ಜಿಲ್ಲಾದ್ಯಂತ ಸಂಭ್ರಮದ ಆಯುಧಪೂಜೆ, ವಿಜಯದಶಮಿ
ಮಂಡ್ಯ

ಜಿಲ್ಲಾದ್ಯಂತ ಸಂಭ್ರಮದ ಆಯುಧಪೂಜೆ, ವಿಜಯದಶಮಿ

October 20, 2018

ಎಲ್ಲೆಡೆ ಸಡಗರ, ದೇವಾಲಯಗಳಲ್ಲಿ ವಿಶೇಷ ಪೂಜೆ, ಜಾನಪದ ಕಲಾತಂಡಗಳ ಅದ್ಧೂರಿ ಮೆರವಣಿಗೆ
ಮಂಡ್ಯ:  ಜಿಲ್ಲೆಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಆಯುಧಪೂಜೆ ಅಂಗವಾಗಿ ಸರ್ಕಾರಿ ಕಚೇರಿಗಳು, ಬಸ್ ಡಿಪೋ, ಲಾರಿ, ಆಟೋ ನಿಲ್ದಾಣ, ಮನೆ, ಕಾರ್ಖಾನೆ, ಆಲೆಮನೆ, ಪಂಪ್‍ಸೆಟ್, ಅಂಗಡಿ-ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ನಡೆದರೆ. ದಸರಾ ಅಂಗ ವಾಗಿ ಜಿಲ್ಲೆಯ ವಿವಿಧೆಡೆ ಜಾನಪದ ಕಲಾ ತಂಡಗಳೊಂದಿಗೆ ಚಾಮುಂಡೇಶ್ವರಿ ತಾಯಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಮಂಡ್ಯ ವರದಿ: ವಿಶ್ವ ವಿಖ್ಯಾತ ಜಂಬೂ ಸವಾರಿ ಬೆನ್ನಲ್ಲೇ ಸಕ್ಕರೆ ನಾಡಲ್ಲಿ ಮಂಡ್ಯ ದಸರಾವನ್ನು ಆಚರಣೆ ಮಾಡಲಾಯಿತು. ಮಂಡ್ಯ ಯೂತ್ ಗ್ರೂಪ್ ನಿಂದ ಆಯೋಜಿಸ ಲಾಗಿದ್ದ ಮಂಡ್ಯ ದಸರಾಗೆ ಕಾಳಿಕಾಂಬ ದೇವಿ ಸನ್ನಿಧಿಯಲ್ಲಿರೋ ಬನ್ನಿ ಮರಕ್ಕೆ ಪೂಜೆ ಸಲ್ಲಿಸೋ ಮುಖಾಂತರ ಚಾಲನೆ ನೀಡಲಾಯಿತು. ಸತತ 5 ವರ್ಷಗಳಿಂದ ಮಂಡ್ಯ ನಗರದಲ್ಲಿ ದಸರಾ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ಸಾಮಾಜಿಕ ಕಳಕಳಿ ಸಾರುವ ಸ್ತಬ್ದಚಿತ್ರ ಗಳು ಭಾಗಿಯಾಗಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡದ ಮೆರವಣಿಗೆ ಮಾಡಲಾಯಿತು.

ಕರಡಕೆರೆಯಲ್ಲಿ ಮಿನಿ ದಸರಾ: ಭಾರತೀ ನಗರದ ಸಮೀಪದ ಕರಡಕೆರೆಯಲ್ಲಿ ವಿಜಯ ದಶಮಿ ದಿನ ಶ್ರೀ ಆಂಜನೇಯಸ್ವಾಮಿಯನ್ನು ಹೂವಿನ ಪಲ್ಲಕಿಯಲ್ಲಿ ಕೂರಿಸಿ ಮಿನಿ ದಸರಾದಂತೆ ಮೆರವಣಿಗೆ ಮಾಡಿ ಸಂಭ್ರಮ ದಿಂದ ಆಚರಿಸಲಾಯಿತು.

