ಗ್ರಾಪಂ ಸದಸ್ಯನ ಮೇಲೆ ಹಲ್ಲೆ
ಮಂಡ್ಯ

ಗ್ರಾಪಂ ಸದಸ್ಯನ ಮೇಲೆ ಹಲ್ಲೆ

July 23, 2018

ಕೆ.ಆರ್.ಪೇಟೆ: ಮೂವರ ಗುಂಪೊಂದು ಗ್ರಾಪಂ ಸದಸ್ಯನ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ ನಗ-ನಾಣ್ಯ ದೋಚಿರುವ ಘಟನೆ ತಾಲೂಕಿನ ಕಿಕ್ಕೇರಿ ಹೋಬಳಿಯ ಬಿದರಹಳ್ಳಿ ಗೇಟ್ ಬಳಿಯ ಫಾರಂ ಹೌಸ್ ಹತ್ತಿರ ಶುಕ್ರವಾರ ನಡೆದಿದೆ. ತಾಲೂಕಿನ ಕಿಕ್ಕೇರಿ ಹೋಬಳಿಯ ಹೊಳೆ ಮಾರ್ಗೋನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಜ್ಜೇಗೌಡ(48) ಗಾಯಗೊಂಡವರು.

ವಿವರ: ಚನ್ನರಾಯಪಟ್ಟಣಕ್ಕೆ ಹೋಗಿದ್ದ ಅಜ್ಜೇಗೌಡರು ಶುಕ್ರವಾರ ರಾತ್ರಿ 10 ಗಂಟೆ ವೇಳೆ ಬೈಕಿನಲ್ಲಿ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಹೊಳೆ ಮಾರ್ಗೋನ ಹಳ್ಳಿ ರಘು, ದಿನೇಶ್ ಮತ್ತು ಗೊರಗುಂಡಿ ರಾಜೇಗೌಡ ಅವರು ಬಿದರಹಳ್ಳಿ ಫಾರಂ ಹೌಸ್ ಬಳಿ ಬೈಕನ್ನು ಅಡ್ಡಗಟ್ಟಿ ಮಚ್ಚು ಮತ್ತು ಚಾಕುವಿನಿಂದ ಹಲ್ಲೆ ನಡೆಸಿ ಅಜ್ಜೇಗೌಡನ ಬಳಿ ಇದ್ದ ಒಂದು ಲಕ್ಷ ರೂ. ಹಾಗೂ ಚಿನ್ನದ ಉಂಗುರ ಮತ್ತು ವಾಚ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಸ್ತೆ ಬದಿಯಲ್ಲಿ ಗಾಯಗೊಂಡು ಬಿದಿದ್ದ ಅಜ್ಜೇಗೌಡ ಅವರನ್ನು ಸ್ಥಳೀಯರು ಚನ್ನರಾಯಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಹಲ್ಲೆಗೆ ಒಳಗಾಗಿರುವ ಅಜ್ಜೇಗೌಡ ಅವರ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಅಜ್ಜೇಗೌಡ ಅವರ ಪತ್ನಿ ಪುಟ್ಟಮ್ಮ ಅವರು ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಒತ್ತಾಯ: ಗ್ರಾಪಂ ಸದಸ್ಯ ಅಜ್ಜೇಗೌಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಗ್ರಾಮದ ಮುಖಂಡರಾದ ಕಾಳೇಗೌಡ, ಲಕ್ಷ್ಮಣ್, ಮಂಜು, ನರಸೇಗೌಡ ಮತ್ತಿತರರು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

Translate »