ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಉದ್ಯಮಗಳ ಸ್ಥಾಪನೆಗೆ ತೊಡಕಾದ ಮೂಲ ಸೌಲಭ್ಯ
ಚಾಮರಾಜನಗರ

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಉದ್ಯಮಗಳ ಸ್ಥಾಪನೆಗೆ ತೊಡಕಾದ ಮೂಲ ಸೌಲಭ್ಯ

July 23, 2018

ಚಾಮರಾಜನಗರ: ತಾಲೂಕಿನ ಬದನ ಗುಪ್ಪೆ-ಕೆಲ್ಲಂಬಳ್ಳಿ ನಡುವೆ ಇರುವ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾಗಿರುವ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯವಿಲ್ಲದೆ ಉದ್ಯಮಿಗಳು ಕೈಗಾ ರಿಕೆಗಳ ಸ್ಥಾಪನೆಗೆ ಮುಂದಾಗುತ್ತಿಲ್ಲ.

ರಾಜ್ಯದಲ್ಲಿ ಕಳೆದ ಅವಧಿಯಲ್ಲಿ ಅಧಿಕಾರ ದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಾಲೂಕಿನ ಬದನಗುಪ್ಪೆ ಹಾಗೂ ಕೆಲ್ಲಂಬಳ್ಳಿ ನಡುವೆ 1,460 ಎಕರೆ ಪ್ರದೇಶವನ್ನು ಗುರುತಿಸಿ ಅಲ್ಲಿ ಕೈಗಾರಿಕೆಗಳ ವಸಾಹತು ನಿರ್ಮಾಣ ಮಾಡುವುದನ್ನು ಕೈಗೆತ್ತಿಕೊಂಡಿತ್ತು.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ.ಎಚ್.ಎಸ್. ಮಹದೇವಪ್ರಸಾದ್ ಅವರು ಜಿಲ್ಲೆಯಲ್ಲಿ ನಿರು ದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪನೆಗೆ ಹೆಚ್ಚಿನ ಕಾಳಜಿ ವಹಿಸಿ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಸೂಚಿಸಿ ಭೂ ಸ್ವಾಧೀನಪಡಿಸಿಕೊಳ್ಳಲು ಭೂ ಮಾಲೀಕ ರಿಗೆ ಎಕರೆಗೆ 20ಲಕ್ಷ ರೂ. ಪರಿಹಾರ ನೀಡಿತು. ಇದಕ್ಕಾಗಿ ಕೋಟ್ಯಾಂತರ ರೂ. ವೆಚ್ಚ ಮಾಡಿ ಬದನಗುಪ್ಪೆ ಬಳಿ ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪಿಸಲೇಬೇಕು ಎಂದು ಪಣ ತೊಟ್ಟಿತ್ತು.

ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಹಾಗೂ ಕರ್ನಾಟಕ ವಾಣಿಜ್ಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಆರ್.ಶಿವಕುಮಾರ್ ಅವರ ಅಭಿಪ್ರಾಯದಂತೆ ತಮಿಳುನಾಡಿನ ಕೊಯ ಮತ್ತೂರಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೋಡ್ ಶೋ ನಡೆಸುವ ಮೂಲಕ ಉದ್ಯಮಿಗಳನ್ನು ಚಾಮರಾಜನಗರದತ್ತ ಆಕರ್ಷಿಸಲು ಪ್ರಯತ್ನಿಸಲಾಯಿತು.

ಪ್ರಾರಂಭದಲ್ಲಿ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಅಗತ್ಯವಾಗಿರುವ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ ವೇಗವಾಗಿ ಸಾಗಿತ್ತು. ವಿದ್ಯುತ್‍ಚ್ಛಕ್ತಿ ಪೂರೈಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಲಾಗಿತ್ತು. ಆದರೆ, ಈ ವಸಾಹತು ನಿರ್ಮಾಣದ ಕನಸು ಕಂಡಿದ್ದ ಮಹದೇವಪ್ರಸಾದ್ ಅವರ ನಿಧನ ದಿಂದ ಕಾಮಗಾರಿಯ ವೇಗ ಕುಗ್ಗಿತು. ನಂತರ ಇದರ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಅಷ್ಟೇನೂ ಕಾಳಜಿವಹಿಸಲಿಲ್ಲ. ಇದರ ಕಾರಣ ಯೋಜನೆ ಫಲ ಪ್ರದವಾಗಲಿಲ್ಲ ಎಂಬ ದೂರುಗಳು ಕೇಳಿ ಬಂದಿದೆ.

