ಲಿಂಗಾಂಬುದಿ ಸೇರಿದಂತೆ 13 ಕೆರೆಗಳಿಗೆ ಕಾವೇರಿ ನೀರು
ಮೈಸೂರು

ಲಿಂಗಾಂಬುದಿ ಸೇರಿದಂತೆ 13 ಕೆರೆಗಳಿಗೆ ಕಾವೇರಿ ನೀರು

June 9, 2019

ಮೈಸೂರು: ಮೈಸೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಲಿಂಗಾಂಬುದಿ ಕೆರೆ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದ 13 ಕೆರೆಗಳಿಗೆ ಕೆಆರ್‍ಎಸ್ ಹಿನ್ನೀರಿನಿಂದ ನೀರು ತುಂಬಿಸುವ 50 ಕೋಟಿ ರೂ. ವೆಚ್ಚದ ಮಹತ್ತರ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಎರಡು ತಿಂಗ ಳೊಳಗೆ ಕಾಮಗಾರಿ ಆರಂಭವಾಗಲಿದೆ.

ಅಂತರ್ಜಲ ಕುಸಿತ, ಜಾನುವಾರುಗಳಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಯೋಜ ನೆಗೆ ಕ್ಯಾಬಿನೆಟ್‍ನಲ್ಲಿ ಫೆ.25ರಂದು ಅನು ಮೋದನೆ ಸಿಕ್ಕಿದೆ. ಮಾ.1ರಂದು ಆಡಳಿತಾ ತ್ಮಕ ಅನುಮೋದನೆ ದೊರೆತಿದೆ. ಜೂ.6 ರಂದು ಟೆಂಡರ್ ಪರಿಶೀಲನೆ ನಡೆದಿದ್ದು, ಐವರು ಗುತ್ತಿಗೆದಾರರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ.
ಗುತ್ತಿಗೆ ಕರಾರು ಸಿದ್ಧಪಡಿಸಲಾಗುತ್ತಿದೆ. ಈ ವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.

50 ಕೋಟಿ ರೂ: ಕೆಲ ವರ್ಷಗಳಿಂದ ಮಳೆ ಇಲ್ಲದೇ ಎಲ್ಲೆಡೆ ಬರದ ವಾತಾವರಣ ಸೃಷ್ಟಿಯಾಗಿತ್ತು. ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದರೆ, ಜಾನುವಾರುಗಳು ಕುಡಿಯಲು ನೀರಿಲ್ಲದ ಪರಿತಪಿಸಿದ್ದವು. ಕೆರೆಗಳು ಬತ್ತಿದ್ದರಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಆನಂದೂರಿನಿಂದ ಪೈಪ್‍ಲೈನ್ ಮೂಲಕ ಸರಬರಾಜಾಗುವ ನೀರು ಕರ್ಕನಹಳ್ಳಿ ಕೆರೆ, ಈರಪ್ಪನಕೊಪ್ಪಲು, ನಾಗವಾಲ ಕೆರೆ, ಬೆಳವಾಡಿ ಕೆರೆ, ಬೊಮ್ಮೆನಹಳ್ಳಿ ಕೆರೆ, ಸಾಹುಕಾರಹುಂಡಿ ಕೆರೆ, ಹುಯಿಲಾಳುನಲ್ಲಿರುವ ಎರಡು ಕೆರೆ, ಜಟ್ಟಿಹುಂಡಿ ಕೆರೆ, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ ಕೆರೆ, ಕೇರ್ಗಳ್ಳಿಕೆರೆ ಹಾಗೂ ಲಿಂಗಾಂಬುಧಿ ಕೆರೆಗೆ ಕ್ರಮವಾಗಿ ಬಂದು ಸೇರಲಿದೆ. ಕೆಆರ್‍ಎಸ್ ಹಿನ್ನೀರಿ ನಿಂದ ಲಿಂಗಾಬುಧಿ ಕೆರೆವರೆಗೆ 26.4 ಕಿ.ಮೀ. ದೂರ ಪೈಪ್‍ಲೈನ್ ಅಳವಡಿಸ ಲಾಗುತ್ತದೆ. ಆನಂದೂರು ಬಳಿಯಿರುವ ಆಲ್ಕಮ್ಮನ ದೇವಾಲಯದ ಸಮೀಪ ಹಿನ್ನೀರಿನಿಂದ ನೀರೆತ್ತುವ ಕೇಂದ್ರ(ಪಂಪಿಂಗ್ ಸ್ಟೇಷನ್) ನಿರ್ಮಿಸಲಾಗುತ್ತದೆ. ತೆರೆದ ಕಾಲುವೆ ಮೂಲಕ ನೀರು ಹರಿಸಿದರೆ ಪೋಲಾಗುವ ಸಾಧ್ಯತೆ ಇರುವುದರಿಂದ ಪೈಪ್‍ಲೈನ್‍ನಲ್ಲೇ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯ ಪೈಪ್‍ಲೈನ್‍ನಿಂದ ವಿವಿಧ ಕೆರೆಗಳಿಗೆ ಸಬ್ ಗ್ರಾವಿಟಿ ಲೈನ್ ನಿರ್ಮಿಸಲಾಗುತ್ತದೆ. ಈ ಕೆರೆಗಳು ಮುಖ್ಯ ಪೈಪ್‍ಲೈನ್‍ನಿಂದ 600 ಮೀಟರ್‍ನಿಂದ ಎರಡೂವರೆ ಕಿ.ಮೀ. ದೂರದಲ್ಲಿದ್ದು ಸಬ್ ಗ್ರಾವಿಟಿ ಲೈನ್ ನಿರ್ಮಿಸಲಾಗುತ್ತದೆ.

