ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ
ಮಂಡ್ಯ

ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ ಪರಿಸರ ಚಿತ್ರಕಲಾ ಸ್ಪರ್ಧೆ: ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಮುಂದಾಗೋಣ

July 23, 2018

ಮಂಡ್ಯ:  ಪ್ರಸ್ತುತ ದಿನಗಳಲ್ಲಿ ದೇಶವನ್ನು ಪ್ಲಾಸ್ಟಿಕ್ ಮುಕ್ತ ಭಾರತವನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕಲಾತಪಸ್ವಿ ಟ್ರಸ್ಟ್‍ನ ಪ್ರಧಾನ ಪೋಷಕ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಅಮ್ಮ ಕಿಡ್ಸ್, ಕರ್ನಾಟಕ ಚಿತ್ರಕಲಾ ಆಕಾಡೆಮಿ ಮೈಸೂರು ಆಯೋಜಿಸಿದ್ದ ಶ್ರೀ ನಂಜಮ್ಮ ಮೋಟೆಗೌಡ ಸ್ಮರಣಾರ್ಥ “ಪರಿಸರ” ಕುರಿತ 3ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಪ್ಲಾಸ್ಟಿಕ್ ಬಳಿಕೆಯಿಂದ ಪರಿಸರ ಮಾಲಿನ್ಯ ಗೊಳ್ಳುತ್ತಿರುವುದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ತಾಪಮಾನ ಹೆಚ್ಚಳಗೊಳ್ಳಲು ಇದು ಪ್ರಮುಖ ಕಾರಣ. ಪ್ಲಾಸ್ಟಿಕ್ ಮುಕ್ತ ಭಾರತದೊಂದಿಗೆ ಪ್ಲಾಸ್ಟಿಕ್ ಮುಕ್ತ ಪ್ರಪಂಚ ವನ್ನಾಗಿಸಲು ಮುಂದಾಗೋಣ ಎಂದು ತಿಳಿಸಿದರು.

ಪ್ರಪಂಚದಲ್ಲಿ ಪರಿಸರವೇ ದೊಡ್ಡ ಸಂಪತ್ತು. ಈ ಸಂಪತ್ತನ್ನು ಉಳಿಸಿ, ಬೆಳೆಸಿದರೆ ಮಾತ್ರ ಸಕಲ ಜೀವರಾಶಿ ಉಳಿದುಕೊಳ್ಳುವುದು. ಮನುಷ್ಯನ ದುರ್ಬುದ್ದಿಗೆ ಪರಿಸರ ನಾಶವಾಗುತ್ತಿರುವುದರ ಪರಿಣಾಮ ಎದುರಿಸುವಂತಾಗಿದೆ ಎಂದು ನುಡಿದರು. 2018ರಲ್ಲಿ ವಿಶ್ವಸಂಸ್ಥೆ ಭಾರತ ದೇಶವನ್ನು ಪರಿಸರ ಅತಿಥಿ ರಾಷ್ಟ್ರವನ್ನಾಗಿ ಘೋಷಿಸಿದೆ. ಭಾರತೀಯರಾದ ನಾವು ಪರಿಸರ ಉಳಿಸಿ ಬೆಳೆಸಲು ಮುಂದಾಗಿ, ಬಳಸಿ ಬಿಸಾಡುವ ತ್ಯಾಜ್ಯಗಳನ್ನು ಮನೆಯಲ್ಲೇ ಸಂಗ್ರಹಿಸುವುದು ಅಗತ್ಯವಿದೆ ಎಂದರು.
ಇದೇ ಸಂದರ್ಭ ವಿವಿಧ ಶಾಲಾ ವಿದ್ಯಾರ್ಥಿಗಳು ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಭವಿಷ್ಯದ ನೀರಿಲ್ಲದ ಭೂಮಿ, ನೀರಿಗಾಗಿ ಯುದ್ಧ, ಅರಣ್ಯ ನಾಶ, ಮಳೆ ಇಲ್ಲದೆ ಒಣಗಿದೆ ಬೆಳೆ, ಸೂರ್ಯೋದಯ, ಪರಿಸರದಲ್ಲಿ ಪ್ರಾಣಿ-ಪಕ್ಷಿಗಳ ಜೀವನ ಕ್ರಮ, ಹಸಿರು ಭೂಮಿ ರಕ್ಷಣೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಚಿತ್ರಗಳನ್ನು ಕುಂಚದಲ್ಲಿ ಚಿತ್ರಿಸಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನ್ಯಾಟ್ಯ ವಿಧೂಷಿ ಸುನೀತಾ ನಂದ ಕುಮಾರ್, ಕಾರ್ಯದರ್ಶಿ ಅನಿಲ್‍ಕುಮಾರ್ ಮತ್ತಿತರರಿದ್ದರು.

Translate »