ಗ್ರಾಮವನ್ನು ವಿದ್ಯುತ್ ದ್ವೀಪಗಳಿಂದ ಅಲಂಕರಿಸಲಾಗಿತ್ತು. ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಬಸವದೇವರು ಹಾಗೂ ಅರವಟ್ಟಿಗೆಗಳೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಬನ್ನಿಮಂಟಪಕ್ಕೆ ತಂದು ವಿಶೇಷ ಪೂಜೆ ನೆರವೇರಿಸಿ, ಬೃಹತ್ ಆಕಾರದ ಹೂವಿನ ಪಲ್ಲಕ್ಕಿ ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರು ಭಕ್ತರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದರು.

ಚಾಂಷುಗರ್ ಕಾರ್ಖಾನೆ: ಕಾರ್ಖಾನೆಯ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 9 ದಿನಗಳಿಂದ ದೇವಾಲಯದಲ್ಲಿ ಹಲವು ಪೂಜಾ ಕಾರ್ಯಕ್ರಮ ನಡೆಸಲಾಯಿತು. ವಿಜಯದಶಮಿ ದಿನ ಅರ್ಚಕ ಕಾರ್ತಿಕ್ ನೇತೃತ್ವದಲ್ಲಿ ದೇವಿಗೆ ಪೂಜೆ ನೆರವೇರಿ ಸಲಾಯಿತು.

ದೇವಾಲಯದ ಆವರಣದಲ್ಲಿರುವ ಗಣಪತಿ, ನವಗ್ರಹ, ಆಂಜನೇಯ, ಕಾಲ ಭೈರವೇಶ್ವರ, ವಾಸುಕಿ, ನಾಗರಾಜ ದೇವರುಗಳಿಗೂ ಸಹ ಪೂಜೆ ಸಲ್ಲಿಸಲಾ ಯಿತು. ನಂತರ ಭಕ್ತರಿಗೆ ಪ್ರಸಾದ ವಿನಿ ಯೋಗ ಮಾಡಲಾಯಿತು.

ಮದ್ದೂರು ವರದಿ: ಪಟ್ಟಣದ ಹೊಳೆ ಬೀದಿ ರೇಣುಕಾ ಎಲ್ಲಮ್ಮದೇವಿ ದೇಗುಲದಲ್ಲಿ ವಿಜಯದಶಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯ ಜರುಗಿತು. ವಿಜಯ ದಶಮಿ ಅಂಗವಾಗಿ ಮುಂಜಾನೆ ದೇವಿಗೆ ವಿಶೇಷ ಅಭಿಷೇಕ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ ದೇವಿಯನ್ನು ಶ್ರೀಚಾಮುಂಡೇಶ್ವರಿ ರೂಪದಲ್ಲಿ ಅಲಂಕರಿಸಿ ಮಹಾಮಂಗಳಾ ರತಿ ಮಾಡಲಾಯಿತು.

ಬಳಿಕ, ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತು. ಧರ್ಮದರ್ಶಿ ಟಿ.ಶ್ರೀನಿವಾಸ್, ಟ್ರಸ್ಟ್‍ನ ಖಜಾಂಚಿ ಎಂ.ಡಿ.ಕಿರಣ್‍ಪ್ರಸಾದ್, ಟ್ರಸ್ಟಿ ಗಳಾದ ಕೆ.ದೇವರಾಜು, ಟಿ.ವೆಂಕಟೇಶ್, ಉದ್ಯಮಿಗಳಾದ ಮಂಜುಳಾ ಶ್ರೀನಿವಾಸ್, ಸಿಂಧುವೆಂಕಟೇಶ್, ಪ್ರಿಯಾಮಹೇಶ್, ಸುಮಿತ್ರಾ, ಎಂ.ಕೆ.ಮಹೇಶ್, ಜ್ವಾಲಮುಖಿ ಕೋಕಿಲಾ ಕೃಷ್ಣಪ್ಪ, ಮಮತಾಕೃಷ್ಣ, ವಸಂತ ವೆಂಕಟರಾಜು, ಪಾರ್ವತಮ್ಮ ಶಿವಪ್ಪ ಪಾಲ್ಗೊಂಡಿದ್ದರು.

