ಯ ಸಚಿವ ಸಿ.ಹೆಚ್.ವಿಜಯ ಶಂಕರ್, ಮುಖ್ಯಮಂತ್ರಿ ಚಂದ್ರು ಅವರ ಪತ್ನಿ ಪದ್ಮಾ ಮಾತನಾಡಿದರು.

ಸಭೆಯಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಸೈನಿಕರಾದ ಕೊಡಗಿನ ಪ್ರಸನ್ನಕುಮಾರ್ ಹಾಗೂ ಕ್ರೀಡೆಯಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಅರ್ಪಿತಾ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಕಾವೇರಿ ತೀರ್ಥ ವಿನಿಯೋಗಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರು ಅವರ ಕುಟುಂಬಸ್ಥರಾದ ರವೀಂದ್ರ ರಾವ್, ಶ್ರೀಲತಾ, ಭಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬಭೀಂದ್ರಪ್ರಸಾದ್, ಸದಸ್ಯರಾದ ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಎಸ್.ಎಲ್. ಎನ್.ಸಾತಪ್ಪನ್, ವಿಶ್ವನಾಥ್, ಕೊಡಗು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್, ತಾಪಂ ಮಾಜಿ ಸದಸ್ಯ ಸೋಮಶೇಖರ್, ಕಾಂಗ್ರೆಸ್ ಮುಖಂಡ ರಾಜೇಗೌಡ, ಶಶಿ, ಕುಶಾಲನಗರದ ರುದ್ರೇಶ್, ಪ್ರಭುದೇವ, ಚಂದ್ರು, ರವಿ ಮಹಿಳೆಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »