ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ
ಮಂಡ್ಯ

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ

July 23, 2018
  • ಸಿದ್ದರಾಮಯ್ಯ ಆಗಿದ್ರೆ ಕ್ಷಣಾರ್ಧದಲ್ಲೇ ಕೆಲಸ ಮಾಡಿಸುತ್ತಿದ್ದೆ: ವಾಟಾಳ್ ನಾಗರಾಜ್
  • ಉಚಿತ ಬಸ್‍ಪಾಸ್ ನೀಡದಿದ್ದರೆ ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ಬಂದ್

ಶ್ರೀರಂಗಪಟ್ಟಣ: ಕೇಂದ್ರ ಸರ್ಕಾರ ಕಾವೇರಿ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಇದರ ವಿರುದ್ಧ ರಾಜ್ಯದ ಸಂಸದರು ಧ್ವನಿ ಎತ್ತಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕಿಂದು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ಪ್ರಾಧಿಕಾರ ರಚನೆಯಾದರೆ ರಾಜ್ಯಗಳಲ್ಲಿನ ಜಲಾಶಯದ ಮೇಲೆ ರಾಜ್ಯದ ಹಿಡಿತ ಕೈ ತಪ್ಪಲಿದೆ. ಇದರ ಬಗ್ಗೆ ರಾಜ್ಯದ ಸಂಸದರು ಸೇರಿದಂತೆ ಶಾಸಕರು ವಿರೋಧ ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ನೀಡಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಪ್ರಾಧಿಕಾರ ರಚಿಸಿ ಜಾರಿಗೆ ತಂದರೆ, ಕರ್ನಾಟಕ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಮಿಳುನಾಡಿನಿಂದ ರಾಜಕೀಯ ಒತ್ತಡ: ಕಾವೇರಿ ನೀರು ವಿಚಾರದಲ್ಲಿ ತಮಿಳುನಾಡು ನಮ್ಮ ರಾಜ್ಯದ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಪ್ರಾಧಿಕಾರ ರಚಿಸುವಂತೆ ಕೇಂದ್ರದ ಮೇಲೆ ರಾಜಕೀಯ ಒತ್ತಡ ಹಾಕುತ್ತಿದೆ. ಪ್ರಾಧಿಕಾರ ರಚನೆ ಯಾದರೆ ಮಂಡ್ಯ, ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ. ಜಿಲ್ಲೆಯ ಕೆರೆಗ ಳನ್ನು ತುಂಬಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಾಧಿ ಕಾರದ ರಚನೆಗೆ ವಿರೋಧ ವ್ಯಕ್ತಪಡಿಸಬೇಕು ಎಂದರು.

ದುಡ್ಡಿನ ಚುನಾವಣೆಗಳು: ಇನ್ನು ಮುಂದೆ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನನ್ನು ಗೆಲ್ಲಿಸುವ ಭರವಸೆ ಹಾಗೂ ನನ್ನ ಹೋರಾಟ ಅಗತ್ಯವಿದೆ ಎಂದು ಅನಿಸಿ ಬೆಂಬಲ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಈಗಿನ ಚುನಾವಣೆಗಳು ಬರೀ ದುಡ್ಡಿನ ಚುನಾವಣೆಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಇದ್ದಿದ್ದರೆ ಕ್ಷಣಾರ್ಧದಲ್ಲೇ ಕೆಲಸ: ಚಾಮರಾಜನಗರದ ಜನರು ನಾನು ಉತ್ತಮ ಕೆಲಸ ಮಾಡಿದ್ದರೂ ಸೋಲಿಸಿದರು. ಎರಡು ರಾಷ್ಟ್ರೀಯ ಹಾಗೂ ಒಂದು ಪ್ರಾದೇಶಿಕ ಪಕ್ಷಗಳಿಗೆ ಜನರ ಸಮಸ್ಯೆ ಅರ್ಥ ಆಗುತ್ತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದರೆ ಯಾವುದೇ ಕೆಲಸವನ್ನು ಕ್ಷಣಾರ್ಧದಲ್ಲಿ ಮಾಡಿಸುತ್ತಿದ್ದೆ ಎಂದರು.

ಕರ್ನಾಟಕ ಬಂದ್: ಸಿಎಂ ಎಚ್.ಡಿ.ಕುಮಾರ ಸ್ವಾಮಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಾಜ ಕೀಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡದಿದ್ದರೆ ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೋಮಾ ಸ್ಥಿತಿಗೆ ಸರ್ಕಾರ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಕೋಮಾ ಸ್ಥಿತಿಗೆ ಹೋಗುವ ಘಳಿಗೆಯಲ್ಲಿದೆ. ಯಾವ ಸಂದರ್ಭದಲ್ಲಾದರೂ ಕೋಮಾಗೆ ಹೋಗಲಿದೆ ಎಂಬುದನ್ನು ಹೇಳಲಿಕ್ಕೆ ಆಗುವುದಿಲ್ಲ. ಹೃದಯ ಬಡಿತ ಸಂಪೂರ್ಣವಾಗಿ ಯಾವಾಗ ನಿಂತು ಹೋಗುತ್ತದೆಯೋ ಗೊತ್ತಿಲ್ಲ ಎಂದರು.

101 ತೆಂಗಿನಕಾಯಿ ಒಡೆದು ಪ್ರಾರ್ಥನೆ
ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಜಲಾಶಯಕ್ಕೆ ಭೇಟಿ ನೀಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ 101 ತೆಂಗಿನ ಕಾಯಿ ಒಡೆದು ಪ್ರತಿ ವರ್ಷ ಜಲಾಶಯ ಭರ್ತಿಯಾಗಿ ರೈತರ ಜೀವನ ಸಮೃದ್ಧಿಯಾಗಲಿ. ಅಲ್ಲದೆ, ತಮಿಳುನಾಡು ಹಾಗೂ ರಾಜ್ಯದ ನಡುವೆ ಕಾವೇರಿ ವಿವಾದ ಮತ್ತೆ ಮರುಕಳಿಸದಿರಲಿ ಎಂದು ಪ್ರಾರ್ಥಿಸಿದರು.

Translate »