ಶ್ರೀರಂಗಪಟ್ಟಣ ವರದಿ: ದಸರಾ ಅಂಗವಾಗಿ ಶ್ರೀರಂಗ ವೇದಿಕೆಯಲ್ಲಿ 2ನೇ ದಿನ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಿತು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತಕ್ಕೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ರಾಜೆಶ್ ಕೃಷ್ಣನ್ ಹಾಡು ಕೇಳುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ನೆರೆದಿದ್ದ ಸಂಗೀತ ಪ್ರಿಯರು ಹಾಗೂ ಗ್ಯಾಲರಿಯಲ್ಲಿ ಕುಳಿತ ಯುವಕರು ಸಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಇದಕ್ಕೂ ಮುನ್ನ ವೇದಿಕೆಯಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಲೇಖಕಿ ಡಾ.ಲತಾ ರಾಜಶೇಖರ್ ಡೋಲು ಬಾರಿಸು ಮೂಲಕ ಚಾಲನೆ ನೀಡಿದರು.

ಕೆ.ಆರ್.ಪೇಟೆ ವರದಿ: ತಾಲೂಕಿನ ಕಾಳೇಗೌಡನಕೊಪ್ಪಲು ಬಳಿ ಇರುವ ಮಣಿಗನಹಳ್ಳಿ ಶ್ರೀ ಮಹೇಶ್ವರಿ ದೇವಾಲಯ ದಲ್ಲಿ ಮಹೇಶ್ವರಿ ವಂಸ್ಥರಿಂದ ಮಿನಿ ದಸರಾ ಮಾದರಿಯಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆಯು ಜಾನಪದ ಕಲಾತಂಡಗಳ ಉತ್ಸವದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ನಾಡದೇವತೆ ತಾಯಿ ಶ್ರೀ ಚಾಮುಂಡೇ ಶ್ವರಿ ಅಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗಾರಗೊಂಡಿದ್ದ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಜನಪದ ಕಲಾ ತಂಡಗಳ ವೈಭವದ ಮೆರವಣಿಗೆ ಯನ್ನು ಯಡಹಳ್ಳಿ, ಕಾಳೇಗೌಡÀನ ಕೊಪ್ಪಲು, ವಿಠಲಾಪುರ, ದೊಡ್ಡನಕಟ್ಟೆ, ಕಾಪನಹಳ್ಳಿ, ಚಾಮಿಕೊಪ್ಪಲು ಗ್ರಾಮಗಳ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ದಾರಿಯುದ್ದಕ್ಕೂ ನೂರಾರು ಭಕ್ತಾದಿ ಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ, ವೀರಭದ್ರನ ನೃತ್ಯ, ವೀರಗಾಸೆ, ಕೋಲಾಟ ನೃತ್ಯ, ಸಿಡಿಮದ್ದು ಪ್ರದರ್ಶನ ಮೆರ ವಣಿಗೆಯ ರಂಗನ್ನು ಹೆಚ್ಚಿಸಿದ್ದವು. ಉತ್ಸವದ ಅಂಗವಾಗಿ ಬನ್ನಿಪೂಜೆ, ನವ ಕುಂಭಾಭಿಷೇಕ, ಉಯ್ಯಾಲೋತ್ಸವ, ಮಹಾ ಮಂಗಳಾರತಿ, ಅನ್ನದಾನ ನಡೆದವು. ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಶ್ರೀ ಚಾಮುಂಡೇ ಶ್ವರಿ ಉತ್ಸವ ಹಾಗೂ ಪೂಜಾ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಮಹೇಶ್ವರಿ ವಂಶಸ್ಥರಾದ ಸಮಾಜ ಸೇವಕ ಡಾ.ಕೆ.ಎನ್.ದಿನೇಶ್, ಹೆಚ್. ಅನುಶ್ರೀ, ಶ್ರೀಮತಿ ಸರೋಜಮ್ಮ, ಗೋವಿಂದೇ ಗೌಡ ದಂಪತಿಗಳು ಉತ್ಸವ ಹಾಗೂ ಅನ್ನಸಂತರ್ಪಣೆಯ ನೇತೃತ್ವವಹಿಸಿದ್ದರು.

ಚೌಡೇಶ್ವರಿ ದೇವಸ್ಥಾನ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ದೇವರಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

Translate »