ಮೂರು ಮೋಟರ್ ಬಳಕೆ: ನೀರೆತ್ತುವ ಕೇಂದ್ರದಲ್ಲಿ 680 ಹೆಚ್‍ಪಿ ಸಾಮಥ್ರ್ಯದ ಮೂರು ಮೋಟರ್ ಅಳವಡಿಸಲಾಗುತ್ತದೆ. ಇದರಲ್ಲಿ 2 ಮೋಟರ್ ನೀರೆತ್ತುವುದಕ್ಕೂ, ಮತ್ತೊಂದನ್ನು ಸ್ಟಾಂಡ್‍ಬೈ ಆಗಿಯೂ ಬಳಸಿಕೊಳ್ಳಲಾಗುತ್ತದೆ. ನೀರೆತ್ತುವ ಕೇಂದ್ರದಿಂದ 16 ಕಿ.ಮೀ. ದೂರ 550 ಎಂಎಂ ಗಾತ್ರದ, 16ರಿಂದ 26 ಕಿ.ಮೀ.ವರೆಗೆ 450 ಎಂಎಂ ಸಾಮಥ್ರ್ಯದ ಪೈಪ್ ಬಳಸಲಾಗುತ್ತದೆ. ಈ ಕೇಂದ್ರ 110 ದಿನ ಮಾತ್ರ ನೀರೆತ್ತಲಿದೆ. ಎರಡು ಮೋಟರ್‍ನಿಂದ ಒಂದು ಸೆಕೆಂಡ್‍ಗೆ 36.04 ಕ್ಯೂಸೆಕ್ಸ್ ನೀರೆತ್ತಲಾಗುತ್ತದೆ. ದಿನಕ್ಕೆ 24,04 ಎಂಸಿಎಫ್‍ಟಿ(ಮಿಲಿಯನ್ ಕ್ಯುಬಿಕ್ ಫೀಟ್) ನೀರು 13 ಕೆರೆಗಳಿಗೆ ಹರಿಯಲಿದೆ.

ಮೂರು ಎಕರೆ ಭೂ ಸ್ವಾಧೀನ: ಪೈಪ್‍ಲೈನ್ ನಿರ್ಮಾಣಕ್ಕೆ 3 ಎಕರೆ ಭೂ ಸ್ವಾಧೀನ ಪಡಿಸಿಕೊಂಡು ಒಟ್ಟು ಯೋಜನೆಯ 50 ಕೋಟಿ ರೂ.ನಲ್ಲಿಯೇ ಭೂ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ. ಗುತ್ತಿಗೆ ಸಂಸ್ಥೆ ನೀರೆತ್ತುವ ಕೇಂದ್ರಗಳನ್ನು 5 ವರ್ಷ ನಿರ್ವಹಣೆ ಮಾಡಬೇಕಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷ ಬೇಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂ.ಟಿ.ಯೋಗೇಶ್ ಕುಮಾರ್

Translate »