‘ಕೈಗಾರಿಕಾ ವಸಾಹತು ಪ್ರದೇಶದಲ್ಲಿ 18 ಕಿ.ಮೀ. ರಸ್ತೆ ನಿರ್ಮಾಣದಲ್ಲಿ ಬಹುತೇಕ ಕಾಮಗಾರಿ ಮುಗಿದಿದೆ. ಇನ್ನೂ ಸ್ವಲ್ಪ ಮಾತ್ರ ಬಾಕಿ ಇದೆ. ಕಬಿನಿಯಿಂದ ನೀರು ಪೂರೈಸುವ 18 ಕಿ.ಮೀ. ಪೈಕಿ 10ಕಿ.ಮೀ. ಪೈಪ್‍ಲೈನ್ ಕಾಮಗಾರಿ ಮುಗಿದಿದೆ. ವಿದ್ಯುತ್ ಪೂರೈಕೆ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನೂ 6-7 ತಿಂಗಳಲ್ಲಿ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳಲಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಎನ್.ಮರಳೇಶ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಈ ಕೈಗಾರಿಕಾ ಪ್ರದೇಶದಲ್ಲಿ 780 ಕೋಟಿ ರೂ. ಬಂಡವಾಳದಡಿ ಟೆಕ್ಸ್‍ಟೈಲ್ ಸ್ಥಾಪಿಸಲು ಬಿರ್ಲಾ ಕಂಪೆನಿ ಮುಂದೆ ಬಂದಿದೆ. 94 ಕೈಗಾರಿಕೆಗಳ ಸ್ಥಾಪನೆಗೆ ಅನುಮೋದನೆಯು ದೊರೆತಿದೆ. ಉದ್ಯಮಗಳನ್ನು ಆರಂಭಿಸಲು ಅನುಸರಿಸ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವರ ಭೇಟಿ: ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಕ್ಕರೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ನಾಳೆ (ಜು.23) ಬೆಳ್ಳಿಗೆ 10.30ಕ್ಕೆ ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ನಂತರ, ಚಾಮರಾಜನಗರ ದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳ ಹಾಗೂ ಇಲಾಖೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಅವರ ಭೇಟಿ ಯಿಂದ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಸಚಿವರ ಈ ಸಭೆ ಮಹತ್ವ ಪಡೆದಿದ್ದು, ಆಮೆ ಗತಿ ವೇಗದಲ್ಲಿ ಸಾಗುತ್ತಿರುವ ಕಾಮಗಾರಿಗಳು ವೇಗ ಪಡೆದುಕೊಳ್ಳಬೇಕು. ಕೈಗಾರಿಕೆಗಳು ಸ್ಥಾಪನೆಗೊಂಡು ಜಿಲ್ಲೆ ಅಭಿವೃದ್ಧಿ ಹೊಂದಬೇಕು. ಜಿಲ್ಲೆಯಲ್ಲಿ ರುವ ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕು ಎಂಬ ಆಶಯವನ್ನು ಹೊಂದಲಾಗಿದೆ.

ಬದನಗುಪ್ಪೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಕೆಲಸ ಪೂರ್ಣಗೊಂಡಿಲ್ಲ. ಇದರಿಂದ ಬಂಡವಾಳ ಹೂಡಿಕೆದಾರರನ್ನು ಚಾ.ನಗರ ಜಿಲ್ಲೆಗೆ ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಕೈಗಾರಿಕಾ ಪ್ರದೇಶಕ್ಕೆ ನೀರಿನ ಸೌಲಭ್ಯ. ವಿದ್ಯುತ್ ಪೂರೈ ಸುವ ಕಾಮಗಾರಿ ಆದಷ್ಟು ಬೇಗ ಪೂರ್ಣ ಗೊಳ್ಳಬೇಕು. ಈ ನಿಟ್ಟಿನಲ್ಲಿ ಸಚಿವರಾದ ಕೆ.ಜೆ. ಜಾರ್ಜ್ ಅವರು ಗಮನಹರಿಸಬೇಕಾಗಿದೆ. -ಆರ್.ಶಿವಕುಮಾರ್, ಅಧ್ಯಕ್ಷರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ.

Translate »